ಸಾರಾಂಶ
ಕೇಂದ್ರ ಸರ್ಕಾರ ಅಧಿಕಾರ ವಿಕೇಂದ್ರೀಕರಣಕ್ಕೆ ಆದ್ಯತೆ ನೀಡುತ್ತಿಲ್ಲ. ರಾಜ್ಯಕ್ಕೆ ತೆರಿಗೆ ಪಾಲನ್ನು ಸರಿಯಾಗಿ ನೀಡುತ್ತಿಲ್ಲ ಎಂದು ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಕೇಂದ್ರ ಸರ್ಕಾರ ಅಧಿಕಾರ ವಿಕೇಂದ್ರೀಕರಣಕ್ಕೆ ಆದ್ಯತೆ ನೀಡುತ್ತಿಲ್ಲ. ರಾಜ್ಯಕ್ಕೆ ತೆರಿಗೆ ಪಾಲನ್ನು ಸರಿಯಾಗಿ ನೀಡುತ್ತಿಲ್ಲ ಎಂದು ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆ ಅವರ ನೆನಪಿಗಾಗಿ ಸಮಾಜವಾದಿ ಅಧ್ಯಯನ ಕೇಂದ್ರ ಗಾಂಧಿ ಭವನದಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಇಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಅಧಿಕಾರ ವಿಕೇಂದ್ರೀಕರಣ ಸರಿಯಾಗಿ ನಡೆಯುತ್ತಿಲ್ಲ. ರಾಜ್ಯಗಳಿಗೆ ಕೇಂದ್ರ ಸರ್ಕಾರವು ಸರಿಯಾಗಿ ತೆರಿಗೆ ಪಾಲನ್ನು ನೀಡುತ್ತಿಲ್ಲ. ಇಂತಿಷ್ಟು ತೆರಿಗೆ ಪಾಲನ್ನು ನೀಡಬೇಕು ಎಂದಿದ್ದರೂ ಇದರ ಪಾಲನೆ ಆಗುತ್ತಿಲ್ಲ. ಮತ್ತೊಂದೆಡೆ, ಕೇಂದ್ರ ಸರ್ಕಾರವು ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ದೊಡ್ಡ ಅಪಾಯ ಕಾದಿದೆ: ಮುಖ್ಯಮಂತ್ರಿಗಳ ಸಲಹೆಗಾರ ಬಿ.ಆರ್.ಪಾಟೀಲ್ ಮಾತನಾಡಿ, ರಾಮಕೃಷ್ಣ ಹೆಗಡೆ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯದಿದ್ದರೆ ದೊಡ್ಡ ಅಪಾಯ ಉಂಟಾಗಲಿದೆ. ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಮನ್ವಯತೆಗೆ ಸಂಬಂಧಿಸಿದಂತೆ ದಕ್ಷಿಣ ಭಾರತದ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದಿದ್ದರು. ಇದರ ಫಲವಾಗಿ ನಿವೃತ್ತ ನ್ಯಾಯಮೂರ್ತಿ ಸರ್ಕಾರೀಯಾ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಕೇಂದ್ರ ಮತ್ತು ರಾಜ್ಯಗಳ ನಡುವೆ ತಿಕ್ಕಾಟ ನಡೆಯುವುದು ಒಳ್ಳೆಯ ಬೆಳವಣಿಗೆಯಲ್ಲ. ಇದು ಒಕ್ಕೂಟ ವ್ಯವಸ್ಥೆಗೂ ಅಪಾಯಕಾರಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.ರಾಜ್ಯಸಭೆ ಮಾಜಿ ಸದಸ್ಯ ಎಲ್.ಹನುಮಂತಯ್ಯ, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್, ಸಾಹಿತಿ ಮುಕುಂದರಾಜ್ ಮತ್ತಿತರರು ಹಾಜರಿದ್ದರು.