ಸಾರಾಂಶ
ಮುಂಡರಗಿ: ರಾಜ್ಯದಲ್ಲಿ ಬರಗಾಲ ಆವರಿಸಿರುವುದರಿಂದ ಬರಪರಿಹಾರಕ್ಕಾಗಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು, ಶಾಸಕರಾದಿಯಾಗಿ ಎಲ್ಲರೂ ನಮ್ಮ ಪಾಲಿನ ಅನುದಾನ ನೀಡುವಂತೆ ಮನವಿ ಮಾಡಿಕೊಂಡರೂ ನಿರಾಕರಿಸಲಾಗಿದೆ. ರಾಜ್ಯದ ರೈತರಿಗೆ ಬರ ಪರಿಹಾರ ಸಿಗದಿರಲು ಕೇಂದ್ರ ಸರ್ಕಾರವೇ ಕಾರಣವಾಗಿದೆ ಎಂದು ಗದಗ-ಹಾವೇರಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಹೇಳೀದರು.
ಅವರು ಶನಿವಾರ ಗದಗ-ಹಾವೇರಿ ಲೋಕಸಭಾ ಚುನಾವಣೆ ಅಂಗವಾಗಿ ಮುಂಡರಗಿ ತಾಲೂಕಿನ ರೋಣ ಮತಕ್ಷೇತ್ರದ ಹಾರೋಗೇರಿ, ಮುರುಡಿ ಗ್ರಾಪಂ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು.ಅನುದಾನಕ್ಕಾಗಿ ರಾಜ್ಯ ಸರ್ಕಾರ ರೈತರ ಪರ ಹೋರಾಡುವುದಕ್ಕಾಗಿ ಸುಪ್ರೀಂಕೋರ್ಟಿ ಮೊರೆ ಹೋಗಿದೆ. ನಮ್ಮ ಕಾಂಗ್ರೆಸ್ ಸರ್ಕಾರ ಎಂದಿಗೂ ಕೊಟ್ಟ ಮಾತಿಗೆ ತಪ್ಪಲ್ಲ. ವಿಧಾನಸಭಾ ಚುನಾವಣೆ ಪೂರ್ವದಲ್ಲಿ ರಾಜ್ಯದ ಜನತೆಗೆ ನೀಡಿದ್ದ 5 ಗ್ಯಾರಂಟಿಗಳನ್ನು ತಕ್ಷಣವೇ ಜಾರಿಗೊಳಿಸುವ ಮೂಲಕ ನಮ್ಮದು ನುಡಿದಂತೆ ನಡೆಯುವ ಸರ್ಕಾರವೆಂದು ಮತ್ತೊಮ್ಮೆ ಸಾಬೀತು ಮಾಡಿದೆ. ಕಾಂಗ್ರೆಸ್ ಸರ್ಕಾರ ಜನತೆ ಬದುಕು ಕಟ್ಟಿಕೊಳ್ಳಲು ಮನೆ ಮನೆಗೆ ಶಕ್ತಿ ತುಂಬಿದೆ. ಬದಲಾವಣೆಗಾಗಿ ಈ ಬಾರಿ ಮತ್ತೆ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ತಾವು ಗದಗ-ಹಾವೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು, ಸಚಿವ ಎಚ್.ಕೆ. ಪಾಟೀಲ, ಶಾಸಕ ಜಿ.ಎಸ್. ಪಾಟೀಲ ಮಾರ್ಗದರ್ಶನದಲ್ಲಿ ನಿಮ್ಮೆಲ್ಲರ ಧ್ವನಿಯಾಗಿ ಲೋಕಸಭೆಯಲ್ಲಿ ಕೆಲಸ ಮಾಡುವುದಕ್ಕೆ ನಿಮ್ಮೆಲ್ಲರ ಆರ್ಶೀವಾದ ಬೇಕಾಗಿದ್ದು, ಎಲ್ಲರೂ ನನಗೆ ಮತ ನೀಡುವ ಮೂಲಕ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರೋಣ ಶಾಸಕ ಜಿ.ಎಸ್.ಪಾಟೀಲ ಮಾತನಾಡಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಎರಡು ಚುನಾವಣೆಗಳಲ್ಲಿ ಜನತೆಗೆ ಕೊಟ್ಟ ಮಾತಿಗೆ ತಪ್ಪಿದೆ. ಮೊದಲ ಚುನಾವಣೆಯಲ್ಲಿ ಪ್ರತಿಯೊಬ್ಬರ ಖಾತೆಗೆ ₹15 ಲಕ್ಷ ಹಾಕುವುದಾಗಿ ಹೇಳಿದ್ದರು. ಹಾಕಲಿಲ್ಲ, ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರು ಅದನ್ನು ಮಾಡಲಿಲ್ಲ. ಪ್ರಸ್ತುತ 5 ವರ್ಷವೂ ಯಾವುದೇ ಅಭಿವೃದ್ಧಿ ಮಾಡಲಿಲ್ಲ. ಇದೀಗ ಮತ್ತೆ 3ನೇ ಬಾರಿ ಅಧಿಕಾರ ಹಿಡಿಯಲು ನಿಮ್ಮ ಬಳಿ ಬಂದಿದ್ದು, ಅವರಿಗೆ ತಕ್ಕ ಪಾಠ ಕಲಿಸಬೇಕು. ಬಿಜೆಪಿ ಸರ್ಕಾರ ಕೇವಲ ಬಂಡವಾಳ ಶಾಹಿಗಳ ಪರವಾಗಿದೆ. ಬಡವರು, ಹಿಂದುಳಿದವರ ಧ್ವನಿ ಎಂದರೆ ಅದು ನಮ್ಮ ಕಾಂಗ್ರೆಸ್ ಸರ್ಕಾರ ಮಾತ್ರ. 5 ಗ್ಯಾರಂಟಿಗಳಿಗಾಗಿ ₹39 ಸಾವಿರ ಕೋಟಿ ಖರ್ಚು ಮಾಡಿದ್ದೇವೆ. ಮುಂದಿನ ವರ್ಷಕ್ಕಾಗಿ 50 ಸಾವಿರ ಕೋಟಿ ಬಜೆಟ್ ನಲ್ಲಿ ಕಾಯ್ದಿರಿಸಿದ್ದೇವೆ. ಶೀಘ್ರದಲ್ಲಿಯೇ ರಾಜ್ಯ ಸರ್ಕಾರದಿಂದ 3 ಲಕ್ಷ ನಿರಾಶ್ರಿತರಿಗೆ ಮನೆ ಕಟ್ಟಿ ಕೊಡಲಿದ್ದೇವೆ. ಅದರಲ್ಲಿ ಮುರುಡಿ, ಹಾರೋಗೇರಿ ಹಾಗೂ ಹಿರೇವಡ್ಡಟ್ಟಿ ಗ್ರಾಪಂ ವ್ಯಾಪ್ತಿಗೆ ತಲಾ 100 ಮನೆಗಳನ್ನು ವಿತರಿಸಲಾಗುವುದು. ಕೇಂದ್ರದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ದೇಶದ ಎಲ್ಲ ರೈತರ ಸಾಲ ಮನ್ನಾ, ಮಹಿಳೆಯರಿಗೆ ವರ್ಷಕ್ಕೆ ₹1 ಲಕ್ಷ ನೀಡುವ ಮಹಾಲಕ್ಷ್ಮಿ ಯೋಜನೆ ಸೇರಿದಂತೆ ವಿವಿಧ ಜನಪರ ಯೋಜನೆ ಜಾರಿಗೆ ತರಲಿದ್ದು, ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರಿಗೆ ಮತ ನೀಡಿ ಹೆಚ್ಚಿನ ಅಭಿವೃದ್ಧಿಗೆ ಕಾರಣೀಕರ್ತರಾಗಬೇಕು ಎಂದರು.ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ಕಳೆದ ಬಾರಿ ರಾಜ್ಯದಿಂದ 27 ಜನ ಸಂಸದರು ಚುನಾಯಿತರಾದರೂ ರಾಜ್ಯದಲ್ಲಿ ಯಾವುದೇ ಅಭಿವೃದ್ದಿ ಕಾರ್ಯಗಳಾಗಿಲ್ಲ. ರಾಜ್ಯದ ಸಂಸದರು ಅಲ್ಲಿ ಹೋಗಿ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುವ ಬದಲು ಕೇವಲ ಅಧಿಕಾರ ಅನುಭವಿಸಿದ್ದಾರೆ. ಆನಂದಸ್ವಾಮಿ ಗಡ್ಡದೇವರಮಠ ಆಯ್ಕೆಯಾದರೆ ನಮ್ಮ ಭಾಗಗಳಲ್ಲಿನ ರೈಲ್ವೆ, ರೈತರ ಸಾಲಮನ್ನಾ ಸೇರಿದಂತೆ ವಿವಿಧ ರೀತಿಯ ಅನುಕೂಲತೆಗಳು ದೊರೆಯುತ್ತವೆ. ಹೀಗಾಗಿ ಮತದಾರರು ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರಿಗೆ ಹೆಚ್ಚಿನ ಮತ ನೀಡಿ ಆರಿಸಿ ಕಳಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ತಿಮ್ಮರಡ್ಡೆಪ್ಪ ಮೇಟಿ ಸೇರಿದಂತೆ ಅನೇಕರು ಮಾತನಾಡಿದರು. ಈ ಸಂದರ್ಭದಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಕಮೀಟಿ ಅಧ್ಯಕ್ಷ ಡಿ.ಡಿ. ಮೋರನಾಳ, ಕಾರ್ಯದರ್ಶಿ ಶೇಖರ ಜುಟ್ಲನ್ನವರ, ಜಿಪಂ ಮಾಜಿ ಅಧ್ಯಕ್ಷ ಶೋಭಾ ಮೇಟಿ, ಗ್ರಾಪಂ ಅಧ್ಯಕ್ಷ ಪಾಟೀಲ, ಉಪಾಧ್ಯಕ್ಷ ಮಂಜವ್ವ ವಡ್ಡರ, ಬಸವರಾಜ ಕಣವಿ, ರವೀಂದ್ರ ಜವಿ, ಎಸ್.ಡಿ. ಮಕಾಂದಾರ, ಸೀತಾ ಬಸಾಪೂರ, ಡಿ.ಎಂ. ಕಾತರಕಿ, ಸುರೇಶ ಮಾಗಡಿ, ಎಂ.ಯು. ಮಕಾಂದಾರ, ಮಂಜುನಾಥ ಮುಂಡವಾಡ, ಭುವನೇಶ್ವರಿ ಕಲ್ಲಕುಟಗರ್, ಯಲ್ಲಪ್ಪ ಹೂಲಗೇರಿ, ಸುರೇಶ ಮಾಳಗಿಮನಿ, ಅಮರೇಶ ಹಿರೇಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.