ಖಾರಿಫ್ ಹಂಗಾಮಿನ ಬರ ಪರಿಸ್ಥಿತಿ ಅಧ್ಯಯನಕ್ಕಾಗಿ ಜಿಲ್ಲೆಗೆ ಆಗಮಿಸಿರುವ ಕೇಂದ್ರ ಬರ ಅಧ್ಯಯನ ತಂಡವು ಸೋಮವಾರ ಜಿಲ್ಲೆಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಮಳೆಯ ಕೊರತೆಯಿಂದ ಹಾನಿಗೊಳಗಾದ ವಿವಿಧ ಬೆಳೆಗಳನ್ನು ಪರಿಶೀಲಿಸಿತು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಖಾರಿಫ್ ಹಂಗಾಮಿನ ಬರ ಪರಿಸ್ಥಿತಿ ಅಧ್ಯಯನಕ್ಕಾಗಿ ಜಿಲ್ಲೆಗೆ ಆಗಮಿಸಿರುವ ಕೇಂದ್ರ ಬರ ಅಧ್ಯಯನ ತಂಡ ಸೋಮವಾರ ಜಿಲ್ಲೆಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಮಳೆಯ ಕೊರತೆಯಿಂದ ಹಾನಿಗೊಳಗಾದ ವಿವಿಧ ಬೆಳೆಗಳನ್ನು ಪರಿಶೀಲಿಸಿತು.ಕೇಂದ್ರ ಅಕ್ಕಿ ಅಭಿವೃದ್ಧಿ ಇಲಾಖೆ ನಿರ್ದೇಶಕ ಡಾ.ಮಾನ್ಸಿಂಗ್ ನೇತೃತ್ವದ ಕೇಂದ್ರ ತಂಡ ಗುಳೇದಗುಡ್ಡ, ಬಾಗಲಕೋಟೆ, ಹುನಗುಂದ ಹಾಗೂ ಇಳಕಲ್ಲ ತಾಲೂಕಿನ ವಿವಿಧ ಗ್ರಾಮಗಳಿಗೆ ತೆರಳಿ ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆ ಹಾನಿಯ ವಾಸ್ತವ ಸ್ಥಿತಿ ಪರಿಶೀಲಿಸಿತು. ಬಿತ್ತನೆಗೆ ಮಾಡಿರುವ ವೆಚ್ಚ, ಮಳೆಯ ಪ್ರಮಾಣ, ಬೆಳೆ ಹಾನಿಯ ಪ್ರಮಾಣ, ನೀರಾವರಿ ವ್ಯವಸ್ಥೆ ಹಾಗೂ ಬೆಳೆ ವಿಮೆ ಸೇರಿ ವಿವಿಧ ಮಾಹಿತಿಗಳನ್ನು ರೈತರಿಂದ ಪಡೆದುಕೊಂಡಿತು.
ಬೆಳಗ್ಗೆ ಬಾಗಲಕೋಟೆಯಿಂದ ನೇರವಾಗಿ ಗುಳೇದಗುಡ್ಡ ತಾಲೂಕಿನ ಹಳದೂರ ಗ್ರಾಮದ ರಸ್ತೆಯಲ್ಲಿರುವ ಹುಸೇನಬಿ ದಾಲಾಯತ ಅವರ ಜಮೀನಿಗೆ ಭೇಟಿ ನೀಡಿ ಹಾನಿಯಾದ ಮೆಕ್ಕೆಜೋಳ ಪರಿಶೀಲಿಸಿತು.ಬಳಿಕ ಬಾಗಲಕೋಟೆ ತಾಲೂಕಿನ ಶಿರೂರ ಗ್ರಾಮಕ್ಕೆ ತೆರಳಿದ ತಂಡ ರುದ್ರಪ್ಪ ಗಾಣಿಗೇರ ಅವರ 2 ಎಕರೆ 10 ಗುಂಟೆ ಜಮೀನಿನಲ್ಲಿ ಬೆಳೆದಿದ್ದ ಕಬ್ಬು ಬೆಳೆ ವೀಕ್ಷಿಸಿ ಬೆಳೆಹಾನಿ ಹಾಗೂ ವೆಚ್ಚದ ಕುರಿತು ರೈತರಿಂದ ಮಾಹಿತಿ ಪಡೆಯಿತು. ಪಕ್ಕದ ಜಮೀನಿನಲ್ಲಿ ಬಸಯ್ಯ ಅವರ ಹಾನಿಗೊಂಡ ಜೋಳದ ಬೆಳೆ ವೀಕ್ಷಣೆ ಮಾಡಿದರು. ಈ ವೇಳೆ ಶಾಸಕ ಉಮೇಶ ಮೇಟಿ ಮಾತನಾಡಿ, ಮಳೆಯ ಕೊರತೆಯಿಂದ ಈ ಭಾಗದಲ್ಲಿ ವಿವಿಧ ಬೆಳೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿವೆ. ನೀರಾವರಿ ಜಮೀನುಗಳಲ್ಲಿನ ಬೋರ್ವೆಲ್ ಗಳಲ್ಲಿಯೂ ನೀರಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದ್ದು, ಲಭ್ಯವಿರುವ ನೀರನ್ನು ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕೇಂದ್ರ ತಂಡಕ್ಕೆ ಮಾಹಿತಿ ನೀಡಿದರು.
