ರಾಜ್ಯದಲ್ಲಿ ಮಳೆ ಕೊರತೆ ಮತ್ತು ಬರದ ನೈಜ ಪರಿಸ್ಥಿತಿ ಪರಿಶೀಲಿಸಲು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಜಿತ್ ಕುಮಾರ್ ಸಾಹು ನೇತೃತ್ವದ ಕೇಂದ್ರ ಅಂತರ್‌ ಸಚಿವಾಲಯದ ತಂಡ ರಾಜ್ಯಕ್ಕೆ ಆಗಮಿಸಿದ್ದು, ಎರಡನೇ ದಿನವಾದ ಭಾನುವಾರ ಹಾಸನ, ಮೈಸೂರು, ಚಿತ್ರದುರ್ಗ, ದಾವಣಗೆರೆ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳ ಬರ ಪರಿಶೀಲನೆ ನಡೆಸಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದಲ್ಲಿ ಮಳೆ ಕೊರತೆ ಮತ್ತು ಬರದ ನೈಜ ಪರಿಸ್ಥಿತಿ ಪರಿಶೀಲಿಸಲು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಜಿತ್ ಕುಮಾರ್ ಸಾಹು ನೇತೃತ್ವದ ಕೇಂದ್ರ ಅಂತರ್‌ ಸಚಿವಾಲಯದ ತಂಡ ರಾಜ್ಯಕ್ಕೆ ಆಗಮಿಸಿದ್ದು, ಎರಡನೇ ದಿನವಾದ ಭಾನುವಾರ ಹಾಸನ, ಮೈಸೂರು, ಚಿತ್ರದುರ್ಗ, ದಾವಣಗೆರೆ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳ ಬರ ಪರಿಶೀಲನೆ ನಡೆಸಿತು.

ಸಾಹು ನೇತೃತ್ವದ ಅಧಿಕಾರಿಗಳ ತಂಡ ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳ ಬರ ಪರಿಶೀಲನೆ ನಡೆಸಿತು. ಬೆಳಗ್ಗೆ ಚಿತ್ರದುರ್ಗ ಜಿಲ್ಲೆಗೆ ಆಗಮಿಸಿದ ತಂಡ, ಮೊದಲ ಹಂತದಲ್ಲಿ ಬರ ಘೋಷಣೆಯಾದ ಜಿಲ್ಲೆಯ ಹಿರಿಯೂರು ಹಾಗೂ ಚಳ್ಳಕೆರೆ ತಾಲೂಕಿನ ಹಳ್ಳಿಗಳಿಗೆ ಭೇಟಿ ನೀಡಿ ಒಣಗಿದ ಸೇಂಗಾ ಫಸಲು ವೀಕ್ಷಿಸಿತು.

ಜಲಮೂಲಗಳ ಸಂರಕ್ಷಣೆ ಯೋಜನೆಯಡಿ (ವಿಬಿ-ಜಿ ರಾಮ್ ಜಿ ಯೋಜನೆ) ಕೆರೆ ಹೂಳೆತ್ತುವ ಕಾಮಗಾರಿಯನ್ನು ವೀಕ್ಷಿಸಿತು.ಬಳಿಕ, ದಾವಣಗೆರೆ ತಾಲೂಕಿನ ನೀರ್ಥಡಿ ಗ್ರಾಮಕ್ಕೆ ಭೇಟಿ ನೀಡಿ, ಬೆಳೆ ಹಾನಿಗಳ ಬಗ್ಗೆ ಪರಿಶೀಲನೆ ನಡೆಸಿತು. ಗ್ರಾಮದ ರೈತ ವೀರಯ್ಯ ಜಮೀನಿಗೆ ಭೇಟಿ ನೀಡಿ, ಒಣಗಿ ಹೋಗಿದ್ದ ಮೆಕ್ಕೆಜೋಳದ ಬೆಳೆಯ ವೀಕ್ಷಣೆ ನಡೆಸಿತು. ವೀರಯ್ಯ ಜೊತೆಗೆ ಫೋಟೋ ತೆಗೆಸಿಕೊಂಡು, ಪಕ್ಕದಲ್ಲೇ ಇದ್ದ ರೈತ ದರ್ಶನ್ ಹೊಲಕ್ಕೆ ತೆರಳಿ, ಬೆಳೆಹಾನಿ ವೀಕ್ಷಿಸಿ, ಚರ್ಚಿಸಿತು. ನಂತರ ಅಧಿಕಾರಿಗಳ ತಂಡ ನ್ಯಾಮತಿ ತಾಲೂಕಿನ ಮಾದನಬಾವಿ, ಹೊನ್ನಾಳಿ ತಾಲೂಕಿನ ಸೊರಟೂರು, ಎಚ್.ಕಡದಕಟ್ಟೆ ಗ್ರಾಮಗಳಿಗೆ ಭೇಟಿ ನೀಡಿತು.

