ಸಾರಾಂಶ
ಧಾರವಾಡ: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಂಗವಿಕಲರಿಗೆ ಅಗತ್ಯವಿರುವ ಸಲಕರಣೆ ಹಾಗೂ ಸೌಲಭ್ಯಗಳನ್ನು ತಲುಪಿಸುವ ಮೂಲಕ ಅವರಲ್ಲಿ ಆತ್ಮವಿಶ್ವಾಸ, ಜೀವನೋತ್ಸಾಹ ತುಂಬುವ ಕಾರ್ಯ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಇಲ್ಲಿಯ ಹೆಬ್ಬಳ್ಳಿಯಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ರಾಷ್ಟ್ರೀಯ ವಯೋಶ್ರೀ ಯೋಜನೆ ಅಡಿ 136 ಹಿರಿಯ ನಾಗರಿಕರಿಗೆ ಹಾಗೂ ಅಡಿಪ್ ಯೋಜನೆ ಅಡಿ 22 ಅಂಗವಿಕಲರಿಗೆ ₹14.60 ಲಕ್ಷ ವೆಚ್ಚದಲ್ಲಿ ಬ್ಯಾಟರಿ ಸೈಕಲ್ ಹಾಗೂ ಇತರ ಸಲಕರಣೆಗಳನ್ನು ವಿತರಿಸಿ ಮಾತನಾಡಿದರು.ಎಲ್ಲ ಅಂಗಗಳು ಸರಿಯಾಗಿದ್ದರೂ ಸಾಕಷ್ಟು ಜನರು ಸಾಲ, ಪರೀಕ್ಷೆಯಲ್ಲಿ ಅನುತ್ತೀರ್ಣ, ಪ್ರೀತಿಯಲ್ಲಿ ವಿಫಲ ಸೇರಿದಂತೆ ಅನವಶ್ಯಕ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆದರೆ, ನನ್ನ ಕಣ್ಣು ಸರಿಯಿಲ್ಲ, ಕಿವಿ ಕೇಳೋದಿಲ್ಲ ಅಂತಹ ಕಾರಣಗಳಿಂದ ಅಂಗವಿಕಲರು ಆತ್ಮಹತ್ಯೆ ಮಾಡಿಕೊಂಡಿರುವ ಉದಾಹರಣೆಗಳಿಲ್ಲ. ಹೀಗಾಗಿ ಸ್ವಾವಲಂಬಿಯಾಗಿ ಬದುಕುತ್ತಿರುವ ಇಂತಹ ಅಂಗವಿಕಲರು, ದಿವ್ಯಾಂಗರಿಗೆ ಜೀವನದಲ್ಲಿ ಮತ್ತಷ್ಟು ಆತ್ಮವಿಶ್ವಾಸ ತುಂಬಲು ಕೇಂದ್ರ ಸರ್ಕಾರ ಹಲವು ಯೋಜನೆಗಳ ಮೂಲಕ ಅವರ ಬದುಕಿಗೆ ಆಸರೆಯಾಗಿದೆ ಎಂದರು.
ರೈತರಿಗೆ ಫಸಲ್ ಬಿಮಾ ಯೋಜನೆ ಜಾರಿ ಮಾಡಿದ್ದು, ಕಳೆದ ವರ್ಷ ದೇಶದಲ್ಲಿ ರೈತರು 12 ಸಾವಿರ ಕೋಟಿ ಪ್ರಿಮಿಯಂ ಹಣ ಕಟ್ಟಿದ್ದು, ಸರ್ಕಾರವು ₹70 ಸಾವಿರ ಕೋಟಿ ಕಟ್ಟಿದೆ. 23 ಕೋಟಿ ರೈತರಿಗೆ ₹1.75 ಲಕ್ಷ ಕೋಟಿ ವಿಮಾ ಜಮೆಯಾಗಿದೆ. ಕಿಸಾನ್ ಕ್ರಿಡಿಟ್ ಕಾರ್ಡ್‌ಗೆ ಶೇ. 4ರಷ್ಟು ಬಡ್ಡಿದರ ಸಾಲವನ್ನು ₹3 ಲಕ್ಷ, ₹5 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ₹1 ಲಕ್ಷ ಕೋಟಿ ವೆಚ್ಚದಲ್ಲಿ ಕೃಷಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. ಕೃಷಿ ಸಿಂಚಾಯಿ ಯೋಜನೆ, ಗ್ರಾಮ ಸಡಕ್, ಖಾತ್ರಿ ಯೋಜನೆ ಮೂಲಕ ದೇಶದ ರೈತರಿಗೆ ಸಾಕಷ್ಟು ಆರ್ಥಿಕ ಸೌಲಭ್ಯಗಳನ್ನು ಸಹ ಕೇಂದ್ರವು ಒದಗಿಸಿದೆ ಎಂದು ಜೋಶಿ ಕೇಂದ್ರದ ಸಾಧನೆಯನ್ನು ಹೇಳಿಕೊಂಡರು.ಮಾಜಿ ಶಾಸಕ ಅಮೃತ ದೇಸಾಯಿ ಮಾತನಾಡಿ, ಲೋಕಸಭಾ ಕ್ಷೇತ್ರ ದೊಡ್ಡದಿರುವ ಕಾರಣ ಈ ಮೊದಲಿನ ಸಂಸದರು ಮತದಾನದ ಸಮಯದಲ್ಲಿ ಮಾತ್ರ ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದರು. ಆದರೆ, ಪ್ರಹ್ಲಾದ ಜೋಶಿ ಅವರು ಸಂಸದರಾಗಿ, ಕೇಂದ್ರ ಸಚಿವರಾಗಿ ಇಡೀ ದೇಶದ ಜವಾಬ್ದಾರಿ ಇದ್ದರೂ ಹಳ್ಳಿಹಳ್ಳಿಗೆ ಭೇಟಿ ನೀಡಿ ಅಲ್ಲಿಯ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುತ್ತಾರೆ. ಜತೆಗೆ ವಿಶೇಷ ಆಸಕ್ತಿ ವಹಿಸಿ ಸರ್ಕಾರದ ಅನುದಾನ ಅಲ್ಲದೇ ಸಿಎಸ್‌ಆರ್ ಮೂಲಕ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮುಂದಾಗಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಗ್ರಾಮದ ಕಸ ನಿರ್ವಹಣಾ ಘಟಕ ಹಾಗೂ ಶಾಲಾ ಕೊಠಡಿಗಳನ್ನು ಸಚಿವ ಜೋಶಿ ಉದ್ಘಾಟಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ, ಮುಖಂಡರಾದ ಶಂಕರಕೋಮಾರ ದೇಸಾಯಿ, ಶಂಕರ ಮುಗದ, ಗ್ರಾಪಂ ಅಧ್ಯಕ್ಷ ವಿಠ್ಠಲ ಭೋವಿ, ಉಪಾಧ್ಯಕ್ಷೆ ಸುಶೀಲಮ್ಮ ಸಾಲಿ, ಗುರುನಾಥ ಗೌಡರ, ಬಸವರಾಜ ಮಾದನಬಾವಿ, ಬಸವರಾಜ ತಂಬಾಕದ ಇದ್ದರು. ಮಹೇಶ ಜೋಶಿ ಕಾರ್ಯಕ್ರಮ ನಿರೂಪಿಸಿದರು.