ಸಾರಾಂಶ
ಭಾನುವಾರ ಕೇಂದ್ರದ ಪ್ರವಾಹ್ ತಂಡ ಮಹದಾಯಿ ಜಲಾನಯನ ಪ್ರದೇಶ ಕಣಕುಂಬಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಮಹದಾಯಿ ಜಲಾನಯನ ಪ್ರದೇಶವಾಗಿರುವ ಕಣಕುಂಬಿಗೆ ಭಾನುವಾರ ಕೇಂದ್ರದ ಕಲ್ಯಾಣ ಮತ್ತು ಸಾಮರಸ್ಯಕ್ಕಾಗಿ ಪ್ರಗತಿಪರ ನದಿ ಪ್ರಾಧಿಕಾರದ (ಪ್ರವಾಹ್) ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಇಲ್ಲಿನ ಅಧಿಕಾರಿಗಳಿಂದ ವಸ್ತುಸ್ಥಿತಿ ಬಗ್ಗೆ ಮಾಹಿತಿ ಪಡೆದುಕೊಂಡಿದೆ. ಆ ಮೂಲಕ ಮಹದಾಯಿ ಕಾಮಗಾರಿ ವಿಚಾರದಲ್ಲಿ ಗೋವಾ ಮಾಡುತ್ತಿರುವ ಸುಳ್ಳು ಆರೋಪಗಳ ಕುರಿತು ತಂಡಕ್ಕೆ ಮನವರಿಕೆ ಮಾಡಿಕೊಡಲಾಯಿತು.ಮೊದಲು ಚೋರ್ಲಾ ಘಾಟ್ ಮತ್ತು ಹರತಾಳ ನಾಲಾ ವೀಕ್ಷಣೆ ಮಾಡಿದ ಪ್ರವಾಹ್ ತಂಡ ಬಳಿಕ, ಖಾನಾಪುರ ತಾಲೂಕಿನ ಕಣಕುಂಬಿಯ ಅತಿಥಿಗೃಹದಲ್ಲಿ ರಾಜ್ಯದ ನೀರಾವರಿ ಅಧಿಕಾರಿಗಳ ಜೊತೆಗೆ ಸಭೆ ನಡೆಸಿತು. ಈ ವೇಳೆ ನಕ್ಷೆ ಸಮೇತ ಕಳಸಾ-ಬಂಡೂರಿ ಯೋಜನೆ ಬಗ್ಗೆ ಅಧಿಕಾರಿಗಳು ಅವರಿಗೆ ಮಾಹಿತಿ ನೀಡಿದರು. ನಂತರ, ಕಳಸಾ-ಬಂಡೂರಿ ಯೋಜನಾ ಸ್ಥಳಕ್ಕೂ ಕೇಂದ್ರದ ತಂಡ ಭೇಟಿ ನೀಡಿತು.ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ವನ್ಯಜೀವಿ, ಪರಿಸರ, ಅರಣ್ಯ ಇಲಾಖೆಯ ಅನುಮತಿ ಇಲ್ಲದೆ ಕರ್ನಾಟಕ ಮಹದಾಯಿ ಕಾಮಗಾರಿ ಆರಂಭಿಸಿದೆ ಎಂದು ಆರೋಪಿಸಿದ್ದರು. ಆದರೆ, ಇದೀಗ ಕಣಕುಂಬಿಗೆ ಭೇಟಿ ನೀಡಿ ವೀಕ್ಷಣೆ ಮಾಡಿದ ಕೇಂದ್ರ ತಂಡ ಎದುರು ಗೋವಾದ ನಿಜ ಬಣ್ಣ ಬಯಲಾಗಿದೆ.
ಕೇಂದ್ರ ಅಧಿಕಾರಿಗಳ ಭೇಟಿ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಕರ್ನಾಟಕ ನೀರಾವರಿ ನಿಗಮದ ಎಂ.ಡಿ ರಾಜೇಶ್ ಅಮ್ಮಿನಭಾವಿ, ಒಟ್ಟು 8 ಜನರ ತಂಡ ಭೇಟಿ ನೀಡಿದೆ. ಮಹದಾಯಿ ಜಲಾನಯನ ಪ್ರದೇಶದಲ್ಲಿ ಏನೇನು ಆಗುತ್ತಿದೆ ಎಂಬುದನ್ನು ವೀಕ್ಷಿಸಲು ತಂಡ ಬಂದಿತ್ತು. ಗೋವಾ ಮತ್ತು ಮಹಾರಾಷ್ಟ್ರಕ್ಕೆ ತಲಾ ಎರಡು ದಿನ ಭೇಟಿ ನೀಡಿದ ಬಳಿಕ ನಮ್ಮ ರಾಜ್ಯಕ್ಕೆ ಅಧಿಕಾರಿಗಳ ತಂಡ ಬಂದಿದೆ ಎಂದರು.ಇದೇ ವೇಳೆ, ಈ ತಂಡದ ಭೇಟಿಯಿಂದ ಕರ್ನಾಟಕದ ಬಣ್ಣ ಬಯಲಾಗಲಿದೆ ಎಂಬ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿಕೆ ಕುರಿತು ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು. ‘ಆ ಬಗ್ಗೆ ನನಗೆ ಗೊತ್ತಿಲ್ಲ. ಕಾಮಗಾರಿಗಳ ಕುರಿತು ಯಾವುದೇ ನಿರ್ಧಾರ ತೆಗೆದುಕೊಳ್ಳುವ ತಂಡ ಇದಲ್ಲ’ ಎಂದು ಸ್ಪಷ್ಟೀಕರಣ ನೀಡಿದರು.
ಗೋವಾ ಸರ್ಕಾರದ ಒತ್ತಾಯದ ಮೇರೆಗೆ ಪ್ರವಾಹ್ ತಂಡವನ್ನು ಕೇಂದ್ರ ಸರ್ಕಾರ ರಚಿಸಿದೆ. ವನ್ಯಜೀವಿ, ಪರಿಸರ, ಅರಣ್ಯ ಇಲಾಖೆ ಅನುಮತಿ ಇಲ್ಲದೆ ಕರ್ನಾಟಕ ಕಾಮಗಾರಿ ಆರಂಭಿಸಿದೆ ಎಂದು ಪ್ರವಾಹ್ ತಂಡದ ಭೇಟಿಗೂ ಮುನ್ನ ಗೋವಾ ಮುಖ್ಯಮಂತ್ರಿಯವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಆರೋಪಿಸಿದ್ದರು. ಇದೀಗ ಯಾವುದೇ ಕಾಮಗಾರಿ ನಡೆದಿಲ್ಲ ಎಂದು ಕೇಂದ್ರ ತಂಡಕ್ಕೆ ರಾಜ್ಯ ನೀರಾವರಿ ಅಧಿಕಾರಿಗಳು ಮನವರಿಕೆ ಮಾಡಿಕೊಟ್ಟಿದ್ದಾರೆ.ಇದಕ್ಕೂ ಮೊದಲು, ಮಹದಾಯಿ ಜಲಾನಯನ ಪ್ರದೇಶಕ್ಕೆ ಆಗಮಿಸಿದ ಕೇಂದ್ರದ ಪ್ರವಾಹ್ ತಂಡಕ್ಕೆ ಬೆಳಗಾವಿಯ ಚೋರ್ಲಾ ಗಡಿಯಲ್ಲಿ ಸ್ವಾಗತ ನೀಡಲಾಯಿತು. ರಾಜ್ಯದ ನೀರಾವರಿ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯ ಪೊಲೀಸರು ಅವರನ್ನು ಸ್ವಾಗತಿಸಿದರು.