ಕೇಂದ್ರದ ನಿರ್ಧಾರ ರೈತರ ಹಿತ ಸ್ನೇಹಿ: ಬಿ.ಎಂ.ಸತೀಶ

| Published : Oct 27 2024, 02:10 AM IST

ಸಾರಾಂಶ

ಬಿಜೆಪಿ ಜಿಲ್ಲಾ ವಕ್ತಾರ ಬಿ.ಎಂ.ಸತೀಶ ಕೊಳೇನಹಳ್ಳಿ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸೆ.28ರಂದು ಅಕ್ಕಿ ರಫ್ತಿಗೆ ಇದ್ದ ನಿಷೇಧವನ್ನು ರದ್ಧುಗೊಳಿಸಿದ್ದು, ಇದೀಗ ಅಕ್ಕಿಯ ಕನಿಷ್ಟ ರಫ್ತು ದರ (ಮಿನಿಮಮ್ ಎಕ್ಸಪೋರ್ಟ್‌ ಪ್ರೈಸ್) ಸಹ ಹಿಂಪಡೆದಿದ್ದು, ಮುಂದಿನ ದಿನಗಳಲ್ಲಿ ಬತ್ತದ ದರ ಹೆಚ್ಚಲಿದೆ. ಕೇಂದ್ರದ ಈ ನಿರ್ಧಾರ ರೈತ ಸ್ನೇಹಿಯಾಗಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಬಿ.ಎಂ.ಸತೀಶ ಕೊಳೇನಹಳ್ಳಿ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ತಿಳಿಸಿದ ಅವರು, ವಿದೇಶಗಳಿಗೆ ಬಿಳಿ ಅಕ್ಕಿ ರಫ್ತು ಮಾಡಲು ಪ್ರತಿ ಟನ್‌ಗೆ 490 ಡಾಲರ್‌ ಎಂಇಪಿ ನಿಗದಿಪಡಿಸಲಾಗಿತ್ತು. ಕಳೆದ ವರ್ಷ ಜುಲೈ 20ರಂದು ಅಕ್ಕಿ ರಫ್ತು ನಿಷೇಧಿಸಲಾಗಿತ್ತು. ಪ್ರಸ್ತುತ ಅಕ್ಕಿ ರಫ್ತು ನಿಷೇಧ ಮತ್ತು ಕನಿಷ್ಟ ರಫ್ತು ಬೆಲೆ(ಎಂಇಪಿ) ನಿಷೇಧಿಸಿದ ಆದೇಶವು ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ವಿದೇಶೀ ವ್ಯಾಪಾರ ನಿರ್ದೇಶನಾಲಯ ಅಧಿಸೂಚನೆ ಹೊರಡಿಸಿದೆ ಎಂದರು.

ಸರ್ಕಾರಿ ದಾಸ್ತಾನು ಮಳಿಗೆಗಳಲ್ಲಿ ಅಕ್ಕಿ ದಾಸ್ತಾನು ಹೆಚ್ಚಾಗಿದೆ. ಚಿಲ್ಲರೆ ಅಕ್ಕಿ ಮಾರಾಟ ನಿಯಂತ್ರಣದಲ್ಲಿರುವುದರಿಂದ ಅಕ್ಕಿ ರಫ್ತು ಉತ್ತೇಜನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಬತ್ತ ಬೆಳೆಯುವ ರೈತರಿಗೆ ನ್ಯಾಯ ಯುತಬೆಲೆ ಪಡೆಯಲು ಅನುಕೂಲವಾಗಲಿದೆ. ಕಳೆದ 10-12 ದಿನಗಳಿಂದ ಬಿಡದೆ ಸುರಿಯುತ್ತಿರುವ ಮಳೆಯಿಂದ ಹುಲುಸಾಗಿ ಬೆಳೆದಿರುವ ಬತ್ತದ ಪೈರು ನೆಲಕ್ಕುರುಳಿ, ಚಾಪೆ ಹಾಸಿದಂತಾಗಿದೆ. ಕಾಳು ಕಟ್ಟಿದ ಅಪಾರ ಪ್ರಮಾಣದ ಬತ್ತದ ಬೆಳೆ ಹಾನಿಗೀಡಾಗಿದೆ. ಸಾಲ ಮಾಡಿ ಬೆಳೆದ ಬೆಳೆ ಕೈಗೆ ಸಿಗುವ ವೇಳೆಗೆ ನೆಲಕ್ಕೆ ಬಿದ್ದಿದೆ ಎಂದು ಅವರು ಹೇಳಿದ್ದಾರೆ.

ಅತಿವೃಷ್ಟಿ ತಂದೊಡ್ಡುತ್ತಿರುವ ಹಾನಿಯಿಂದಾಗಿ ರೈತರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಉಪ ಚುನಾವಣೆಗಳ ಮೂಡಿನಲ್ಲಿರುವ ರಾಜ್ಯದ ಕಾಂಗ್ರೆಸ್ ಸರ್ಕಾರ ತಕ್ಷಣ ಬೆಳೆ ಹಾನಿ ಸಮೀಕ್ಷೆ ಕೈಗೊಂಡು, ರೈತರಿಗೆ ಸೂಕ್ತ ಪರಿಹಾರ ಘೋಷಣೆ ಮಾಡಬೇಕು ಎಂದು ಬಿ.ಎಂ.ಸತೀಶ ಕೊಳೇನಹಳ್ಳಿ ಒತ್ತಾಯಿಸಿದ್ದಾರೆ.