ಕಾಂಗ್ರೆಸ್‌ನ ಅಹಿಂದ ನಾಯಕರ ಧ್ವನಿ ಅಡಗಿಸಿ ಅಧಿಕಾರಕ್ಕೆ ಬರಲು ಕೇಂದ್ರ ಬಿಜೆಪಿ ಸರ್ಕಾರ ಹುನ್ನಾರ ನಡೆಸುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಪಂಗಡ ವಿಭಾಗದ ಅಧ್ಯಕ್ಷ ಕೆ.ಆರ್.ಶ್ರೀಧರ್ ಹೇಳಿದರು.

ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು

ಕಾಂಗ್ರೆಸ್‌ನ ಅಹಿಂದ ನಾಯಕರ ಧ್ವನಿ ಅಡಗಿಸಿ ಅಧಿಕಾರಕ್ಕೆ ಬರಲು ಕೇಂದ್ರ ಬಿಜೆಪಿ ಸರ್ಕಾರ ಹುನ್ನಾರ ನಡೆಸುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಪಂಗಡ ವಿಭಾಗದ ಅಧ್ಯಕ್ಷ ಕೆ.ಆರ್.ಶ್ರೀಧರ್ ಹೇಳಿದರು.

ಅರಹತೊಳಲು ಕೈಮರದ ಎನ್.ಡಿ.ಸುಂದರೇಶ್ ವೃತ್ತದಲ್ಲಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ವಿಭಾಗ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಭದ್ರಾವತಿ ಮತ್ತು ಭದ್ರಾವತಿ ತಾಲೂಕು ಮಾನವ ಬಂಧುತ್ವ ವೇದಿಕೆ ವತಿಯಿಂದ ಸತೀಶ್ ಜಾರಕಿಹೊಳಿ ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ನಡೆದ ಇಡಿ ದಾಳಿ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

ದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆಬಂದಾಗಿನಿಂದಲೂ ದಲಿತರು ಮತ್ತು ಅಹಿಂದ ನಾಯಕರ ಮೇಲೆ ನಿರಂತರ ಐಟಿ, ಇಡಿಯಂತಹ ತನಿಖಾ ಸಂಸ್ಥೆಗಳ ದಾಳಿ ನಡೆಯುತ್ತಿವೆ. ಇದರ ಮುಂದುವರಿದ ಭಾಗವಾಗಿ ಈಗ ಹಿಂದುಳಿದ ವರ್ಗಗಳ ನಾಯಕ ಸತೀಶ್ ಜಾರಕಿಹೊಳಿ ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ದಾಳಿ ಮಾಡಲಾಗಿದೆ. ಇದು ಸಂಪೂರ್ಣ ರಾಜಕೀಯ ಪ್ರೇರಿತ ಎಂಬುದು ಮೇಲ್ನೋಟಕ್ಕೆ ತಿಳಿಯುತ್ತದೆ. ಇದು ಹೀಗೇ ಮುಂದುವರಿದರೆ ರಾಜ್ಯದಾದ್ಯಂತ ಉಗ್ರವಾದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಸತೀಶ್ ಜಾರಕಿಹೊಳಿ ಸಮಾಜದೊಂದಿಗೆ ಬೆರೆತಿರುವ ಜನನಾಯಕ. ಯಾವಾಗಲೂ ಅಸಮರ್ಥರು, ಬಡವರು ಮತ್ತು ಹಿಂದುಳಿದವರ ಏಳಿಗೆಗಾಗಿ ಶ್ರಮಿಸುತ್ತಿರುವ ನಾಯಕ. ಮುಂದೆ ರಾಜ್ಯದ ಮುಖ್ಯಮಂತ್ರಿ ಆಗುವ ಅರ್ಹತೆ ಇರುವಂತಹ ಅಹಿಂದ ನಾಯಕ. ಅಂತಹ ವ್ಯಕ್ತಿಯ ವಿರುದ್ದ ತನಿಖಾ ಸಂಸ್ಥೆಗಳನ್ನು ಬಿಟ್ಟು ಚಾರಿತ್ರ್ಯವಧೆ ಮಾಡುವುದು ಶೋಭೆ ತರುವಂತದಲ್ಲ ಎಂದು ಕೆ.ಆರ್.ಶ್ರೀಧರ್‌ ಅಸಮಾಧಾನ ವ್ಯಕ್ತಪಡಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಹನುಮಂತು, ವಾಲ್ಮೀಕಿ ಮಠದ ಟ್ರಸ್ಟಿ ಎಂ.ಎಸ್.ಬಸವರಾಜಪ್ಪ, ಆರ್.ಉಮೇಶ್, ದಸಂಸ ಜಿಲ್ಲಾ ಸಂಚಾಲಕ ಚಿನ್ನಯ್ಯ, ಎಚ್.ಎನ್.ನಾಗರಾಜ್, ಶೇಖರಪ್ಪ, ಆರ್.ಸಂದೀಪ್, ಕೆ.ರಂಗನಾಥ, ಎ.ಎಮ್.ಮಲ್ಲಿಕಾರ್ಜುನ್, ಎಸ್.ಪಿ.ಜಯದೇವಪ್ಪ, ಕೆ.ರಾಜಪ್ಪ, ಕೆ.ಲೋಕೇಶ್, ಚಂದ್ರಪ್ಪ, ನಾಗರಾಜ್, ಎನ್.ಟಿ.ಸಂಗನಾಥ್, ಕೃಷ್ಣಪ್ಪ ಸೇರಿದಂತೆ ಇತರರು ಇದ್ದರು.