ಸಾರಾಂಶ
ಅನುದಾನ ಖೋತಾ ಆಗುವುದ ತಡೆಯಲು ಈ ಕ್ರಮ । 2018 ರ ದರಪಟ್ಟಿ ಆಧಾರದ ಮೇಲೆ 5300 ಕೋಟಿ ರು ಅನುದಾನ ನಿಗಧಿ
ಕನ್ನಡಪ್ರಭ ವಾರ್ತೆ ಚಿತ್ರದುರ್ಗಭದ್ರಾ ಮೇಲ್ದಂಡೆ ಯೋಜನಾ ವೆಚ್ಚದ ದರಪಟ್ಟಿ ಪರಿಷ್ಕರಣೆ ಮಾಡಿ ಅನುದಾನ ಬಿಡುಗಡೆಗೆ ಮರು ಪ್ರಸ್ತಾವನೆ ಸಲ್ಲಿಸುವಂತೆ ಕೇಂದ್ರ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.
ಜಲಸಂಪನ್ಮೂಲ ಸಚಿವರೂ ಆದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ನೇತೃತ್ವದ ಅಧಿಕಾರಿಗಳ ತಂಡ ಮಂಗಳವಾರ ನವದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ್ ಅವರನ್ನು ಭೇಟಿಯಾಗಿ ಭದ್ರಾ ಮೇಲ್ದಂಡೆಗೆ ಅನುದಾನ ಕೋರಿಕೆ ಪ್ರಸ್ತಾಪ ಮಂಡಿಸಿದಾಗ ಕೇಂದ್ರ ಈ ಸೂಚನೆ ನೀಡಿದೆ.ಡಿಸಿಎಂ ಡಿ.ಕೆ.ಶಿವಕುಮಾರ್ ಒಟ್ಟಿಗೆ ಸಭೆಯಲ್ಲಿ ಪಾಲ್ಗೊಂಡಿದ್ದ ಕೇಂದ್ರ ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ಅನುದಾನ ಬಿಡುಗಡೆಗೆ ಪ್ರಬಲ ಕೋರಿಕೆ ಮಂಡಿಸಿದ್ದಾರೆ. ತಾವು ಪ್ರತಿನಿಧಿಸುವ ತುಮಕೂರು ಕ್ಷೇತ್ರದ ವ್ಯಾಪ್ತಿಯಲ್ಲಿಯೂ ಯೋಜನೆ ಒಳಪಪಡುತ್ತದೆ. ಇದಲ್ಲದೇ ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲೆಯಲ್ಲಿಯೂ ನಮ್ಮವರೇ ಗೆದ್ದಿದ್ದಾರೆ. ಹಾಗಾಗಿ ಯೋಜನೆ ಪೂರ್ಣಗೊಳಿಸುವುದು ಅನಿವಾರ್ಯ. ಮೋದಿಯವರು ಚಿತ್ರದುರ್ಗದಲ್ಲಿ ಘೋಷಣೆ ಮಾಡಿದ್ದರೆಂಬ ಸಂಗತಿಯ ಸಿ.ಆರ್.ಪಾಟೀಲ್ ಗಮನಕ್ಕೆ ತಂದಿದ್ದಾರೆ.
ಈ ವೇಳೆ ಮಾತನಾಡಿದ ಕೇಂದ್ರ ಜಲಶಕ್ತಿ ಸಚಿವಾಲಯದ ಕಾರ್ಯದರ್ಶಿ ದೇಬಶ್ರೀ ಮುಖರ್ಜಿ ಅವರು, 2018ರ ದರಪಟ್ಟಿ ಆಧಾರದ ಮೇಲೆ ಯೋಜನಾ ವೆಚ್ಚ ನಿರ್ಧರಿಸಿ ಕೇಂದ್ರದ ನೆರವು ಘೋಷಿಸಲಾಗಿತ್ತು. ಮಾರ್ಚ್ 2022 ರವರೆಗೆ ಖರ್ಚು ಮಾಡಿದ ಅನುದಾನ ಆಧರಿಸಿ 5,300 ಕೋಟಿ ರು. ಕೇಂದ್ರದಿಂದ ಲಭ್ಯವಾಗಬೇಕಿತ್ತು. ಅಂದರೆ 14,697 ಕೋಟಿ ರು. ಒಟ್ಟಾರೆ ಯೋಜನಾ ವೆಚ್ಚದಲ್ಲಿ 5,528 ಕೋಟಿ ರು. ರಾಜ್ಯ ಸರ್ಕಾರ ಖರ್ಚು ಮಾಡಿತ್ತು. ಉಳಿದ 9,168 ಕೋಟಿ ರು. ಕೇಂದ್ರ ಸರ್ಕಾರ ತನ್ನ ಪಾಲಿನ ಶೇ.60ರಷ್ಟು ಮೊತ್ತ 5,501 ಕೋಟಿ ಕೊಡಬೇಕಾಗಿದ್ದು ಅದನ್ನು 5,300 ಕೋಟಿಗೆ ಸೀಮಿತಗೊಳಿಸಲಾಗಿತ್ತು.ಹಾಲಿ ಕೇಂದ್ರದಿಂದ ಅನುದಾನ ಬಿಡುಗಡೆ ಮಾಡಬೇಕಾದರೆ ಭದ್ರಾ ಮೇಲ್ದಂಡೆಗೆ ರಾಜ್ಯ ಸರ್ಕಾರ ಈವರೆಗೆ (ಜನವರಿ 2025) ಮಾಡಿದ ವೆಚ್ಚ, ಯೋಜನೆ ಪೂರ್ಣಗೊಳಿಸಲು ಬೇಕಾದ ಬಾಕಿ ಮೊತ್ತ ಲೆಕ್ಕಾಚಾರ ಹಾಕಬೇಕು.
