ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು- ಬೆಂಗಳೂರು ಹೆದ್ದಾರಿಯ ಕೆಂಪೇಗೌಡ ವೃತ್ತದ ಬಳಿ (ಮಣಿಪಾಲ್ ಆಸ್ಪತ್ರೆ ಬಳಿ) ಫ್ಲೈ ಓವರ್ ನಿರ್ಮಾಣಕ್ಕೆ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅನುಮೋದನೆ ನೀಡಿದ್ದಾರೆ ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.ಈ ಸಂಬಂಧ ಶೀಘ್ರದಲ್ಲೇ ಟೆಂಡರ್ ಕರೆಯಲಾಗುವುದು. ಮೈಸೂರು- ಬೆಂಗಳೂರು ಹೈವೇಯಲ್ಲಿ ಬರುವ ಪ್ರಮುಖ ಪಟ್ಟಣಗಳಿಗೆ ಹೋಗಲು ಟೋಲ್ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಹೈವೇಯ ಎರಡು ಕಡೆ ಅಂಡರ್ ಪಾಸ್ ನಿರ್ಮಾಣ ಮಾಡಲಾಗುತ್ತದೆ. ಸುಮಾರು 711 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ ಎಂದರು.
ಬಂಡೀಪುರ ರಾತ್ರಿ ಸಂಚಾರ ನಿರ್ಬಂಧ ತೆರವು ಸಾಧ್ಯವಿಲ್ಲ. ಯಾವುದೇ ಕಾರಣಕ್ಕೂ ಇದಕ್ಕೆ ಅನುಮತಿ ನೀಡಲು ಸಾಧ್ಯವಿಲ್ಲ. ಕೇರಳ ಸರ್ಕಾರ ಕೂಡ ಐದು ಭಾರಿ ರಾತ್ರಿ ಸಂಚಾರ ನಿರ್ಬಂಧ ತೆರವು ಮಾಡುವಂತೆ ಮನವಿ ಮಾಡಿದೆ. ಈ ಹಿಂದೆ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ವೇಳೆಯೂ ಕೂಡ ರಾತ್ರಿ ಸಂಚಾರ ನಿರ್ಬಂಧ ತೆರವು ಸಾಧ್ಯವಿಲ್ಲ ಎಂದಿದ್ದರು. ಈಗ ಯಾಕೆ ಈ ರೀತಿ ಗೊಂದಲ ಸೃಷ್ಟಿ ಮಾಡಲಾಗುತ್ತಿದೆ ಎಂಬುದು ಗೊತ್ತಿಲ್ಲ ಎಂದರು.ಮುಡಾ ಹಗರಣ ಬಗ್ಗೆ ನಾವು ಸಂಸತ್ ನ ಬಜೆಟ್ ಅಧಿವೇಶನದಲ್ಲಿ ವಿಷಯ ಪ್ರಸ್ತಾಪ ಮಾಡಿದ್ದರು. ಆ ಸಮಯದಲ್ಲಿ ರಾಜ್ಯದಲ್ಲಿನ ಹಗರಣ ಬಗ್ಗೆ ಮಾತನಾಡಿದ್ದೆವು. ಅವಕಾಶ ಸಿಕ್ಕರೆ ಸಂಸತ್ ನಲ್ಲಿ ಮತ್ತೆ ಪ್ರಸ್ತಾಪಿಸಲಾಗುವುದು. ನಾವು ಇದನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಈ ಹಗರಣ ಆಚೆ ಬಂದ ದಿನದಿಂದಲೂ ಹೇಳುತ್ತಲೇ ಇದ್ದೇವೆ. ಆದರೂ ವಹಿಸಿಲ್ಲ ಎಂದರು.
ನಾವು ಜವಾಬ್ದಾರಿಯ ವಿರೋಧ ಪಕ್ಷವಾಗಿ ರಾಜ್ಯದಲ್ಲಿ ಕೆಲಸ ಮಾಡುತ್ತಿದ್ದೇವೆ. ರಾಜ್ಯದಲ್ಲಿ ಅಗುತ್ತಿರುವ ಆಡಳಿತ ದುರುಪಯೋಗದ ಕುರಿತು ನಾವು ಸದಾ ವಿಚಾರ ಮಾಡುತ್ತೇವೆ ಎಂದರು.ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಹತ್ತು ವರ್ಷವಾಗಿದೆ. ಈ ಅವಧಿಯಲ್ಲಿ ವಿಶ್ವದ ಆರ್ಥಿಕತೆಯಲ್ಲಿ ಭಾರತ ಐದನೇ ಸ್ಥಾನಕ್ಕೇರಿದೆ. ಜನರ ಬದುಕನ್ನು ಉತ್ತಮಗೊಳಿಸಲು ಹಲವು ಜನಪರ ಯೋಜನೆಗಳು ಜಾರಿಯಾಗಿವೆ. ನರೇಂದ್ರಮೋದಿ ಅವರು ಮೂರನೇ ಅವಧಿಗೆ ಪ್ರಧಾನಿಯಾದ ಬಳಿಕವೂ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾಧ್ಯಮ ಸಂಚಾಲಕ ಮಹೇಶ್ ರಾಜೇ ಅರಸ್ ಇದ್ದರು.