ಕರ್ನಾಟಕ ಬರ ಪರಿಹಾರ ಬಗ್ಗೆ ವಾರದಲ್ಲಿ ನಿರ್ಧಾರ: ಸುಪ್ರಿಂಗೆ ಕೇಂದ್ರ ಸರ್ಕಾರ ಅಫಿಡವಿಟ್‌

| Published : Apr 23 2024, 12:47 AM IST / Updated: Apr 23 2024, 08:18 AM IST

supreme court  1.jpg
ಕರ್ನಾಟಕ ಬರ ಪರಿಹಾರ ಬಗ್ಗೆ ವಾರದಲ್ಲಿ ನಿರ್ಧಾರ: ಸುಪ್ರಿಂಗೆ ಕೇಂದ್ರ ಸರ್ಕಾರ ಅಫಿಡವಿಟ್‌
Share this Article
  • FB
  • TW
  • Linkdin
  • Email

ಸಾರಾಂಶ

ಪರಿಹಾರಕ್ಕೆ ಚುನಾವಣಾ ಆಯೋಗ ಸಮ್ಮತಿಸಿದೆ ಎಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ತಿಳಿಸಿದ ಹಿನ್ನೆಲೆಯಲ್ಲಿ ವಿಚಾರಣೆ 29ಕ್ಕೆ ಮುಂದೂಡಿದ ಸುಪ್ರೀಂಕೋರ್ಟ್‌ ಕರ್ನಾಟಕಕ್ಕೆ ಸಿಹಿಸುದ್ದಿ ನೀಡುವ ಭರವಸೆಯಿದೆ.

 ನವದೆಹಲಿ : ಕರ್ನಾಟಕಕ್ಕೆ ಬರ ಪರಿಹಾರ ಬಿಡುಗಡೆ ವಿಚಾರವಾಗಿ ಸಿದ್ದರಾಮಯ್ಯ ಸರ್ಕಾರ ಮತ್ತು ಮೋದಿ ಸರ್ಕಾರದ ನಡುವಣ ಸಂಘರ್ಷ ತೀವ್ರವಾಗಿರುವಾಗಲೇ, ಕರ್ನಾಟಕ ಬರ ಪರಿಹಾರ ವಿಚಾರ ಸಂಬಂಧ ಒಂದು ವಾರದೊಳಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಕೇಂದ್ರ ಸರ್ಕಾರದ ಪರ ಅಟಾರ್ನಿ ಜನರಲ್‌ ಆರ್‌.ವೆಂಕಟರಮಣಿ ಅವರು ಸೋಮವಾರ ಸುಪ್ರೀಂ ಕೋರ್ಟ್‌ ಮುಂದೆ ಹೇಳಿಕೆ ನೀಡಿದ್ದಾರೆ.

ಸಂವಿಧಾನಬದ್ದವಾಗಿ ಕರ್ನಾಟಕಕ್ಕೆ ಬಿಡುಗಡೆ ಮಾಡಬೇಕಿದ್ದ ಬರ ಪರಿಹಾರವನ್ನು ಬಿಡುಗಡೆ ಮಾಡದೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ. ತೀವ್ರ ಬರದಿಂದ ಕಂಗೆಟ್ಟಿರುವ ಕರ್ನಾಟಕದ ರೈತರು ಕಂಗಾಲಾಗಿದ್ದಾರೆ. ಹಾಗಾಗಿ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಕರ್ನಾಟಕ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

ಈ ಅರ್ಜಿಯನ್ನು ನ್ಯಾ.ಬಿ.ಆರ್.ಗವಾಯಿ ಮತ್ತು ನ್ಯಾ.ಸಂದೀಪ್ ಮೆಹ್ತಾ ನೇತೃತ್ವದ ದ್ವಿಸದಸ್ಯ ಪೀಠ ವಿಚಾರಣೆ ನಡೆಸಿತು. ಇದೇ ವೇಳೆ ಕೇಂದ್ರ ಸರ್ಕಾರದ ಪರ ಹಾಜರಿದ್ದ ಅಟಾರ್ನಿ ಜನರಲ್ ಆರ್.ವೆಂಕಟರಮಣಿ ವಾದ ಮಂಡಿಸಿ, ಬರಪರಿಹಾರ ಬಿಡುಗಡೆ ಸಂಬಂಧ ಚುನಾವಣಾ ಆಯೋಗದ ಅನುಮತಿ ಕೇಳಲಾಗಿತ್ತು. ಅಲ್ಲಿಂದ ಉತ್ತರ ಬಂದಿದೆ. ಆಯೋಗ ಅನುಮತಿ ಕೊಟ್ಟಿದೆ. ಮುಂದಿನ ಸೋಮವಾರದೊಳಗೆ ಪರಿಹಾರ ಸಂಬಂಧ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು. ಹಿರಿಯ ವಕೀಲರ ಅಲಭ್ಯತೆ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಮುಂದೂಡುವಂತೆ ರಾಜ್ಯ ಸರ್ಕಾರದ ಪರ ವಕೀಲರು ಮನವಿ ಮಾಡಿದ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆಯನ್ನು ಏ.29ಕ್ಕೆ ಮುಂದೂಡಲಾಯಿತು.