ಭಗವತಿ ಗ್ರಾಮದ ನಾಗಪ್ಪ ಸಿದ್ದಪ್ಪ ಗುಳೇದ ಅವರ ಜಮೀನಿಗೆ ಭೇಟಿ ನೀಡಿದ ಕೇಂದ್ರ ತಂಡ ಹಾನಿಗೊಳಗಾದ ಈರುಳ್ಳಿ ಬೆಳೆಯನ್ನು ಪರಿಶೀಲಿಸಿತು. ಪ್ರತಿ ಎಕರೆಗೆ ಎಷ್ಟು ವೆಚ್ಚ ಮಾಡಲಾಗಿದೆ. ಬೆಳೆ ವಿಮೆ ಮಾಡಿಸಲಾಗಿದೆಯೇ ಎಂಬುದರ ಕುರಿತು ರೈತರಿಂದ ಮಾಹಿತಿ ಪಡೆಯಿತು. ಬೆಳೆವಿಮೆ ಮಾಡಿಸಿದ್ದರೂ ಈವರೆಗೆ ಯಾವುದೇ ಪರಿಹಾರ ದೊರೆತಿಲ್ಲ ಎಂದು ರೈತರು ತಂಡಕ್ಕೆ ತಿಳಿಸಿದರು. ಹಳ್ಳೂರ ಗ್ರಾಮದ ಜಮೀನಿನಲ್ಲಿ ಬೆಳೆಯಲಾಗಿದ್ದ ಸೂರ್ಯಕಾಂತಿ ಬೆಳೆಯ ಹಾನಿ ಪರಿಶೀಲಿಸಿ, ರೈತ ಮಾದವರಾಜ ಜೋಶಿ ಅವರಿಂದ ಬೆಳೆ ಹಾನಿಯ ವಿವರ ಪಡೆದುಕೊಂಡರು. ಬೇವೂರ ಗ್ರಾಮದಲ್ಲೂ ಹಾನಿಗೊಳಗಾದ ಮೆಣಸಿನಕಾಯಿ ಬೆಳೆಯನ್ನು ತಂಡ ವೀಕ್ಷಿಸಿತು.ಹುನಗುಂದ ತಾಲೂಕಿನ ನಂದನೂರ ಗ್ರಾಮಕ್ಕೆ ಭೇಟಿ ನೀಡಿದ ಕೇಂದ್ರ ತಂಡ ಯಲ್ಲವ್ವ ಜಂಬಗಿ ಅವರ ಜಮೀನಿನಲ್ಲಿ ಬೆಳೆಯಲಾಗಿದ್ದ ಕೆಂಪು ಮೆಣಸಿನಕಾಯಿ ಬೆಳೆಯ ಹಾನಿ ಪರಿಶೀಲಿಸಿತು.
ಈ ವೇಳೆ ಉಪಸ್ಥಿತರಿದ್ದ ಸಣ್ಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ, ಮಳೆಯ ಕೊರತೆಯಿಂದ ಬೆಳೆಗಳು ಕುಂಠಿತಗೊಂಡು ಸಂಪೂರ್ಣವಾಗಿ ಹಾನಿಗೊಳಗಾಗಿರುವ ಕುರಿತು ಕೇಂದ್ರ ತಂಡಕ್ಕೆ ಮಾಹಿತಿ ನೀಡಿದರು.ಕೇಂದ್ರ ಬರ ಅಧ್ಯಯನ ತಂಡದಲ್ಲಿ ಕೇಂದ್ರ ವೆಚ್ಚ ಇಲಾಖೆಯ ಅಧೀನ ಕಾರ್ಯದರ್ಶಿಗಳಾದ ಪಾರ್ಥ ಪಾಲ್ ಹಾಗೂ ಗ್ರಾಮೀಣ ಅಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ರಾಕೇಶ ಕುಮಾರ ಇದ್ದರು.
ಕೃಷಿ ಇಲಾಖೆಯ ಕೇಂದ್ರ ಕಚೇರಿಯ ಅಪರ ನಿರ್ದೇಶಕ ಸಿ.ಬಿ.ಬಾಲರೆಡ್ಡಿ, ತೋಟಗಾರಿಕೆ ಇಲಾಖೆಯ ಕಾರ್ಯದರ್ಶಿ ಗಿರೀಶ ಆರ್. ಬರ ವೀಕ್ಷಣೆಯಲ್ಲಿ ಪಾಲ್ಗೊಂಡಿದ್ದರು.ಜಿಲ್ಲಾಧಿಕಾರಿ ಸಂಗಪ್ಪ, ಜಿಪಂ ಸಿಇಒ ಗಜಾನನ ಬಾಲೆ, ಉಪ ಕಾರ್ಯದರ್ಶಿ ಎನ್.ವೈ. ಬಸರಿಗಿಡದ, ಮುಖ್ಯ ಲೆಕ್ಕಾಧಿಕಾರಿ ಸಿದ್ರಾಮೇಶ್ವರ ಉಕ್ಕಲಿ, ಜಂಟಿ ಕೃಷಿ ನಿನಿರ್ದೇಶಕ ಟಿ.ಎಸ್. ರುದ್ರೇಶಪ್ಪ, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ರವೀಂದ್ರ ಹಕಾಟಿ, ಉಪ ವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ತೋವಿವಿಯ ಸಂಶೋಧನಾ ನಿರ್ದೇಶಕ ಡಾ.ವಸಂತ ಗಾಣಿಗೇರ, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಸಿದ್ದಪ್ಪ ಅಂಗಡಿ, ತಹಸೀಲ್ದಾರ್ ವಾಸುದೇವ ಸ್ವಾಮಿ, ಪ್ರವೀಣಕುಮಾರ ಹಿರೇಮಠ ಸೇರಿದಂತೆ ಕೃಷಿ, ತೋಟಗಾರಿಕೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಕೃಷಿ, ತೋಟಗಾರಿಕೆ : ₹420.66 ಕೋಟಿ ಹಾನಿ: ಮಳೆಯ ಕೊರತೆಯಿಂದ ಜಿಲ್ಲೆಯಲ್ಲಿ ಕೃಷಿ ಇಲಾಖೆಗೆ ಸಂಬಂಧಿಸಿದಂತೆ 2,50,280 ಹೆಕ್ಟೆರ್ ಪ್ರದೇಶ ಹಾನಿಗೊಳಗಾಗಿದ್ದು, ಅಂದಾಜು ₹342.16 ಕೋಟಿ ನಷ್ಟ ಉಂಟಾಗಿದೆ. ತೋಟಗಾರಿಕೆ ಬೆಳೆಗಳಲ್ಲಿ 56,386 ಹೆಕ್ಟೇರ್ ಹಾನಿಗೀಡಾಗಿ ₹78.50 ಕೋಟಿ ನಷ್ಟ ಸಂಭವಿಸಿದೆ. ಒಟ್ಟಾರೆ ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರದಲ್ಲಿ ₹420.66 ಕೋಟಿ ಅಂದಾಜು ಹಾನಿ ಉಂಟಾಗಿದೆ. ಇದರೊಂದಿಗೆ ಕುಡಿಯುವ ವ್ಯವಸ್ಥೆಗೆ ₹9.36 ಕೋಟಿ ಹಾಗೂ ಮೇವು ಬ್ಯಾಂಕ್ ಸ್ಥಾಪನೆ ಮತ್ತು ಗೋಶಾಲೆ ಆರಂಭಿಸಲು ಒಟ್ಟು ₹8.94 ಕೋಟಿ ಅಗತ್ಯವಿದೆ ಎಂದು ಕೇಂದ್ರ ಬರ ಅಧ್ಯಯನ ತಂಡಕ್ಕೆ ಜಿಲ್ಲಾಧಿಕಾರಿ ಸಂಗಪ್ಪ ಮಾಹಿತಿ ನೀಡಿದರು.