ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಕೇಂದ್ರದ ಅರಣ್ಯ ಇಲಾಖೆ ಅನುಮತಿ ಸಿಗದಿರುವುದರಿಂದ ಮಹದಾಯಿ ಯೋಜನೆ ಜಾರಿ ವಿಳಂಬವಾಗುತ್ತದೆ. ಇದಕ್ಕೆ ಕೇಂದ್ರ ಸರ್ಕಾರವೇ ಕಾರಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದೂರಿದರು.ನಗರದ ಸುವರ್ಣ ವಿಧಾನ ಸೌಧದ ಆವರಣದಲ್ಲಿ ಭಾನುವಾರ ಜರುಗಿದ ಬೆಳಗಾವಿ ವಿಭಾಗ ಮಟ್ಟದ ಸಮಾರಂಭದಲ್ಲಿ ಕೃಷಿ ಇಲಾಖೆಯ ಸಹಾಯಧನದಡಿಯಲ್ಲಿ ರೈತರಿಗೆ ವಿವಿಧ ಸವಲತ್ತುಗಳನ್ನು ವಿತರಿಸಿ ಮಾತನಾಡಿದ ಅವರು, ಮಹದಾಯಿ ಯೋಜನೆಗೆ ಇನ್ನೂ ಅರಣ್ಯ ಇಲಾಖೆಯ ಅನುಮತಿ ದೊರಕಿಲ್ಲ. ಕೇಂದ್ರ ಅನುಮತಿ ಕೊಟ್ಟರೆ ನಾಳೆಯೇ ಕೆಲಸ ಆರಂಭಿಸಲಾಗುವುದು. ಅದೇ ರೀತಿ ಮೇಕೆದಾಟು, ಕೃಷ್ಣಾ ಮೇಲ್ದಂಡೆ ಯೋಜನೆ ಸೇರಿದಂತೆ ಎಲ್ಲ ಯೋಜನೆಗಳ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಸಿದ್ಧವಿದೆ ಎಂದರು.ಅಧಿಕಾರಕ್ಕೆ ಬಂದ ತಕ್ಷಣವೇ ಮಹದಾಯಿ ಯೋಜನೆ ಅನುಷ್ಠಾನ ಮಾಡುವುದಾಗಿ ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದರು. ಆದರೆ, ಅವರ ಪಕ್ಷ ಅಧಿಕಾರಕ್ಕೆ ಬಂದರೂ ಅವರು ಈ ಯೋಜನೆ ಜಾರಿ ಮಾಡಲಿಲ್ಲ. ಬಿಜೆಪಿ ಸಂಸದರು, ನಾಯಕರು ಈ ಕುರಿತು ಕೇಂದ್ರದ ಎದುರು ಮಾತನಾಡುವುದಿಲ್ಲ ಎಂದು ಆರೋಪಿಸಿದರು.ಒಣ ಬೇಸಾಯಗಾರರಿಗೆ ಅನುಕೂಲ ಕಲ್ಪಿಸಲು ಕೃಷಿ ಭಾಗ್ಯ ಜಾರಿಗೆ ತರಲಾಗಿದ್ದು, ₹200 ಕೋಟಿ ಮೀಸಲಿಡಲಾಗಿದೆ. ರಾಜ್ಯದಲ್ಲಿ ಕಳೆದ ವರ್ಷ 25,000ಕ್ಕೂ ಹೆಚ್ಚು ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ. ಸರ್ಕಾರದಿಂದ ನೀರಾವರಿಗೆ ಆದ್ಯತೆ ನೀಡಲಾಗಿದ್ದು, ಬೃಹತ್ ಮತ್ತು ಸಣ್ಣ ನೀರಾವರಿಗೆ ₹25 ಸಾವಿರ ಕೋಟಿಗೂ ಅಧಿಕ ಹಣವನ್ನು ಖರ್ಚು ಮಾಡಲಾಗುತ್ತಿದೆ. ರಾಜ್ಯದ ಎಲ್ಲ ನೀರಾವರಿ ಯೋಜನೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಬೆಳಗಾವಿ ವಿಭಾಗದ ವ್ಯಾಪ್ತಿಯ ರೈತರಿಗೆ ಕಳೆದ ವರ್ಷ ಕೂಡ ರೈತರಿಗೆ ಕೃಷಿ ಯಂತ್ರೋಪಕರಣಗಳನ್ನು ನೀಡಲಾಗಿದೆ. ಅದೇ ರೀತಿ ಈ ಬಾರಿ ಕೂಡ ಕೃಷಿ ಇಲಾಖೆಯ ಸಹಾಯಧನದಡಿಯಲ್ಲಿ ವಿವಿಧ ಬಗೆಯ ಸವಲತ್ತುಗಳನ್ನು ನೀಡಲಾಗಿದೆ ಎಂದರು.ಕೃಷಿ ಪ್ರಧಾನವಾಗಿರುವ ದೇಶದಲ್ಲಿ ರೈತರಿಗೆ ಸಹಾಯ ಮಾಡಬೇಕಾಗಿರುವುದು ಸರ್ಕಾರದ ಜವಾಬ್ದಾರಿಯಾಗಿದೆ. ಆದ್ದರಿಂದ ಸರ್ಕಾರ ರೈತರ ಹಿತರಕ್ಷಣೆಗೆ ಬದ್ಧವಾಗಿ ಕಾರ್ಯನಿರ್ವಹಿಸುತ್ತಿದೆ. ನೀರಾವರಿಗೆ ಒತ್ತು ನೀಡಲಾಗುತ್ತಿದ್ದು, ಬೆಳಗಾವಿ ವಿಭಾಗದಲ್ಲಿ ಕಬ್ಬು ಬೆಳೆಗಾರರ ಸಂಖ್ಯೆ ಹೆಚ್ಚಾಗಿರುವುದರಿಂದ ಸಾಮಾನ್ಯ ವರ್ಗದ ರೈತರಿಗೆ ಶೇ.40 ಮತ್ತು ಪರಿಶಿಷ್ಟ ವರ್ಗದ ರೈತರಿಗೆ ಶೇ.50 ಸಹಾಯಧನದಲ್ಲಿ ಅತ್ಯಾಧುನಿಕ ಕಬ್ಬು ಕಟಾವು ಯಂತ್ರ ನೀಡಲಾಗುತ್ತಿದೆ ಎಂದರು.ಕೃಷಿ ಕಾರ್ಮಿಕರ ಸಂಖ್ಯೆ ಕಡಿಮೆಯಾಗಿರುವುದರಿಂದ ಬೇಸಾಯ ಕಷ್ಟಕರವಾಗಿದೆ. ಆದ್ದರಿಂದ ಕೃಷಿ ಯಂತ್ರೋಪಕರಣಗಳನ್ನು ಸರ್ಕಾರದ ವತಿಯಿಂದ ವಿತರಿಸಲಾಗುತ್ತಿದೆ. ಈ ಬಾರಿ ಉತ್ತಮ ಮಳೆಯ ಮುನ್ಸೂಚನೆ ಇದೆ. ಮುಂಬರುವ ದಿನಗಳಲ್ಲಿ ಆಹಾರ ಉತ್ಪಾದನೆ ಇನ್ನೂ ಹೆಚ್ಚಾಗಲಿ. ಸರ್ಕಾರ ಅಗತ್ಯ ನೆರವು ನೀಡಲಿದೆ ಎಂದರು.ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ಸರ್ಕಾರವು ರೈತರ ಪರವಾಗಿ ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಅನೇಕ ಸವಲತ್ತುಗಳನ್ನು ನೀಡಿದೆ. ಕಬ್ಬು ಕಟಾವು ಮಾಡುವ ಅತ್ಯಾಧುನಿಕ ಯಂತ್ರ ಖರೀದಿಸುವ ಸಾಮಾನ್ಯ ವರ್ಗದ ಜನರಿಗೆ ₹40 ಲಕ್ಷ ಹಾಗೂ ಪರಿಶಿಷ್ಟ ಜಾತಿ/ವರ್ಗದವರಿಗೆ ₹50 ಲಕ್ಷ ಸಬ್ಸಿಡಿ ನೀಡಿರುವುದು ಸ್ವತಂತ್ರ ಭಾರತದಲ್ಲಿ ಇದೇ ಮೊದಲು ಎಂದು ತಿಳಿಸಿದರು.