ಕರ್ನಾಟದ ವಿಜಯ:

ನವದೆಹಲಿಯಲ್ಲಿ ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಕಂದಾಯ ಸಚಿವ ಕೃಷ್ಣಬೈರೇಗೌಡ, ಇದು ರಾಜ್ಯ ಸರ್ಕಾರದ ಹೋರಾಟಕ್ಕೆ ಸಂದ ಜಯ ಎಂದು ವಿಶ್ಲೇಷಿಸಿದರು.

ಬರಪರಿಹಾರ ಬಿಡುಗಡೆ ವಿಚಾರದಲ್ಲಿ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ. ಹಾಗಾಗಿ ಕೇಂದ್ರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದೆವು. ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್ ನ್ಯಾಯ ಪೀಠದ ಮುಂದೆ ಹೇಳಿಕೆ ನೀಡಿದ್ದು ಒಂದು ವಾರದ ಅವಧಿಯಲ್ಲಿ ಸಮಸ್ಯೆ ಬಗೆಹರೆಸುವ ಭರವಸೆ ನೀಡಿದೆ. ಕರ್ನಾಟಕಕ್ಕೆ ಬರಬೇಕಿದ್ದ ಪರಿಹಾರವನ್ನು ಕೋರ್ಟ್ ಮೂಲಕ ಪಡೆಯುವಂತಾಯಿತು. 18,177 ಕೋಟಿ ಪರಿಹಾರ ರಾಜ್ಯ ಸರ್ಕಾರ ಕೇಳಿತ್ತು. ಇದರಲ್ಲಿ 4,663 ಕೋಟಿ ರು. ಬಾರದ ಹಿನ್ನೆಲೆಯಲ್ಲಿ ರೈತರಿಗೆ ಬಿಡುಗಡೆ ಮಾಡಬೇಕಿತ್ತು. ಇಷ್ಟೂ ಹಣ ಬಂದರೆ ಒಬ್ಬೊಬ್ಬ ಅನ್ನದಾನಿಗೆ 13 ಸಾವಿರ ರು. ತನಕ ಪರಿಹಾರ ದೊರೆಯಲಿದೆ ಎಂದರು.

ಸುಪ್ರೀಂ ಕೋರ್ಟ್ ಮಧ್ಯಪ್ರವೇಶ ಮಾಡದಿದ್ದರೆ ಕೇಂದ್ರ ಸರ್ಕಾರ ಪರಿಹಾರ ಬಿಡುಗಡೆ ಮಾಡುತ್ತಿರಲಿಲ್ಲ. ಚುನಾವಣೆ ಹೊತ್ತಲ್ಲಿ ಬರ ಪರಿಹಾರ ಬಿಡುಗಡೆ ಮಾಡಿ ಅದರ ಲಾಭ ಪಡೆಯುವ ಉದ್ದೇಶ ನಮಗೆ ಇಲ್ಲ. ನಮಗೆ ರೈತರು ಮುಖ್ಯವೇ ಹೊರತು ರಾಜಕೀಯ ಅಲ್ಲ. ರೈತರಿಗೆ ಅನಿವಾರ್ಯ ಇದ್ದಾಗ ನಾವು ಪರಿಹಾರ ನೀಡಬೇಕು.

ಯಾರಿಗೆ ಲಾಭ ಅಥವಾ ಯಾರಿಗೆ ನಷ್ಟ ಎಂಬುದು ಮುಖ್ಯವಲ್ಲ. ನಮ್ಮನ್ನು ಟೀಕೆ ಮಾಡಲು ಅವರ ಬಳಿ ಒಂದೇ ಒಂದು ಅಂಶವೂ ಇಲ್ಲ. ಪರಿಹಾರದ ವಿಚಾರದಲ್ಲಿ ತಡವಾಗಿರುವುದು ಕೇಂದ್ರ ಸರ್ಕಾರದ ವತಿಯಿಂದಲೇ ಹೊರತು ಕರ್ನಾಟಕ ಸರ್ಕಾರದಿಂದ ಅಲ್ಲ. ಕೇಂದ್ರ ಸರ್ಕಾರವು ರಾಜ್ಯದ ವಿಚಾರದಲ್ಲಿ ಮಲತಾಯಿ ಧೋರಣೆ ತೋರುತ್ತಿದೆ ಎನ್ನುವುದಕ್ಕೆ ಇದೇ ಸಾಕ್ಷಿ. ಇಂಥ ಪ್ರಕರಣಗಳಲ್ಲಿ ಯಾಕೆ ರಾಜ್ಯಗಳು ಕೋರ್ಟಿಗೆ ಬರಬೇಕು ಎಂದು ಪೀಠ ಗಂಭೀರವಾಗಿ ಕೇಳಿದೆ ಎಂದರು.