ಇದೇ ವೇಳೆ, ಕೇಂದ್ರ ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯ ಉಪ ಆಯುಕ್ತ ಸುಧಾಮ್ ಬೇಗ್ ನೇತೃತ್ವದ ತಂಡ ಹಾಸನ ಹಾಗೂ ಮೈಸೂರು ಜಿಲ್ಲೆಯ ಬರ ಪರಿಶೀಲನೆ ನಡೆಸಿತು. ಬೆಳಗ್ಗೆ ಹಾಸನದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿದ ತಂಡ, ಜಿಲ್ಲೆಯ ಬರ ಪರಿಸ್ಥಿತಿಯ ವಿವರ ಪಡೆಯಿತು. ಬಳಿಕ, ಮೈಸೂರು ಜಿಲ್ಲೆಯ ಸಾಲಿಗ್ರಾಮ ತಾಲೂಕಿನ ಗೇರದಡ ಹಾಗೂ ಅರಕೆರೆ ಗ್ರಾಮಗಳಿಗೆ ಭೇಟಿ ನೀಡಿ, ಬರ ಪರಿಶೀಲನೆ ನಡೆಸಿತು. ಗೇರದಡ ಗ್ರಾಮದಲ್ಲಿ ಹೊಗೆಸೊಪ್ಪು ಬೆಳೆ ಹಾಗೂ ಅರಕೆರೆ ಗ್ರಾಮದಲ್ಲಿ ರಾಗಿ ಬೆಳೆ ಹಾನಿಯ ಬಗ್ಗೆ ಅಧಿಕಾರಿಗಳು ರೈತರಿಂದ ವಿವರಣೆ ಪಡೆದರು.

ಈ ಮಧ್ಯೆ, ಪಾಟ್ನಾದ ಭತ್ತ ಅಭಿವೃದ್ಧಿ ಇಲಾಖೆಯ ನಿರ್ದೇಶಕರಾದ ಡಾ.ಮಾನಸಿಂಗ್ ನೇತೃತ್ವದ ಅಧಿಕಾರಿಗಳ ತಂಡ ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳ ಬರ ಅಧ್ಯಯನ ನಡೆಸಿತು. ಬೆಳಗ್ಗೆ ಯಾದಗಿರಿಗೆ ಭೇಟಿ ನೀಡಿದ ತಂಡ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಅವಶ್ಯಕ ಮಾಹಿತಿ ಪಡೆಯಿತು. ಬಳಿಕ, ಶಹಾಪುರ ತಾಲೂಕಿನ ಗುಂಡಳ್ಳಿ, ದೋರನಹಳ್ಳಿ, ಬಿದರಾಣಿ, ಮದ್ದರಕಿ, ಮುಡಬೂಳ ಗ್ರಾಮಗಳ ಹೊಲಗಳಿಗೆ ಭೇಟಿ ನೀಡಿ, ಬೆಳೆ ಹಾನಿ ಕುರಿತು ಪರಿಶೀಲನೆ ನಡೆಸಿತು.

ನಂತರ ರಾಯಚೂರು ಜಿಲ್ಲೆಗೆ ಭೇಟಿ ನೀಡಿತು. ದೇವದುರ್ಗ ತಾಲೂಕಿನ ದೇವದುರ್ಗ, ಅರಕೇರಾ, ಸಿರವಾರ, ಮಸ್ಕಿ, ಲಿಂಗಸುಗೂರು ಸೇರಿ ರಾಯಚೂರು ಜಿಲ್ಲೆಯ ವಿವಿಧ ತಾಲೂಕುಗಳ ವ್ಯಾಪ್ತಿಯ ಹಳ್ಳಿಗಳಲ್ಲಿರುವ ಜಮೀನುಗಳಿಗೆ ಭೇಟಿ ನೀಡಿ, ಬೆಳೆಗಳ ಹಾನಿಯ ಸಮೀಕ್ಷೆ ನಡೆಸಿತು.

‘ಈ ವರ್ಷ ಮಳೆ ಬರದೆ ಇರುವುದರಿಂದ ಹೊಲಕ್ಕೆ ಹಾಕಿದ ಬೀಜ, ಗೊಬ್ಬರದ ದುಡ್ಡು ಬರದಂತೆ ಆಗಿದೆ. ಪ್ರತಿ ವರ್ಷ ಹತ್ತಿ ಎಕರೆಗೆ 12 ರಿಂದ 15 ಕ್ವಿಂಟಲ್ ಬರುತ್ತಿತ್ತು, ಈ ವರ್ಷ ಎಕರೆಗೆ 2 ರಿಂದ ಮೂರು ಕ್ವಿಂಟಾಲ್‌ ಬಂದಿದೆ. ಇದರಿಂದ ನಾವು ಬಹಳ ನಷ್ಟದಲ್ಲಿದ್ದೇವೆ. ಬರಗಾಲದಿಂದ ನಮ್ಮ ಊರಿನ ಜನರು ಬೇರೆ ಕಡೆಗೆ ಗುಳೆ ಹೋಗುತ್ತಿದ್ದಾರೆ. ಎಕರೆಗೆ 50 ಸಾವಿರ ಬರ ಪರಿಹಾರ ನೀಡಬೇಕು’ ಎಂದು ರೈತರು ತಮ್ಮ ಅಳಲು ತೋಡಿಕೊಂಡರು.

‘ಬರ ವೀಕ್ಷಣೆ ಮಾಡಿ ರೈತರ ಸಮಸ್ಯೆಗಳನ್ನು ಆಲಿಸಲು ನಾವು ಇಲ್ಲಿಗೆ ಬಂದಿದ್ದೇವೆ. ತಮ್ಮ ಜಮೀನುಗಳಲ್ಲಿ ಹಾನಿಯಾದ ಮಾಹಿತಿಯನ್ನು ಪರಿಶೀಲನೆ ಮಾಡಲಾಗಿದೆ. ಇದರ ಸಮಗ್ರ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗುವುದು’ ಎಂದು ಕೇಂದ್ರ ತಂಡ ರೈತರಿಗೆ ಭರವಸೆ ನೀಡಿತು.