ಕ್ರಿಯಾ ಯೋಜನೆ ತಯಾರಿಸಲು ಸಿಇಓ ಸೂಚನೆ

| Published : Jul 17 2024, 01:00 AM IST

ಸಾರಾಂಶ

ಜಿಲ್ಲೆಯಲ್ಲಿ ಕೈಗೊಳ್ಳುವ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಕ್ರಿಯಾ ಯೋಜನೆ ತಯಾರಿಸಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು

ಕನ್ನಡಪ್ರಭ ವಾರ್ತೆ ತುಮಕೂರುಜಿಲ್ಲಾ ಪಂಚಾಯತಿಯ ಅನಿರ್ಬಂಧಿತ ಅನುದಾನದಡಿ ಜಿಲ್ಲೆಯಲ್ಲಿ ಕೈಗೊಳ್ಳುವ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಕ್ರಿಯಾ ಯೋಜನೆ ತಯಾರಿಸಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದರು.ಮಧುಗಿರಿ ತಾಲೂಕು ಪಂಚಾಯತ್ ಕಚೇರಿ ಸಭಾಂಗಣದಲ್ಲಿಂದು ನಡೆದ ಅಧಿಕಾರಿಗಳ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಮಾತನಾಡಿದ ಅವರು, ಅನಿರ್ಬಂಧಿತ ಅನುದಾನದಡಿ ಸರ್ಕಾರಿ ಶಾಲೆ, ವಸತಿ ನಿಲಯ, ಅಂಗನವಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಗ್ರಂಥಾಲಯ ಕಟ್ಟಡಗಳಿಗೆ ಗುಣಮಟ್ಟದ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲು ಆದ್ಯತೆ ನೀಡಬೇಕು. ಶಾಲೆಗಳಲ್ಲಿ ಅವಶ್ಯಕತೆ ಇರುವ ಶೌಚಾಲಯ ನಿರ್ಮಾಣ, ಶಾಲಾ ಕೊಠಡಿ ಮೇಲ್ಛಾವಣಿ, ಕಟ್ಟಡ ದುರಸ್ಥಿ, ಆವರಣ ಗೋಡೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ತಗಲುವ ಅಂದಾಜು ವೆಚ್ಚ ಪಟ್ಟಿ ತಯಾರಿಸಿ ಅನುಮೋದನೆ ಪಡೆದುಕೊಂಡು ಕಾಮಗಾರಿಯನ್ನು ಪ್ರಾರಂಭಿಸುವಂತೆ ಸೂಚಿಸಿದರು.ಜಿಲ್ಲೆಯ ಈ ಕಾಮಗಾರಿಗಳಿಗಾಗಿ ಜಿಲ್ಲಾ ಪಂಚಾಯತಿ ಅನಿರ್ಬಂಧಿತ ಅನುದಾನದಡಿ 2024-25ನೇ ಸಾಲಿಗಾಗಿ 4.41ಕೋಟಿ ರೂ. ಹಾಗೂ ತಾಲೂಕು ಪಂಚಾಯತಿ ಅನಿರ್ಬಂಧಿತ ಅನುದಾನದಡಿ 17.89ಕೋಟಿ ರೂ.ಗಳ ಅನುದಾನವನ್ನು ನಿಗದಿಪಡಿಸಲಾಗಿದೆ. ಈ ಪೈಕಿ ಶಿಕ್ಷಣ ಇಲಾಖೆ ಶಾಲಾ ಕೊಠಡಿ ದುರಸ್ತಿಗಾಗಿ ಶೇ.20, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಂಗನವಾಡಿ ದುರಸ್ತಿಗಾಗಿ ಶೇ. 15, ಆರೋಗ್ಯ ಇಲಾಖೆ ಆಸ್ಪತ್ರೆ ದುರಸ್ತಿಗಾಗಿ ಶೇ.20, ಗ್ರಂಥಾಲಯ ದುರಸ್ತಿಗಾಗಿ ಶೇ. 10, ಗ್ರಾಮೀಣ ರಸ್ತೆಗಳ ನಿರ್ವಹಣೆ ಶೇ.5, ಸಮಾಜ ಕಲ್ಯಾಣ ಇಲಾಖೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಸತಿ ನಿಲಯಗಳ ದುರಸ್ತಿಗಾಗಿ ಶೇ.25 ಹಾಗೂ ಪ.