ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಉತ್ತಮ ಆರೋಗ್ಯಕ್ಕಾಗಿ ಪ್ರತಿಯೊಬ್ಬರೂ ಆಹಾರ ಪದ್ಧತಿಯಲ್ಲಿ ಸಿರಿಧಾನ್ಯಗಳನ್ನು ಬಳಕೆ ಮಾಡುವಂತೆ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು.ನಗರದ ಸರ್ ಎಂ. ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ,ಜಿಲ್ಲಾಪಂಚಾಯತ್,ಕೃಷಿ ಇಲಾಖೆ ಮಂಗಳವಾರ ಆಯೋಜಿಸಿದ್ದ ಸಿರಿಧಾನ್ಯಗಳ ನಡಿಗೆ ಆರೋಗ್ಯದ ಕಡೆಗೆ ಕಾರ್ಯಕ್ರಮದ ಪ್ರಯುಕ್ತ ಸಿರಿಧಾನ್ಯಗಳ ಮಹತ್ವ ಸಾರುವ ಜಾಗೃತಿ ಕರಪತ್ರಗಳು ಮತ್ತು ಭಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಸಿರಿಧಾನ್ಯ ಬೆಳೆಯಲು ಪ್ರೋತ್ಸಾಹಿಸಿಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ಸಮ್ಮೇಳನ ನಡೆಯುತ್ತಿದ್ದು ಅದಕ್ಕೆ ಪೂರ್ವಭಾವಿಯಾಗಿ ನಮ್ಮ ಜಿಲ್ಲೆಯಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ದೃಷ್ಟಿಯಿಂದ ಈ ನಡಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ. ಸಿರಿಧಾನ್ಯಗಳ ಬೆಳೆಗಳನ್ನು ಬೆಳೆಯಲು ಹೆಚ್ಚು ಒಲವು ನೀಡಿ ಪ್ರೋತ್ಸಾಹಿಸಬೇಕು. ಸಿರಿಧಾನ್ಯಗಳು ನಮ್ಮ ಪರಿಸರ ಸ್ನೇಹಿಯಾಗಿದ್ದು ಮಳೆ ಆಶ್ರಿತ ಪ್ರದೇಶಗಳಲ್ಲಿ ಕಡಿಮೆ ನೀರಿನ ಉಪಯೋಗದಲ್ಲಿ ಬೆಳೆಯಬಹುದು ಎಂದರು.
ಪ್ರತಿ ದಿನ ಯಾರು ಸಿರಿಧಾನ್ಯಗಳನ್ನು ಸೇವಿಸುತ್ತಾರೊ ಅವರ ದೇಹ ಮತ್ತು ಮನಸ್ಸು ಸಧೃಡವಾಗಿರುತ್ತದೆ. ಸಿರಿಧಾನ್ಯಗಳನ್ನು ಸೇವನೆ ಮಾಡುವುದರಿಂದ ನಿಧಾನವಾಗಿ ಜೀರ್ಣಕ್ರಿಯೆ ನಡೆಯುತ್ತದೆ. ಮನುಷ್ಯನ ಸುಸ್ಥಿರ ಆರೋಗ್ಯ ಕಾಪಾಡಲು ರಾಗಿ, ನವಣೆ, ಹಾರಕ, ಸಾಮೆ, ನೆಲ್ಲಕ್ಕಿ, ಬರುಗು, ಕೊರಲೆ, ಊದಲು, ಸಜ್ಜೆ ಮತ್ತು ಜೋಳ ಹೀಗೆ ಹಲವಾರು ಬಗೆಯ ಸಿರಿಧಾನ್ಯಗಳಲ್ಲಿನ ಪೌಷ್ಠಿಕಾಂಶಗಳು ಸಹಕಾರಿಯಾಗಿವೆ ಎಂದರು.