ಮುಂಬರುವ ದಿನಗಳಲ್ಲಿ 7 ವರ್ಷದ ಬಳಿಕ ಫಲಾನುಭವಿಗಳಿಗೆ ಮತ್ತೆ ಸೌಲಭ್ಯ ಒದಗಿಸಲು ಸರ್ಕಾರ ನಿರ್ಧರಿಸಿದೆ. ಕೃಷಿ ಯಂತ್ರೋಪಕರಣಗಳ ಸಬ್ಸಿಡಿ ನೀಡಲು ಅಂದಾಜು ₹1 ಸಾವಿರ ಕೋಟಿ ಅನುದಾನ ನೀಡಲಾಗುತ್ತಿದೆ. ಕಳೆದ ಮಾರ್ಚನಲ್ಲಿಯೂ ಸಹ ಸೌಲಭ್ಯ ವಿತರಿಸಿದೆ. ಈ ಬಾರಿಯ ಆಯವ್ಯಯದಲ್ಲಿ ₹50 ಕೋಟಿ ಅನುದಾನವನ್ನು ಯಂತ್ರೋಪಕರಣಗಳಿಗಾಗಿ ಮೀಸಲಿಟ್ಟು ಹೆಚ್ಚುವರಿ ₹45 ಕೋಟಿ ಅನುದಾನವನ್ನು ಮುಖ್ಯಮಂತ್ರಿಗಳು ನೀಡಿದ್ದು, ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಯಂತ್ರೋಪಕರಣಗಳನ್ನು ವಿತರಿಸಲಾಗುತ್ತಿದೆ. ಈ ಭಾಗದಲ್ಲಿ ಕಬ್ಬು ಮುಖ್ಯ ಬೆಳೆಯಾಗಿದ್ದು, ರೈತರು ಕಬ್ಬು ಕಟಾವಿಗೆ ಹೆಚ್ಚಿನ ಹಣ ನೀಡಬೇಕಾಗಿತ್ತು. ಆದರೆ, ಇಂದು ವಿತರಿಸುವ ಯಂತ್ರೋಪಕರಣಗಳಿಂದಾಗಿ ಕಬ್ಬು ಕಟಾವು ಖರ್ಚು ಕಡಿಮೆಯಾಗಲಿದೆ ಎಂದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮಾತನಾಡಿ, ಜನಸಾಮಾನ್ಯರಿಗೆ ಸೌಲಭ್ಯಗಳನ್ನು ಒದಗಿಸಲು ರಾಜ್ಯ ಸರ್ಕಾರವು ಸದಾ ಬದ್ಧವಾಗಿದೆ. ಪಂಚ ಗ್ಯಾರಂಟಿ ಯೋಜನೆಗಳ ಜಾರಿಯಿಂದಾಗಿ ರಾಜ್ಯದ ಪ್ರತಿಯೊಬ್ಬ ನಾಗರಿಕರ ಒಂದಿಲ್ಲೊಂದು ರೀತಿಯಲ್ಲಿ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ರೈತರಿಗಾಗಿ ದೊಡ್ಡ ಮೊತ್ತದಲ್ಲಿ ಸಬ್ಸಿಡಿ ನೀಡುತ್ತಿರುವದು ಇತಿಹಾಸವಾಗಿದೆ. ಸರ್ಕಾರದ ವತಿಯಿಂದ ಸಹಾಯಧನ ಯೋಜನೆಯಡಿ ವಿತರಿಸಲಾದ ಯಂತ್ರೋಪಕರಣಗಳನ್ನು ಸರಿಯಾಗಿ ಬಳಸುವುದರ ಮೂಲಕ ಪ್ರಗತಿ ಸಾಧಿಸಬೇಕು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಲೋಕೊಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ, ಶಾಸಕರಾದ ರಾಜು(ಆಸೀಫ್)ಸೇಠ, ಬಾಬಾಸಾಹೇಬ ಪಾಟೀಲ, ಎನ್.ಎಸ್.ಕೋನರೆಡ್ಡಿ, ಚನ್ನರಾಜ ಹಟ್ಟಿಹೊಳಿ, ಬುಡಾ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ ಮೊದಲಾದವರು ಉಪಸ್ಥಿತರಿದ್ದರು.₹40 ಕೋಟಿ ಮೊತ್ತದ ಕೃಷಿ ಸವಲತ್ತುಗಳ ವಿತರಣೆ
ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯನವರು ಒಟ್ಟು ₹40 ಕೋಟಿ ವೆಚ್ಚದಲ್ಲಿ ಕಬ್ಬು ಕಟಾವು ಯಂತ್ರ 78, ಪವರ್ ಟಿಲ್ಲರ್ 100, ರೋಟೊವೇಟರ್ 165, ನೇಗಿಲು 120, ಮೇವು ಕತ್ತರಿಸುವ ಯಂತ್ರ 100, ಬಿತ್ತನೆ ಕೂರಿಗೆ 64, ರಾಶಿ ಯಂತ್ರ 26, ಕೋಲಿ ಕತ್ತರಿಸುವ ಯಂತ್ರ 5, ಭೂಮ್ ಸ್ಪ್ರೇಯರ್ ಯಂತ್ರ 12, ಸ್ಪ್ರೀಂಕ್ಲರ್ 1480 ಹೀಗೆ ಒಟ್ಟು 2150 ಕೃಷಿ ಯಂತ್ರೋಪಕರಣಗಳನ್ನು ವಿತರಿಸಿದರು.
ಮಹದಾಯಿ, ಮೇಕೆದಾಟು, ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಆಲಮಟ್ಟಿ ಜಲಾಶಯ ಎತ್ತರ ಹೆಚ್ಚಳ ಸೇರಿದಂತೆ ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿರುವ ಎಲ್ಲ ನೀರಾವರಿ ಯೋಜನೆಗಳನ್ನು ತಕ್ಷಣವೇ ಆರಂಭಿಸಲು ರಾಜ್ಯ ಸರ್ಕಾರ ಸಿದ್ಧವಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸುವ ಮೂಲಕ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಅನುಕೂಲ ಕಲ್ಪಿಸಬೇಕು.-ಸಿದ್ದರಾಮಯ್ಯ,
ಮುಖ್ಯಮಂತ್ರಿ.ಕೃಷಿ ಇಲಾಖೆಗೆ ಒದಗಿಸಿದಂತಹ ಅನುದಾನವನ್ನು ಸಮರ್ಪಕವಾಗಿ ಬಳಸಲಾಗುತ್ತಿದೆ. ಸರ್ಕಾರವು ಕೃಷಿ ಯಂತ್ರೋಪಕರಣ ಹಾಗೂ ಸಿರಿಧಾನ್ಯಕ್ಕಾಗಿ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದು, ಇಂದು ವಿತರಿಸಿದ ಯಂತ್ರೋಪಕರಣಗಳ ಸೌಲಭ್ಯವನ್ನು ರೈತರು ಸದುಪಯೋಗ ಪಡೆದುಕೊಳ್ಳಬೇಕು.-ಎನ್.ಚಲುವರಾಯಸ್ವಾಮಿ,
ಕೃಷಿ ಸಚಿವ.