ಕಳೆದ ವರ್ಷ ಮಾರ್ಚ್ ಅಂತ್ಯಕ್ಕೆ ಭದ್ರಾ ಮೇಲ್ದಂಡೆಗೆ 8,785 ಕೋಟಿ ರು. ಖರ್ಚು ಮಾಡಲಾಗಿದ್ದು 5,910 ಕೋಟಿ ರು. ಬಾಕಿ ಉಳಿಯುತ್ತದೆ. ಈ ಮೊತ್ತಕ್ಕೆ ಶೇ.60ರಷ್ಟು ಅನುದಾನವ ಕೇಂದ್ರ ಸರ್ಕಾರ ನೀಡಿದ್ದಲ್ಲಿ 3,546 ಕೋಟಿ ರು. ಮಾತ್ರ ಲಭ್ಯವಾಗುತ್ತದೆ. 1,754 ಕೋಟಿ ರು. ಖೋತಾವಾಗುತ್ತದೆ. ಈ ಖೋತಾವನ್ನು ಸರಿದೂಗಿಸಲು ದರಪಟ್ಟಿ ಪರಿಷ್ಕರಣೆ ಮಾಡಿ ಮರು ಪ್ರಸ್ತಾವನೆ ಸಲ್ಲಿಸಿದರೆ ಕ್ಯಾಬಿನೆಟ್‌ನಲ್ಲಿ ಇಟ್ಟು ಪಾಸ್ ಮಾಡಿಸಿ ಅನುದಾನ ಬಿಡುಗಡೆ ಮಾಡಿಸುವುದಾಗಿ ದೇಬರ್ಶಿ ಮುಖರ್ಜಿ ಮನವರಿಕೆ ಮಾಡಿಕೊಟ್ಟಿದ್ದಾರೆ.ದರಪಟ್ಟಿ ಪರಿಷ್ಕರಣೆ ಆದಲ್ಲಿ ಭದ್ರಾ ಮೇಲ್ದಂಡೆಯ ಯೋಜನಾ ವೆಚ್ಚ 21 ಸಾವಿರ ಕೋಟಿ ರು. ನಿಂದ ಕನಿಷ್ಠ 26 ಸಾವಿರ ಕೋಟಿ ರು. ಹೆಚ್ಚಳವಾಗಲಿದೆ. ಖೋತಾವಾಗುವ ಕೇಂದ್ರದ 2 ಸಾವಿರ ಕೋಟಿ ರು. ಅನುದಾನವ ಸರಿದೂಗಿಸಬಹುದಾಗಿದೆ.
ಈ ಸಂದರ್ಭದಲ್ಲಿ ವಿಶ್ವೇಶ್ವರಯ್ಯ ನೀರಾವರಿ ನಿಮಗದ ವ್ಯವಸ್ಥಾಪಕ ನಿರ್ದೇಶಕ ಸಣ್ಣ ಚಿತ್ತಯ್ಯ, ಭದ್ರಾ ಮೇಲ್ದಂಡೆ ಯೋಜನೆ ಮುಖ್ಯ ಎಂಜಿನಿಯರ್ ಎಫ್.ಎಚ್.ಲಮಾಣಿ, ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿ ರಾಘವನ್ ಉಪಸ್ಥಿತರಿದ್ದರು.