ಜಿಲ್ಲೆಯಲ್ಲಿ ಸಿರಿಧಾನ್ಯ ಕೃಷಿನಮ್ಮ ಜಿಲ್ಲೆಯಲ್ಲಿ ಸಿರಿಧಾನ್ಯಗಳಿಗೆ ಹೆಚ್ಚು ಉತ್ತೇಜನ ನೀಡುವ ದೃಷ್ಟಿಯಿಂದ ಸುಮಾರು 400 ಹೇಕ್ಟರ್ ಭೂಮಿಯಲ್ಲಿ ಸಿರಿಧಾನ್ಯಗಳ ಬೆಳೆಗಳನ್ನು ಬೆಳೆಯುವುದಕ್ಕೆ ಕೃಷಿ ಇಲಾಖೆ ಪ್ರೋತ್ಸಾಹವನ್ನು ನೀಡಿದೆ. ರೈತರು ಸಹ ಸಲಹೆಗಳನ್ನು ಕೃಷಿ ಇಲಾಖೆಯಿಂದ ಪಡೆದುಕೊಂಡು ಸಿರಿಧಾನ್ಯಗಳ ಬೆಳೆಯನ್ನು ಬೆಳೆಯುವ ನಿಟ್ಟಿನಲ್ಲಿ ರೈತ ಬಾಂಧವರು ಮುಂದಾಗಿದ್ದಾರೆ ಎಂದು ತಿಳಿಸಿದರು.ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಜಾವೀದಾ ನಾಸಿಮ್ ಖಾನಂ ಮಾತನಾಡಿ, ಪ್ರತಿಯೊಬ್ಬರು ದಿನನಿತ್ಯ ಸಿರಿ ಧಾನ್ಯಗಳನ್ನು ಆಹಾರದಲ್ಲಿ ಸೇವಿಸಿದರೇ ಉತ್ತಮ ಆರೋಗ್ಯವನ್ನು ಹೊಂದಬಹುದು. ಮುಂದಿನ ದಿನಗಳಲ್ಲಿ ಮಿಲೆಟ್ ವಾರ ಸ್ಪರ್ಧೆ ನಡೆಸಿ ವಿಜೇತರಾದವರನ್ನು ಅಂತರಾಷ್ಟ್ರೀಯ ಮಿಲೆಟ್ ವಾರ ಸ್ಪರ್ಧೆಗೆ ಆಯ್ಕೆ ಮಾಡಲಾಗುತ್ತದೆ ಎಂದರು.ವಿವಿಧ ರೋಗಗಳ ನಿಯಂತ್ರಣಸಿರಿಧಾನ್ಯಗಳಿಗೆ ಹಿಂದಿನಿಂದ ನಮ್ಮ ಪೂರ್ವಿಕರು ಹೆಚ್ಚು ಒತ್ತು ನೀಡುತ್ತಿದ್ದರು.. ಈ ಧಾನ್ಯಗಳ ಬಳಕೆಯಿಂದ ಮಧುಮೇಹ, ಹೃದಯರೋಗ, ಕರುಳುಬೇನೆ ಹಾಗೂ ಕ್ಯಾನ್ಸರ್ ನಂತಹ ಇತ್ಯಾದಿ ಕಾಯಿಲೆಗಳನ್ನು ತಡೆಯಬಹುದಾಗಿದೆ ಸಿರಿಧಾನ್ಯಗಳಿಂದ ರೋಗನಿರೋಧಕ ಶಕ್ತಿಯನ್ನು ನೀಡುತ್ತವೆ. ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಮತ್ತು ಜಾಗೃತಿ ಕಾರ್ಯಕ್ರಮವನ್ನು ಜನವರಿ 23 ರಿಂದ 25 ರ ವರಗೆ ಬೆಂಗಳೂರಲ್ಲಿ ಆಯೋಜಿಸಲಾಗುತ್ತದೆ. ಈ ಮೇಳಕ್ಕೆ ಜಿಲ್ಲೆಯ ಸಮಸ್ತ ಜನರು ಆಗಮಿಸಬೇಕು ಎಂದು ಮನವಿ ಮಾಡಿದರು.
ನಗರಸಭೆ ಅಧ್ಯಕ್ಷ ಎ.ಗಜೇಂದ್ರ, ಜಿಲ್ಲಾಆರೋಗ್ಯ ಮತ್ತು ಕುಟುಂಭ ಕಲ್ಯಾಣಾಧಿಕಾರಿ ಡಾ.ಎಸ್.ಎಸ್.ಮಹೇಶ್ ಕುಮಾರ್, ತಹಸೀಲ್ದಾರ್ ಅನಿಲ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ಧೇಶಕ ಜುಂಜಣ್ಣ, ಕ್ರೀಡಾಪಟು ಮಂಚನಬಲೆ ಶ್ರೀನಿವಾಸ್, ಮುದ್ದೇನಹಳ್ಳಿ ಗೋವಿಂದರೆಡ್ಡಿ, ಪ್ರಗತಿ ಪರ ಸಿರಿಧಾನ್ಯ ಬೆಳೆಗಾರರು, ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ವಾಕಥಾನ್ ನಲ್ಲಿ ಭಾಗವಹಿಸಿದ್ದರು.