ಸಾರಾಂಶ
ಹಾವೇರಿ, ಗದಗ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಯ ಜಲಾನಯನ ಪ್ರದೇಶದಲ್ಲಿ ಇತ್ತೀಚೆಗೆ ನೀರಿನ ಕೊರತೆ ಆಗುತ್ತಿದೆ.
ಹಾವೇರಿ: ಬೇಡ್ತಿ- ವರದಾ ನದಿ ಜೋಡಣೆ ಕುರಿತು ಕೇಂದ್ರ ಸಚಿವರು, ಅಧಿಕಾರಿಗಳ ಜತೆ ಚರ್ಚಿಸಿದ್ದು, ಯೋಜನೆಗೆ ಒಪ್ಪಿಗೆ ನೀಡಲು ಎಲ್ಲರೂ ಸಹಮತ ವ್ಯಕ್ತಪಡಿಸಿದ್ದಾರೆ. ಕೆಲವೇ ದಿನಗಳಲ್ಲಿ ಒಳ್ಳೆಯ ಸುದ್ದಿ ಬರುವ ನಿರೀಕ್ಷೆ ಇದೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.ನಗರದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿ, ಹಾವೇರಿ, ಗದಗ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಯ ಜಲಾನಯನ ಪ್ರದೇಶದಲ್ಲಿ ಇತ್ತೀಚೆಗೆ ನೀರಿನ ಕೊರತೆ ಆಗುತ್ತಿದೆ. ಈ ಜಲಾನಯನ ಪ್ರದೇಶದಲ್ಲಿ ಹಲವು ಕುಡಿಯುವ ನೀರಿನ ಯೋಜನೆಗಳಿದ್ದರೂ ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಎದುರಾಗುತ್ತಿದೆ. ಹೀಗಾಗಿ ನೀರಿನ ಕೊರತೆ ನೀಗಿಸಲು ಬೇಡ್ತಿ- ವರದಾ ನದಿ ಜೋಡಣೆ ಯೋಜನೆ ಮಾಡುವ ಉದ್ದೇಶವಿದೆ ಎಂದರು.
ಈ ಯೋಜನೆಯಿಂದ ಉತ್ತರ ಕನ್ನಡ ಜಿಲ್ಲೆಯವರಿಗೆ ಪರಿಸರದ ಸಮಸ್ಯೆ, ಇಕೊಲಾಜಿಕಲ್ ಸಮಸ್ಯೆ ಆಗುತ್ತದೆ ಎಂದು ಚರ್ಚೆಯಾಗಿದ್ದವು. ಈ ಬಗ್ಗೆ ಇತ್ತೀಚೆಗೆ ಕೇಂದ್ರ ಸಚಿವರಾದ ಸಿ.ಆರ್. ಪಾಟೀಲ್, ವಿ. ಸೋಮಣ್ಣ ಹಾಗೂ ಹಿರಿಯ ಅಧಿಕಾರಿಗಳ ಜತೆ ಸಭೆ ಮಾಡಿದ್ದೇನೆ. ರಾಜ್ಯ ಸರ್ಕಾರ ಡಿಪಿಆರ್ ಕಳಿಸಿದರೆ ಮುಂದಿನ ಪ್ರಕ್ರಿಯೆ ಆಗುತ್ತದೆ ಎಂದರು.ವರದಾ- ಧರ್ಮ- ಬೇಡ್ತಿ ನದಿ ನೀರಿನ ಲಿಂಕ್ ರಾಜ್ಯ ಸರ್ಕಾರದ ವಲಯದಲ್ಲಿ ನಡೆಯಬೇಕು. ನೀರಾವರಿ ಯೋಜನೆ ಜಾರಿ ಅಷ್ಟು ಸುಲಭ ಅಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಒತ್ತಾಯಿಸಲು ಸಭೆ ಸೇರಿದ್ದೇವೆ ಎಂದರು.ಶಾಸಕ ಶಿವರಾಮ ಹೆಬ್ಬಾರ ಅವರು ಈ ಯೋಜನೆಗೆ ವಿರೋಧ ವಿಚಾರ ಕುರಿತು ಪ್ರತಿಕ್ರಿಯಿಸಿ, ಅಲ್ಲಿನ ಜನರ ಬದುಕು ಹಾಳಾಗಲ್ಲ. ಯೋಜನೆಯಲ್ಲಿ ಬದಲಾವಣೆ ಆಗಿದೆ. ಅವರಿಗೂ ಒಪ್ಪಿಸಿ ಅನುಕೂಲ ಆಗುವ ರೀತಿ ಯೋಜನೆ ಮಾಡಲಾಗುವುದು ಎಂದರು.ನಟ ದಿ. ವಿಷ್ಣುವರ್ಧನ್ ಸಮಾಧಿ ಧ್ವಂಸ ಮಾಡಿರುವ ಕುರಿತು ಮಾತನಾಡಿ, ವಿಷ್ಣುವರ್ಧನ ಬಗ್ಗೆ ಅಭಿಮಾನ ಇದೆ. ರಾತ್ರೋರಾತ್ರಿ ಅವರ ಸ್ಮಾರಕಕ್ಕೆ ಹಾಗೆ ಮಾಡಿದ್ದು ದುಃಖ ತಂದಿದೆ. ನಾನು ಸಿಎಂ ಆಗಿದ್ದಾಗ ಮೈಸೂರಿನಲ್ಲಿ ವಿಷ್ಣು ಸ್ಮಾರಕ ಉದ್ಘಾಟನೆ ಮಾಡಲಾಗಿತ್ತು. ಅದಕ್ಕೆ ₹12 ಕೋಟಿ ನೀಡಲಾಗಿತ್ತು. ಈ ಸಮಸ್ಯೆ ಸೌಹಾರ್ದ ರೀತಿ ಬಗೆಹರಿಸಿಕೊಳ್ಳುವುದು ಸೂಕ್ತ ಎಂದರು. ಲೋಕಸಭಾ ಚುನಾವಣೆಯಲ್ಲಿ ಮತಗಳುವು ಆರೋಪ ವಿಚಾರ, ಸಾಕ್ಷಿ, ಆಧಾರ ಇಟ್ಟುಕೊಂಡು ಕಾಂಗ್ರೆಸ್‌ನವರು ದೂರು ನೀಡಲಿ. ಕತ್ತಲಲ್ಲಿ ಕಾಣದೇ ಇರುವ ಕರಿಬೆಕ್ಕು ಹುಡುಕುವ ಕೆಲಸ ಆಗುತ್ತಿದೆ. ತನಿಖೆ ಮಾಡಲಿ, ಸ್ವಾಗತ ಮಾಡುತ್ತೇನೆ ಎಂದರು.