ವಿದೇಶದ ಅಕ್ರಮ ಅಡಕೆ ಆಮದಿಗೆ ಕೇಂದ್ರ ಕಡಿವಾಣ ಭರವಸೆ: ಯಡಗೆರೆ ಸುಬ್ರಮಣ್ಯ

| Published : Mar 06 2024, 02:17 AM IST

ಸಾರಾಂಶ

ಕರ್ನಾಟಕ ರಾಜ್ಯ ಅಡಕೆ ಮಾರಾಟ ಸಹಕಾರ ಸಂಘಗಳ ಮಹಾ ಮಂಡಳದ ನೇತ್ರತ್ವದಲ್ಲಿ ವಿವಿಧ ಅಡಕೆ ಸಂಘಟನೆಗಳ ಅಧ್ಯಕ್ಷರು, ಅಧಿಕಾರಿಗಳ ನಿಯೋಗ ಸೋಮವಾರ ದೆಹಲಿಯಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿತು.

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಭಾರತ ದೇಶಕ್ಕೆ ಅಕ್ರಮವಾಗಿ ಅಡಕೆ ಆಮದಾಗಲು ಕೇಂದ್ರ ಸರ್ಕಾರ ಬಿಡುವುದಿಲ್ಲ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಭರವಸೆ ನೀಡಿದ್ದಾರೆ ಎಂದು ಕರ್ನಾಟಕ ರಾಜ್ಯ ಅಡಕೆ ಮಾರಾಟ ಸಹಕಾರ ಸಂಘಗಳ ಮಹಾ ಮಂಡಳದ ಅಧ್ಯಕ್ಷ ಹಾಗೂ ಮಾಮ್ ಕೋಸ್ ನಿರ್ದೇಶಕ ಯಡಗೆರೆ ಸುಬ್ರಮಣ್ಯ ತಿಳಿಸಿದ್ದಾರೆ.

ಅವರು ಮಂಗಳವಾರ ಪತ್ರಿಕಾ ಹೇಳಿಕೆ ನೀಡಿ, ಕರ್ನಾಟಕ ರಾಜ್ಯ ಅಡಕೆ ಮಾರಾಟ ಸಹಕಾರ ಸಂಘಗಳ ಮಹಾ ಮಂಡಳದ ನೇತ್ರತ್ವದಲ್ಲಿ ವಿವಿಧ ಅಡಕೆ ಸಂಘಟನೆಗಳ ಅಧ್ಯಕ್ಷರು, ಅಧಿಕಾರಿಗಳ ನಿಯೋಗ ಸೋಮವಾರ ದೆಹಲಿಯಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಅವರನ್ನು ಭೇಟಿ ಮಾಡಿ ಮನವಿ ಪತ್ರ ಅರ್ಪಿಸಿದ್ದೇವೆ. ವಿದೇಶದಿಂದ ಭಾರತಕ್ಕೆ ಕಾನೂನು ಬಾಹಿರವಾಗಿ ಅಡಕೆ ಆಮದಾಗುತ್ತಿರುವುದರಿಂದ ಅಡಕೆ ಧಾರಣೆ ಕುಸಿಯುತ್ತಿದೆ ಎಂಬುದನ್ನು ಸಚಿವರಿಗೆ ಮನವರಿಕೆ ಮಾಡಿಕೊಡಲಾಯಿತು. ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಶೇಖಡ 80 ರಷ್ಟು ಸಾಂಪ್ರದಾಯಿಕ ಅಡಕೆ ಬೆಳೆಗಾರರಿದ್ದು, ಬಹುತೇಕ ಅಡಕೆ ಬೆಳೆಗಾರರು ಸಣ್ಣ ರೈತರಿದ್ದಾರೆ. ಅಡಕೆ ಬೆಲೆ ಕುಸಿತದ ಪರಿಣಾಮದಿಂದ ಕಷ್ಟಕ್ಕೆ ಒಳಗಾಗಿದ್ದಾರೆ, ಅಕ್ರಮವಾಗಿ ಅಡಕೆ ಆಮದು ಆಗುತ್ತಿರುವುದರಿಂದ ಸರ್ಕಾರಕ್ಕೂ ದೊಡ್ಡ ಪ್ರಮಾಣದಲ್ಲಿ ತೆರಿಗೆ ನಷ್ಟವಾಗಲಿದೆ. ಇದರ ಜೊತೆಗೆ ವ್ಯಾಪಾರಿ ವಲಯದಲ್ಲೂ ಪರಿಣಾಮ ಬೀರುವುದರಿಂದ ತೆರಿಗೆ ಸಂಗ್ರಹದಲ್ಲಿ ಕುಸಿತವಾಗಲಿದೆ. ಆದ್ದರಿಂದ ಕಾನೂನುಬದ್ಧವಾಗಿ ವಿದೇಶದಿಂದ ಅಕ್ರಮವಾಗಿ ಅಡಕೆ ಆಮದಾಗುತ್ತಿರುವುದನ್ನು ತಡೆಗಟ್ಟಬೇಕು ಎಂದು ಸಚಿವರಿಗೆ ಒತ್ತಾಯಿಸಲಾಯಿತು ಎಂದು ಯಡಗೆರೆ ಸುಬ್ರಮಣ್ಯ ತಿಳಿಸಿದರು. ಕೇಂದ್ರ ಸಚಿವರು ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಭಾರತ ದೇಶಕ್ಕೆ ಅಕ್ರಮವಾಗಿ ಅಡಕೆ ಆಮದಾಗಲು ಬಿಡುವುದಿಲ್ಲ. ಕೇಂದ್ರ ಸರ್ಕಾರದಿಂದ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ.ಅಕ್ರಮವಾಗಿ ಅಡಕೆ ಆಮದಾಗುತ್ತಿರುವುದಕ್ಕೆ ತಡೆ ಹಾಕುವಂತೆ ದೇಶದ ಗಡಿಯಲ್ಲಿರುವ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡುತ್ತೇನೆ ಎಂದು ಭರವಸೆ ನೀಡಿದ್ದಾರೆ ಎಂದು ಯಡಗೆರೆ ಸುಬ್ರಮಣ್ಯ ತಿಳಿಸಿದರು. ಕೇಂದ್ರ ಸಚಿವರಿಗೆ ಮನವಿ ಸಲ್ಲಿಸುವ ಸಂದರ್ಭದಲ್ಲಿ ಕ್ರ್ಯಾಮ್‌ ಅಧ್ಯಕ್ಷ ಎಚ್‌.ಎಸ್‌.ಮಂಜಪ್ಪ ಹೊಸಬಾಳೆ, ಸಾಗರದ ಆಪ್ಕೋಸ್ ಅಧ್ಯಕ್ಷ ಇಂಧೂದರ ಗೌಡ, ಮಾಮ್ ಕೋಸ್‌ ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ್ ಬರುವೆ, ಶಿರಸಿಯ ಟಿ.ಎಸ್.ಎಸ್. ಪ್ರಧಾನ ವ್ಯವಸ್ಥಾಪಕ ವಿಜಯಾನಂದ ಭಟ್‌ ಉಪಸ್ಥಿತರಿದ್ದರು.