ಜಿಲ್ಲೆಯ ಎಲ್ಲಾ ರೈತರು ಬೆಳೆ ಸಮೀಕ್ಷೆ ಮಾಡಿಸಲು ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕೆಂದು ಜಿಲ್ಲಾಧಿಕಾರಿಗಳು ಸಂಬಂಧಿ ಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಕನ್ನಡಪ್ರಭ ವಾರ್ತೆ ರಾಯಚೂರು
ಬರುವ ಅಕ್ಟೋಬರ್ ಮೊದಲ ವಾರದಲ್ಲಿ ಬರ ಅಧ್ಯಯನಕ್ಕಾಗಿ ಕೇಂದ್ರ ತಂಡ ರಾಜ್ಯಕ್ಕೆ ಆಗಮಿಸಲಿದ್ದು, ಮೊದಲನೇಯ ಹಂತದಲ್ಲಿ ಬರ ಪೀಡಿತ ಎಂದು ಘೋಷಣೆಯಾದ ಜಿಲ್ಲೆಯ ತಾಲೂಕುಗಳಿಗೆ ಅ.4ರಂದು ಭೇಟಿ ನೀಡುವ ಸಾಧ್ಯತೆ ಎಂದು ಜಿಲ್ಲಾಧಿಕಾರಿ ಪೂವಿತಾ ಎಸ್. ತಿಳಿಸಿದರು.ಸ್ಥಳೀಯ ಜಿಲ್ಲಾಡಳಿತ ಭವನದ ಡಿಸಿ ಕಚೇರಿ ಸಭಾಂಗಣದಲ್ಲಿ ರೈತ ಮುಖಂಡರ ಹಾಗೂ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಸೋಮವಾರ ಮಾತನಾಡಿದ ಅವರು, ಜೋಳ ಖರೀದಿ ಕೇಂದ್ರದ ಬಾಕಿ ಇರುವ ಬಿಲ್‌ಗಳನ್ನು ಒಂದು ವಾರದೊಳಗೆ ಬಾಕಿ ಇರುವ ರೈತರ ಜೋಳ ಖರೀದಿಯ ಮೊತ್ತವನ್ನು ಪಾವತಿಸಲಾಗುವುದು. ಎಲ್ಲ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಕೊನೆಯ ಭಾಗದ ರೈತರಿಗೆ ನೀರು ತಲುಪುವ ನಿಟ್ಟಿನಲ್ಲಿ ಕ್ರಮ ಸೇರಿ ನಾರಾಯಣಪೂರ ಬಲದಂಡೆ ಕಾಲುವೆಯ ಸಮಸ್ಯಗಳನ್ನು ಮುಖ್ಯ ಇಂಜಿನಿಯರ್ ಕೆಬಿಜೆಎನಎಲ್ ಭೀಮರಾಯನಗುಡಿ ಹಾಗೂ ನಾರಾಯಣಪೂರ ಜಲಾಶಯ ಇವರಗಳೊಂದಿಗೆ ಸಭೆ ಮಾಡಿ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಜಿಲ್ಲೆಯಲ್ಲಿ ಬರಗಾಲ ಹಿನ್ನೆಲೆಯಲ್ಲಿ ರೈತರಿಗೆ, ಕೃಷಿ ಕೂಲಿಕಾರರಿಗೆ ತೊಂದರೆಯಾಗದಂತೆ ಎಚ್ಚರಿಕೆಯಿಂದ ಇರಬೇಕು, ಬೆಳೆ ಸರ್ವೇಗಳನ್ನು ಸರಿಯಾಗಿ ನಡೆಸಬೇಕು, ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ನೋಡಿಕೊಳ್ಳಬೇಕು. ಭೂಮಿ ದಾಖಲೆ ಹೊಂದಿದ ಎಲ್ಲಾ ರೈತರಿಗೆ ಬರಪರಿಹಾರ ವಿತರಿಸಲು ಸೂಕ್ತ ಮುಂಜಾಗ್ರತೆ ವಹಿಸಬೇಕು ಎಂದು ಸೂಚಿಸಿದರು.ರಾಯೂಚೂರು ತಾಲೂಕಿಗೆ ದಿನವೊಂದಕ್ಕೆ 9 ರಿಂದ 10 ಗಂಟೆಗಳ ಕಾಲ ವಿದ್ಯುತ್ ಒದಗಿಸಬೇಕು. ಹಾಗೂ ಉಳಿದ ತಾಲೂಕುಗಳಿಗೆ 7 ಗಂಟೆಗಳ ಕಾಲ ವಿದ್ಯುತ್ ನೀಡಬೇಕು. ಅಲ್ಲದೆ ಜಿಲ್ಲೆಯ ಎಲ್ಲಾ ರೈತರು ಬೆಳೆ ಸಮೀಕ್ಷೆ ಮಾಡಿಸಲು ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕೆಂದು ಜಿಲ್ಲಾಧಿಕಾರಿಗಳು ಸಂಬಂಧಿ ಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಎಡಿಸಿ ಶಿವಾನಂದ, ಲಿಂಗಸುಗೂರು ಎಸಿ ನಾಗೇಂದ್ರ ಬಾಬು ಕುಮಾರ್, ರಾಯಚೂರು ಎಸಿ ಡಾ.ಹಂಪಣ್ಣ ಸಜ್ಜನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ.ಹರೀಶ್,ರೈತ ಮುಖಂಡರಾದ ಚಾಮರಸ ಮಾಲಿ ಪಾಟೀಲ್,ಪ್ರಭಾಕಾರ ಪಾಟೀಲ್ ಇಂಗಳದಾಳ, ದೊಡ್ಡ ಬಸನಗೌಡ ಬಲ್ಲಟಗಿ, ಸೂಗುರಯ್ಯ ಆರ್.ಎಸ್. ಮಠ, ವೆಂಕಪ್ಪ ಕಾರಬಾರಿ, ಬಸವರಾಜ ಮಾಲಿ ಪಾಟೀಲ್, ಮಲ್ಲಣ ದಿನ್ನಿ, ಹಾಜಿ ಮಸ್ತಾನ್ ಸೇರಿ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿ, ರೈತರು ಹಾಜರಿದ್ದರು.