ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ನಡೆಸುತ್ತಿರುವ ರೈತರನ್ನು ಕೇಂದ್ರ ಸರ್ಕಾರ ಶತ್ರುಗಳಂತೆ ಕಾಣುತ್ತಿದೆ. ಅನ್ನದಾತರ ಮೇಲೆ ಅಮಾನವೀಯವಾಗಿ ವರ್ತಿಸುತ್ತಿದೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯೂರೋ ಸದಸ್ಯೆ ಬೃಂದಾ ಕಾರಟ್ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಸಿಲ್ವರ್ ಜ್ಯೂಬಿಲಿ ಉದ್ಯಾನವನದಲ್ಲಿ ಭಾನುವಾರ ಭಾರತೀಯ ಕಮ್ಯುನಿಸ್ಟ್ ಪಕ್ಷದ ವತಿಯಿಂದ ಆಯೋಜಿಸಿದ್ದ ಶ್ರಮಜೀವಿಗಳ ಸಮಾವೇಶದಲ್ಲಿ ಪ್ರಧಾನ ಭಾಷಣ ಮಾಡಿ ಮಾತನಾಡಿ, ದೆಹಲಿಗೆ ರೈತರು ಬರುವುದನ್ನು ತಡೆಯಲು ಬ್ಯಾರಿಕೇಡ್ ಅಳವಡಿಸಿದೆ. ರೈತರ ಮೇಲೆ ಲಾಠಿ ಪ್ರಹಾರ ನಡೆಸಿ ಗುಂಡು ಹೊಡೆಯಲಾಗುತ್ತಿದೆ. ಇದರ ನಡುವೆ ರಕ್ಷಣಾ ಉದ್ದೇಶಕ್ಕೆ ಬಳಸುವ ಡ್ರೋನ್ ಮೂಲಕ ಟಿಯರ್ ಗ್ಯಾಸ್ ಸಿಡಿಸಿ ಶತ್ರುಗಳ ರೀತಿ ರೈತರನ್ನು ತಡೆಯುವ ಪ್ರಯತ್ನ ಮಾಡುತ್ತಿದೆ ಎಂದು ಟೀಕಿಸಿದರು.ಕೃಷಿಯಲ್ಲಿ ಯಂತ್ರೋಪಕರಣಗಳನ್ನು ಬಳಸುತ್ತಿರುವುದರಿಂದ ಮಹಿಳೆಯರ ಉದ್ಯೋಗ ಪಡೆಯುತ್ತಿರುವ ಪ್ರಮಾಣ ಕ್ಷೀಣಿಸಿದೆ. ಪ್ರತಿದಿನ ಹೊರಗೆ ಕೆಲಸ ಹುಡುಕುವಂತಾಗಿದೆ. ಇಂತಹ ಸ್ಥಿತಿ ಇರುವುದರಿಂದ ಗ್ರಾಮೀಣ ಭಾಗದ ಮಹಿಳೆಯರು ದುಡಿಯಲು ಹೋದರಷ್ಟೇ ಊಟ. ಇಲ್ಲವಾದರೆ ಉಪವಾಸ ಇರಬೇಕಿದೆ. ಆದರೆ, ಮೋದಿ ಸರ್ಕಾರ ಮಹಿಳೆಯರ ಶಕ್ತಿಯ ಬಗ್ಗೆ ಮಾತನಾಡುತ್ತಿದೆ. ಕೇಂದ್ರ ಸರ್ಕಾರಕ್ಕೆ ಮಹಿಳೆಯರ ಶಕ್ತಿ ಏನೆಂಬುದೇ ಗೊತ್ತಿಲ್ಲ ಎಂದು ಟೀಕಿಸಿದರು.
ಮೋದಿ ಅವರಿಗೆ ಗೊತ್ತಿದ್ದರೆ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಹಿಳೆಯರ ಪಾತ್ರ ಏನು ಎನ್ನುವುದು ತಿಳಿಯುತ್ತಿತ್ತು, ಗ್ರಾಮೀಣ ಭಾಗದಲ್ಲಿರುವ ಉದ್ಯೋಗ ಖಾತ್ರಿ ಯೋಜನೆಯು ಮಹಿಳೆಯರ ಜೀವಾನಾಧಾರವಾಗಿದೆ, ಮೋದಿ ಸರ್ಕಾರ ಈ ಜೀವನಾಧಾರವನ್ನು ಕತ್ತರಿಸಿ ಹಾಕುತ್ತಿದೆ. ೧೦೦ ದಿನದ ಕೆಲಸ ಕೊಡಬೇಕು ಎನ್ನುವ ಉದ್ಯೋಗ ಖಾತ್ರಿಯೋಜನೆಯನ್ನೇ ಗುಡಿಸಿ ಗುಂಡಾಂತರ ಮಾಡಲು ಬುಲ್ಡೋಜರ್‌ನಿಂದ ನಾಶ ಮಾಡುತ್ತಿದೆ ಎಂದು ಆರೋಪಿಸಿದರು.ಕಳೆದ ವರ್ಷ ಮೋದಿ ಸರ್ಕಾರ ಉದ್ಯೋಗ ಖಾತ್ರಿಯೋಜನೆಯ ಶೇ.೩೦ ರಷ್ಟು ಕೆಲಸದ ದಿನಗಳನ್ನು ಕಡಿತಗೊಳಿಸಿದರು, ಮತ್ತೆ ಈ ಬಾರಿಯೂ ಕಡಿತಗೊಳಿಸಿದೆ. ಮಂಡ್ಯದಲ್ಲಿ ಮಾತ್ರವಲ್ಲ. ಇಡೀ ದೇಶದಲ್ಲಿಯೇ ಕೇವಲ ೪೪ ದಿವಸ ಕೆಲಸ ನೀಡಲಾಗುತ್ತಿದೆ. ಇದು ನಿಮ್ಮ ಹಕ್ಕು, ಕಾನೂನು ಬದ್ಧವಾಗಿರುವ ಹಕ್ಕು, ಯಾವಾಗ ಕೆಲಸ ಬೇಕು ಎನ್ನಿಸುತ್ತದೋ ಆಗ ಕೆಲಸ ಪಡೆಯುವುದು ನಿಮ್ಮ ಹಕ್ಕಾಗಿದೆ, ಏಕೆ ನಾವು ೧೦೦ ದಿನ ಕೆಲಸ ಪಡೆಯಲು ಆಗುತ್ತಿಲ್ಲ, ವರ್ಷದ ಪೂರ್ತಿ ಕೆಲಸ ಕೊಡಬೇಕು ಎನ್ನುವುದೇ ನಮ್ಮ ಆಗ್ರಹ ಎಂದು ಒತ್ತಾಯಿಸಿದರು.
ಕಾನೂನು ಬದ್ಧವಾಗಿ ಕೆಲಸ ಮುಗಿದ ೧೫ ದಿನದೊಳಗೆ ಹಣ ನೀಡಬೇಕು. ಕಳೆದ ಅಕ್ಟೋಬರ್ ತಿಂಗಳಿಂದ ಮಂಡ್ಯ ಕೂಲಿಕಾರರಿಗೆ ಕೂಲಿ ಹಣ ನೀಡಿಲ್ಲ. ಉಳಿಸಿಕೊಂಡಿರುವ ಕೂಲಿ ಹಣವೇ ೧೩ ಕೋಟಿ ರು. ಇದೆ. ಮಹಿಳೆಯರ ಕೂಲಿ ಹಣ ಕೊಡಲು ಸಾಧ್ಯವಾಗದಿದ್ದ ಮೇಲೆ ನಾರಿಶಕ್ತಿ ಬಗ್ಗೆ ಮಾತನಾಡಲು ಇವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.ಮೋದಿ ಅವರಿಗೆ ಮಹಿಳೆಯರ ಶಕ್ತಿ ಬಗ್ಗೆ ನಂಬಿಕೆಯಿಲ್ಲ, ಉದ್ಯಮಿಗಳ ಶಕ್ತಿ ಬಗ್ಗೆ ಮಾತ್ರ ನಂಬಿಕೆಯಿದೆ, ಕೋಟ್ಯಾಂತರ ಜನ ಕೆಲಸ ಮಾಡಿರುವಂತಹ ಉದ್ಯೋಗ ಖಾತ್ರಿ ಯೋಜನೆಗೆ ಕೇವಲ ೮೪ ಸಾವಿರ ಕೋಟಿ ರು. ಕೊಟ್ಟಿದ್ದಾರೆ. ಆದರೆ ಕೆಲವೇ ಕೆಲವು ಉದ್ಯಮಪತಿಗಳಿಗೆ ಅವರ ತೆರಿಗೆ ಮನ್ನಾ, ಸಾಲ ಮನ್ನಾ ಮಾಡಲು ಲಕ್ಷಾಂತರ ಕೋಟಿ ಹಣವನ್ನು ಮೋದಿ ಸರ್ಕಾರ ಎತ್ತಿಟ್ಟಿದೆ ಎಂದು ಹರಿಹಾಯ್ದರು.
ಸಿಪಿಐಎಂ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಬಸವರಾಜು ಮಾತನಾಡಿ, ನಮ್ಮ ಕಾಂಗ್ರೆಸ್ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಐದು ಕೆಜಿ ಅಕ್ಕಿ ಕೊಡಿ ಎಂದು ಕೇಳಿದರೆ ಕೇವಲ ಐದು ಕಾಳು ಮಂತ್ರಾಕ್ಷತೆ ಕೊಟ್ಟು ಮಾಯ ಮಾಡುವ ಕೆಲಸ ಮಾಡಿದೆ, ರಾಜ್ಯದ ಸಂಸದರು ಹಾಗೂ ಕೇಂದ್ರ ಮಂತ್ರಿಗಳ ಕೈಯಲ್ಲಿ ಬರಗಾಲದ ನಿವಾರಣೆಗೆ ಒಂದು ಪೈಸೆ ಕೊಡಲಿಲ್ಲ, ಕಾಂಗ್ರೆಸ್ ಸರ್ಕಾರಕ್ಕೆ ಕೊಡಬೇಕಾದ ತೆರಿಗೆ ಕೊಡಿ, ಕರ್ನಾಟಕದ ಅಭಿವೃದ್ಧಿಗೆ ಬಿಜೆಪಿ ಮತ್ತು ಒಕ್ಕೂಟದ ಸರ್ಕಾರ ವಿರುದ್ಧವಾಗಿ ನಡೆಯುತ್ತಿದೆ ಎಂದು ವಿಷಾದಿಸಿದರು.ಸಿಪಿಐಎಂ ರಾಜ್ಯ ಸಮಿತಿ ಸದಸ್ಯ ಎಂ.ಪುಟ್ಟಮಾದು, ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ, ಮಂಡಳಿ ಸದಸ್ಯರಾದ ಸಿ.ಕುಮಾರಿ, ಭರತ್ರಾಜ್, ದೇವಿ, ಬಿ.ರಾಮಕೃಷ್ಣ, ಮುಖಂಡರಾದ ಗುರುಪ್ರಸಾದ್ ಕೆರಗೋಡು, ರಾಮಕೃಷ್ಣ, ಶೋಭಾ, ಸುಶೀಲಾ, ಬಿ.ಹನುಮೇಶ್ ಭಾಗವಹಿಸಿದ್ದರು.