ಪಂಗಡ ಮತ್ತು ಅಲ್ಪಸಂಖ್ಯಾತರ ಸಮುದಾಯದ ವಸತಿ ನಿಲಯಗಳ ದುರಸ್ತಿಗಾಗಿ ಶೇ.5ರಷ್ಟು ಅನುದಾನವನ್ನು ಮೀಸಲಿಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲೆಯಲ್ಲಿ 294 ಆರೋಗ್ಯ ಮತ್ತು ಕ್ಷೇಮ ಕೇಂದ್ರ ನಿರ್ಮಾಣಕ್ಕೆ ಸರ್ಕಾರದಿಂದ ಅನುಮೋದನೆ ದೊರೆತಿದ್ದು ಎಲ್ಲಾ ತಾಲ್ಲೂಕುಗಳ ಆರೋಗ್ಯಾಧಿಕಾರಿಗಳು ಹಾಗೂ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳು ಪರಸ್ಪರ ಚರ್ಚಿಸಿ, ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದರಲ್ಲದೆ, ತ್ಯಾಜ್ಯ ವಿಲೇವಾರಿ ಘಟಕ ಹಾಗೂ ಸ್ಮಶಾನಗಳ ಬಳಿ ನಿವೇಶನ ಗುರುತಿಸದೆ ಗ್ರಾಮದ ಸುತ್ತ-ಮುತ್ತ ಜನ ವಸತಿ ಸಮೀಪ ಇರುವ ಹಾಗೂ ಜನ ಸಾಮಾನ್ಯರಿಗೆ ಅನುಕೂಲವಾಗುವಂತಹ ನಿವೇಶನಗಳನ್ನು ಗುರುತಿಸಿ 3 ದಿನದೊಳಗಾಗಿ ಇ-ಖಾತೆ ಸಹಿತ ಗುರುತಿಸಲಾದ ನಿವೇಶನಗಳ ನೈಜ ಮಾಹಿತಿಯನ್ನು ಸಲ್ಲಿಸಬೇಕೆಂದು ತಿಳಿಸಿದರು. ಜಿಲ್ಲೆಯಾದ್ಯಂತ ಕೈಗೊಂಡಿರುವ ತುಮಕೂರು ಆರೋಗ್ಯ ಅಭಿಯಾನ ಕಾರ್ಯಕ್ರಮದಡಿ 30 ವರ್ಷ ಮೇಲ್ಪಟ್ಟವರಲ್ಲಿ ರಕ್ತದೊತ್ತಡ, ಮಧುಮೇಹ, ರಕ್ತ ಹೀನತೆ ಮತ್ತು ಕ್ಯಾನ್ಸರ್ ಸೇರಿದಂತೆ 10ಕ್ಕೂ ಹೆಚ್ಚು ರೋಗಗಳಿಗೆ ಸಂಭಂದಿಸಿದಂತೆ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಈವರೆಗೂ ಗ್ರಾಮೀಣ ಭಾಗದಲ್ಲಿ 4ಲಕ್ಷ ಜನರ ಆರೋಗ್ಯ ತಪಾಸಣೆ ಕಾರ್ಯ ಕೈಗೊಂಡಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಗ್ರಾಮ ಪಂಚಾಯತಿ ಸಹಯೋಗದಲ್ಲಿ ಈ ಆರೋಗ್ಯ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದರು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಸ್ವಮಿತ್ವ ತಂತ್ರಾಂಶದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿರುವ ಆಸ್ತಿಗಳ ವಿವರಗಳನ್ನು ದಾಖಲಿಸಲಾಗುತ್ತಿದ್ದು, ಈಗಾಗಲೇ ಜಿಲ್ಲೆಯ ಹಲವು ಗ್ರಾಮಗಳ ಆಸ್ತಿ ವಿವರಗಳನ್ನು ದಾಖಲಿಸುವ ಕಾರ್ಯ ಪೂರ್ಣಗೊಂಡಿದೆ. ಗ್ರಾಮಗಳ ಆಸ್ತಿ ವಿವರಗಳನ್ನು ದಾಖಲಿಸುವ ಉದ್ದೇಶದಿಂದ ಇ-ಸ್ವತ್ತು ಅಭಿಯಾನವನ್ನು ಹಮ್ಮಿಕೊಂಡಿದ್ದು, ಅಭಿಯಾನದಲ್ಲಿ ಪ್ರತಿ ತಾಲೂಕಿನಿಂದ 50,00 ಆಸ್ತಿಗಳ ಇ-ಸ್ವತ್ತು ಮಾಡಲು ಗುರಿ ನೀಡಿದರು. ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ನಾರಾಯಣಸ್ವಾಮಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದರು.