ಸಾರಾಂಶ
2023-24ನೇ ಶೈಕ್ಷಣಿಕ ವರ್ಷಕ್ಕಾಗಿ ಸಿಯುಕೆಯು ಎನ್‍ಐಆರ್‌ಎಫ್ (ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟು)ನಲ್ಲಿ 150 ರಿಂದ 200 ಶ್ರೇಣಿಯಲ್ಲಿ ಸ್ಥಾನ ಪಡೆದಿದೆ. ಶಿಕ್ಷಕರ ಕಠಿಣ ಪರಿಶ್ರಮ ಮತ್ತು ಸತತ ಪ್ರಯತ್ನಗಳಿಂದಾಗಿ ಇದು ಸಾಧ್ಯವಾಗಿದೆ ಎಂದು ಸಿಯುಕೆ ಕುಲಪತಿ ಡಾ. ಬಟು ಸತ್ಯನಾರಾಯಣ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಕಲಬುರಗಿ
2023-24ನೇ ಶೈಕ್ಷಣಿಕ ವರ್ಷಕ್ಕಾಗಿ ಸಿಯುಕೆಯು ಎನ್‍ಐಆರ್‌ಎಫ್ (ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟು)ನಲ್ಲಿ 150 ರಿಂದ 200 ಶ್ರೇಣಿಯಲ್ಲಿ ಸ್ಥಾನ ಪಡೆದಿದೆ. ಶಿಕ್ಷಕರ ಕಠಿಣ ಪರಿಶ್ರಮ ಮತ್ತು ಸತತ ಪ್ರಯತ್ನಗಳಿಂದಾಗಿ ಇದು ಸಾಧ್ಯವಾಗಿದೆ ಎಂದು ಸಿಯುಕೆ ಕುಲಪತಿ ಡಾ. ಬಟು ಸತ್ಯನಾರಾಯಣ ಹೇಳಿದ್ದಾರೆ.ಸಿಯುಕೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಶಿಕ್ಷಕರು ವಿವಿ ಬೆನ್ನೆಲುಬು. ಈ ಸಾಧನೆಗೆ ನಾವು ಸಂತೋಷಪಡಬಾರದು, ನಮ್ಮ ವಿಶ್ವವಿದ್ಯಾನಿಲಯವನ್ನು ದೇಶದ ಅತ್ಯುನ್ನತ ವಿಶ್ವವಿದ್ಯಾಲಯಗಳಲ್ಲಿ ಒಂದನ್ನಾಗಿ ಮಾಡುವ ಗುರಿಯನ್ನು ನಾವು ಹೊಂದಬೇಕೆಂದರು.
ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳು ಮತ್ತು ಇತರ ಮೂಲಸೌಕರ್ಯಗಳ ಮೇಲೆ ಭಾರಿ ಹಣವನ್ನು ಹೂಡಿಕೆ ಮಾಡಿದ್ದೇವೆ. ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ಮತ್ತು ಸಂಶೋಧನೆ ಮತ್ತು ಪ್ರಕಟಣೆಗಳನ್ನು ಸಾಧಿಸಲು ಈ ಸೌಕರ್ಯಗಳನ್ನು ಪರಿಣಾಮಕಾರಿಯಾಗಿ ಬಳಸಬೇಕು. ನಾವು ಇತರ ವಿಶ್ವವಿದ್ಯಾನಿಲಯಗಳೊಂದಿಗೆ ಸೇರಿಕೊಂಡು ಕಾರ್ಯನಿರ್ವಹಿಸಬೇಕು ಮತ್ತು ನಮ್ಮ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದರು.ಕುಲಸಚಿವ ಪ್ರೊ. ಆರ್. ಆರ್. ಬಿರಾದಾರ್ ಮಾತನಾಡಿ, ಶಿಕ್ಷಕರು ಯುವಕರನ್ನು ಪರಿವರ್ತಿಸುವ ಮೂಲಕ ವಿಕಸಿತ ಭಾರತವನ್ನು ಸಾಧಿಸುವಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತಾರೆಂದರು.
ಸಂಶೋಧನೆ ಮತ್ತು ಅಭಿವೃದ್ಧಿ ನಿರ್ದೇಶಕ ಪ್ರೊ. ಎನ್. ಸತ್ಯನಾರಾಯಣ, ಶಿಕ್ಷಕರಾಗಿ ನಮ್ಮ ಪಾತ್ರವನ್ನು ಆತ್ಮಾವಲೋಕನ ಮಾಡಿಕೊಳ್ಳಲು ಇದು ಒಂದು ಸಂದರ್ಭ. ನಾವು ನಮ್ಮ ವಿದ್ಯಾರ್ಥಿಗಳಿಗೆ ಮಾದರಿಯಾಗಿರಬೇಕೆಂದರು.ಅತ್ಯುತ್ತಮ ಪ್ರಕಟಣೆಗೆ ಶಿಕ್ಷಕರಾದ ಪ್ರೊ. ಶೇಷನಾಥ ಭೋಸ್ಲೆ, ಡಾ.ಸಂಜೀತ್ ಸರ್ಕಾರ್, ಡಾ.ನುರಸಿಂಗ ಚರಣ್ ಪ್ರಧಾನ್ ಅವರನ್ನು ಸನ್ಮಾನಿಸಲಾಯಿತು.
ಪುಸ್ತಕಗಳ ಪ್ರಕಟಣೆಗಾಗಿ ಡಾ.ರೋಹಿಣಾಕ್ಷ ಶ್ರೀರ್ಲಾರು, ಪ್ರೊ. ಎಂ.ಎ.ಅಸ್ಲಂ, ಡಾ.ಬಾಬು ಎನ್, ಡಾ. ಜಯದೇವಿ ಜಂಗಮಶೆಟ್ಟಿ ಮತ್ತು ಡಾ.ರಾಘವೇಂದ್ರ ಬೋನಾಳ್ ಅವರನ್ನು ಸನ್ಮಾನಿಸಲಾಯಿತು.ಪ್ರತಿಷ್ಠಿತ ಸಂಸ್ಥೆಯಿಂದ ಪ್ರಶಸ್ತಿ ಪಡೆದ ಗ್ರಂಥಪಾಲಕ ಡಾ.ಪಿ.ಎಸ್.ಕಟ್ಟಿಮನಿ ಹಾಗೂ ಡಾ.ಜಯದೇವಿ ಜಂಗಮಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಸಂಯೋಜಕ ಪ್ರೊ. ಆರ್.ಎಸ್.ಹೆಗಡಿ ಸ್ವಾಗತಿಸಿದರು. ಡಾ. ರಾಜೀವ್ ಜೋಶಿ ನಿರೂಪಿಸಿ ವಂದಿಸಿದರು. ಪ್ರೊ. ಚನ್ನವೀರ್ ಆರ್.ಎಂ, ಪ್ರೊ. ಜಿ.ಆರ್. ಅಂಗಡಿ, ಪ್ರೊ. ಪರಮೇಶ್, ವಿವಿಧ ನಿಕಾಯಗಳ ಡೀನ್‍ರು, ವಿವಿಧ ವಿಭಾಗಗಳ ಮುಖ್ಯಸ್ಥರು ಮತ್ತು ಅಧ್ಯಾಪಕರು ಉಪಸ್ಥಿತರಿದ್ದರು.