ರಾಜ್ಯದ ಬರ ಪರಿಸ್ಥಿತಿಯ ಅಧ್ಯಯನಕ್ಕೆ ಆಗಮಿಸಿರುವ ಕೇಂದ್ರ ಬರ ಅಧ್ಯಯನ ತಂಡ ಮಂಗಳವಾರ ಚಾಮರಾಜನಗರ ಹಾಗೂ ಮಂಡ್ಯ ಜಿಲ್ಲೆಯಲ್ಲಿ ಬರ ಪರಿಸ್ಥಿತಿಯ ಪರಿಶೀಲನೆ ನಡೆಸಿತು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ/ ಮಂಡ್ಯ

ರಾಜ್ಯದ ಬರ ಪರಿಸ್ಥಿತಿಯ ಅಧ್ಯಯನಕ್ಕೆ ಆಗಮಿಸಿರುವ ಕೇಂದ್ರ ಬರ ಅಧ್ಯಯನ ತಂಡ ಮಂಗಳವಾರ ಚಾಮರಾಜನಗರ ಹಾಗೂ ಮಂಡ್ಯ ಜಿಲ್ಲೆಯಲ್ಲಿ ಬರ ಪರಿಸ್ಥಿತಿಯ ಪರಿಶೀಲನೆ ನಡೆಸಿತು.

ಕೇಂದ್ರ ಸರ್ಕಾರದ ಪಶುಸಂಗೋಪನೆ ಮತ್ತು ಹೈನುಗಾರಿಕೆ ಉಪ ಆಯುಕ್ತ ಡಾ.ಸುಧಾಮ್ ಬೇಗ್, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಉಪ ಸಲಹೆಗಾರ ಆಶೀಶ್ ಪಾಂಡೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧೀನ ಕಾರ್ಯದರ್ಶಿ ಪ್ರದೀಪ್ ಕುಮಾರ್, ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಮಹಾಲನೋಬಿಸ್, ರಾಷ್ಟ್ರೀಯ ಬೆಳೆ ಮುನ್ಸೂಚನೆ ಕೇಂದ್ರ (ಎಂಎನ್‌ಸಿಎಫ್‌ಸಿ)ದ ಉಪ ನಿರ್ದೇಶಕ ಕರಣ್ ಚೌಧರಿ ಅವರನ್ನೊಳಗೊಂಡ ಅಧಿಕಾರಿಗಳ ತಂಡ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ವಿವಿಧೆಡೆ ಬರ ಅಧ್ಯಯನ ನಡೆಸಿತು. ಬಳಿಕ, ಗುಂಡ್ಲುಪೇಟೆಯ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಶ್ರೀರೂಪ ಹಾಗೂ ಅಧಿಕಾರಿಗಳ ಜೊತೆ ಸಭೆ ನಡೆಸಿ, ಜಿಲ್ಲೆಯ ಮಳೆ, ಬೆಳೆ, ಕುಡಿಯುವ ನೀರು, ಜಾನುವಾರುಗಳ ಮೇವಿನ ಬಗ್ಗೆ ಮಾಹಿತಿ ಸಂಗ್ರಹಿಸಿತು.

ಬಳಿಕ, ಅಧಿಕಾರಿಗಳ ತಂಡ ಮಂಡ್ಯ ಜಿಲ್ಲೆಯ ಕೆಆರ್‌ಎಸ್‌ಗೆ ಭೇಟಿ ನೀಡಿತು. ಕೆಆರ್‌ಎಸ್‌ನ ಕಾವೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿತು. ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಮಳೆ ಕೊರತೆ, ಕೃಷಿ ಚಟುವಟಿಕೆಗಳ ಮೇಲಿನ ಪರಿಣಾಮ, ಕುಡಿಯುವ ನೀರಿನ ಲಭ್ಯತೆ ಹಾಗೂ ಜಲಾಶಯಗಳಲ್ಲಿನ ನೀರಿನ ಸಂಗ್ರಹದ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿತು.ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಈವರೆಗೆ 173 ಮಿ.ಮೀ.ಮಳೆಯಾಗಿದೆ. ಸಾಮಾನ್ಯ ಮಳೆಯ ಪ್ರಮಾಣಕ್ಕೆ ಹೋಲಿಸಿದರೆ ಶೇ.44ರಷ್ಟು ಕೊರತೆಯಾಗಿದೆ. ನೈಋತ್ಯ ಮುಂಗಾರು ಅವಧಿಯಲ್ಲಿ ಸಾಮಾನ್ಯವಾಗಿ 360 ಮಿ.ಮೀ. ಮಳೆಯಾಗಬೇಕಿದ್ದು, ಈವರೆಗೆ 173 ಮಿ.ಮೀ. ಮಳೆಯಾಗಿದೆ. ಮುಂಗಾರು ಪೂರ್ವ ಅವಧಿಯಾದ ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳಲ್ಲಿಯೂ ಸಾಮಾನ್ಯ ಪ್ರಮಾಣಕ್ಕಿಂತ ಕಡಿಮೆ ಮಳೆಯಾಗಿದೆ ಎಂದರು.ಕಳೆದ 20 ವರ್ಷಗಳ ಮಳೆ ದಾಖಲೆಗಳನ್ನು ಗಮನಿಸಿದಾಗ ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಅತ್ಯಂತ ಕಡಿಮೆ ಮಳೆಯಾದ ವರ್ಷಗಳಲ್ಲಿ ಒಂದಾಗಿದೆ. ಮಳೆ ಕೊರತೆಯಿಂದ ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಗಳು ಹಾಗೂ ಬೆಳೆಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿದೆ ಎಂದರು.ಕಾವೇರಿ ನೀರಾವರಿ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ಮಾತನಾಡಿ, ಬೆಂಗಳೂರು, ಮಂಡ್ಯ, ಮೈಸೂರು ಸೇರಿದಂತೆ ಹಲವು ಪ್ರದೇಶಗಳ ಕುಡಿಯುವ ನೀರಿನ ಯೋಜನೆಗಳಿಗೂ ಕಾವೇರಿ ಜಲಮೂಲ ಪ್ರಮುಖವಾಗಿದೆ.

ಪ್ರಸ್ತುತ ಜಲಾಶಯಗಳಲ್ಲಿರುವ ನೀರಿನ ಸಂಗ್ರಹ ಹಾಗೂ ಮುಂದಿನ ದಿನಗಳ ಅಗತ್ಯವನ್ನು ಗಮನಿಸಿದರೆ, ಲಭ್ಯವಿರುವ ನೀರನ್ನು ಸಮರ್ಪಕವಾಗಿ ನಿರ್ವಹಿಸುವುದು ಸವಾಲಾಗಿದೆ. ನೀರಿನ ಲಭ್ಯತೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. ಬಳಿಕ ತಂಡ ಬೆಂಗಳೂರಿಗೆ ತೆರಳಿತು.