ದೇಶಿಯ ಆಹಾರದ ಕಂಪು ಪಸರಿಸಿದ ಸಿರಿಧಾನ್ಯ ಮೇಳ

| Published : Oct 16 2023, 01:45 AM IST

ದೇಶಿಯ ಆಹಾರದ ಕಂಪು ಪಸರಿಸಿದ ಸಿರಿಧಾನ್ಯ ಮೇಳ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತದ ದೇಶಿಯ ಆಹಾರ ತಳಿಗಳಾದ ಸಿರಿಧಾನ್ಯಗಳಿಗೆ ಜಾಗತಿಕ ಬೇಡಿಕೆ ಸೃಷ್ಟಿಸುವುದು ಮತ್ತು ಜನರಿಗೆ ಪೌಷ್ಟಿಕಾಂಶದ ಆಹಾರವನ್ನು ಒದಗಿಸುವುದು ಈ ಘೋಷಣೆಯ ಉದ್ದೇಶವಾಗಿದೆ. ಇದನ್ನು ಸಾಕಾರಗೊಳಿಸಲು ಸಹಜ ಸಮೃದ್ಧ ಸಾವಯವ ಕೃಷಿಕರ ಬಳಗ, ದೇವಧಾನ್ಯ ರೈತ ಉತ್ಪಾದಕರ ಕಂಪನಿಗಳು ರಾಜ್ಯಾದ್ಯಂತ ಸಿರಿಧಾನ್ಯಗಳ ಮೇಳಗಳ ಆಯೋಜಿಸುವ ಮೂಲಕ ಶ್ರಮಿಸುತ್ತಿವೆ.
ಶಿವಾನಂದ ಅಂಗಡಿ ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ ವಾರಾಂತ್ಯಕ್ಕೆ ನೀವು ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಕಾರು ಮೇಳ, ದ್ವಿಚಕ್ರ ವಾಹನ ಮೇಳ ಸೇರಿದಂತೆ ಬೇರೆ ಬೇರೆ ಮಾರಾಟ ಮೇಳಗಳನ್ನು ನೋಡಿರುತ್ತೀರಿ, ಆದರೆ ಈ ಬಾರಿ ಹುಬ್ಬಳ್ಳಿಯ ಮೂರುಸಾವಿರ ಮಠದ ಆವರಣದಲ್ಲಿರುವ ಮೂಜಗಂ ಸಭಾಂಗಣದಲ್ಲಿ ಶನಿವಾರ, ಭಾನುವಾರ ನಡೆದ ''''ಸಿರಿಧಾನ್ಯಗಳ ಮೇಳ'''' ಸಾವಿರಾರು ಸಂಖ್ಯೆಯಲ್ಲಿ ಜನರ ಆಕರ್ಷಿಸುವ ಜತೆಗೆ ದೇಶಿಯ ಆಹಾರ ತಳಿಗಳ ಕಂಪು ಪಸರಿಸುವಲ್ಲಿ ಯಶಸ್ವಿಯಾಗಿದೆ. ಎರಡು ದಿನ ನಡೆದ ಮೇಳದಲ್ಲಿ ಮೂರು ಸಾವಿರಕ್ಕೂ ಅಧಿಕ ಜನ ಭೇಟಿ ನೀಡಿದ್ದಾರೆ. ಮಾಜಿ ಸಂಸದ ಐ.ಜಿ. ಸನದಿ, ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಭೇಟಿ ನೀಡಿ, ಸಾವಯುವ ಸಿರಿಧಾನ್ಯಗಳ ಕುರಿತು ಮಾಹಿತಿ ಪಡೆದಿದ್ದಾರೆ. ಆಯಾ ಸಿರಿಧಾನ್ಯಗಳ ಮಹತ್ವ ಗೊತ್ತಾಗುತ್ತಿದ್ದಂತೆ ಸ್ವತಃ ಖರೀದಿ ಮಾಡಿ ಮನೆಗೆ ತೆಗೆದುಕೊಂಡು ಹೋಗಿದ್ದಾರೆ. ವಿಶ್ವಸಂಸ್ಥೆ 2023ನೇ ವರ್ಷವನ್ನು "ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ "ವೆಂದು ಘೋಷಿಸಿದೆ. ಭಾರತದ ದೇಶಿಯ ಆಹಾರ ತಳಿಗಳಾದ ಸಿರಿಧಾನ್ಯಗಳಿಗೆ ಜಾಗತಿಕ ಬೇಡಿಕೆ ಸೃಷ್ಟಿಸುವುದು ಮತ್ತು ಜನರಿಗೆ ಪೌಷ್ಟಿಕಾಂಶದ ಆಹಾರವನ್ನು ಒದಗಿಸುವುದು ಈ ಘೋಷಣೆಯ ಉದ್ದೇಶವಾಗಿದೆ. ಇದನ್ನು ಸಾಕಾರಗೊಳಿಸಲು ಸಹಜ ಸಮೃದ್ಧ ಸಾವಯವ ಕೃಷಿಕರ ಬಳಗ, ದೇವಧಾನ್ಯ ರೈತ ಉತ್ಪಾದಕರ ಕಂಪನಿಗಳು ರಾಜ್ಯಾದ್ಯಂತ ಸಿರಿಧಾನ್ಯಗಳ ಮೇಳಗಳ ಆಯೋಜಿಸುವ ಮೂಲಕ ಶ್ರಮಿಸುತ್ತಿವೆ. ಈಗಾಗಲೇ ಮೈಸೂರು, ಬೆಂಗಳೂರು ಸೇರಿದಂತೆ 20 ಕಡೆಗೆ ಮೇಳಗಳು ನಡೆದಿದ್ದು, ಈ ವಾರಾಂತ್ಯಕ್ಕೆ ಹುಬ್ಬಳ್ಳಿಯಲ್ಲಿ ನಡೆದಿದ್ದು ವಿಶೇಷವಾಗಿದೆ. ಶಿರಸಿ, ಮೈಸೂರು, ಗದಗ, ಬಳ್ಳಾರಿ, ರಾಣಿಬೆನ್ನೂರ, ಕುಂದಗೋಳ ಸಿರಿಧಾನ್ಯಗಳ ಬೆಳೆಗಾರರಿಗೆ ಈ ಮೇಳ ಮಾರಾಟಕ್ಕೆ ವೇದಿಕೆ ಕಲ್ಪಿಸಿದೆ. ಹವಾಮಾನ ಆಧರಿಸಿ ಕೃಷಿ ಮಾಹಿತಿ ಈ ಬಾರಿ ಮುಂಗಾರು ಮಳೆಗಳು ಸಂಪೂರ್ಣ ಕೈಕೊಟ್ಟು, ಕೃಷಿಯನ್ನೇ ನಂಬಿ ಬದುಕುತ್ತಿರುವ ಲಕ್ಷಾಂತರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಹೀಗೆ ಸಂಕಷ್ಟಕ್ಕೆ ಸಿಲುಕಿದವರನ್ನು ಮೇಲೆತ್ತುವ ಕೆಲಸವನ್ನು ಸಹಜ ಸಮೃದ್ಧ ಸಾವಯವ ಕೃಷಿಕರ ಬಳಗ ಕೈಗೊಂಡಿದ್ದು, ಭಾರತದಲ್ಲಿ ಹವಾಮಾನ ವೈಪರೀತ್ಯಕ್ಕೆ ತಕ್ಕಂತೆ ಬೇಸಾಯ ಮಾಡಲು ಎರಡು ದಿನ ರೈತರಿಗೆ ಮಾಹಿತಿ ನೀಡಲಾಗಿದೆ ಎನ್ನುತ್ತಾರೆ ಸಹಜ ಸಮೃದ್ಧ ಸಾವಯವ ಕೃಷಿಕರ ಬಳಗದ ಸಂಯೋಜಕ ಶಾಂತಕುಮಾರ. ಸಿರಿಧಾನ್ಯಗಳ ಬೆಳೆಗಾರರಿಗೆ ಮಾರುಕಟ್ಟೆ ಕಲ್ಪಿಸಲು ಮತ್ತು ಉತ್ಪಾದಕತೆ ಹೆಚ್ಚಿಸಲು ಧರ್ಮಸ್ಥಳ ಸಿರಿ ಮಿಲೆಟ್‌ ಸಂಸ್ಥೆ ಮುಂದಾಗಿದೆ. ಪೌಷ್ಟಿಕಾಂಶಗಳ ಮೂಲಕ ಜನರಲ್ಲಿ ಆರೋಗ್ಯ ಭಾಗ್ಯ ಹೆಚ್ಚಿಸಲು ಮತ್ತು ಭೂಮಿ ಸಂರಕ್ಷಣೆ ಮೂಲಕ ಅದರಲ್ಲಿ ಫಲವತ್ತತೆ ಹೆಚ್ಚಿಸಲು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಪಣ ತೊಟ್ಟಿದ್ದಾರೆ ಎನ್ನುತ್ತಾರೆ ಮೇಳದಲ್ಲಿ ಪಾಲ್ಗೊಂಡಿದ್ದ ಧರ್ಮಸ್ಥಳ ಸಿರಿ ಮಿಲೆಟ್‌ನ ಮಂಜುನಾಥ. ಮೇಳದಲ್ಲಿ 12 ವಿಧದ ಸಿರಿಧಾನ್ಯಗಳನ್ನು ಮಾರಾಟ ಮಾಡಿದ್ದೇವೆ. ಪೌಷ್ಟಿಕ ಆಹಾರ ಧಾನ್ಯಗಳ ಕುರಿತಂತೆ ಈಗೀಗ ಸಾಮಾಜಿಕ ಜಾಲತಾಣಗಳಿಂದ ಜನರಲ್ಲಿ ಜಾಗೃತಿ ಮೂಡುತ್ತಿದ್ದು, ಮೇಳದಲ್ಲಿ ಸಿರಿಧಾನ್ಯಗಳ ಮಾರಾಟವು ಹೆಚ್ಚಾಗಿರುವುದು ಸಂತಸ ತಂದಿದೆ ಎನ್ನತ್ತಾರೆ ದೇವಧಾನ್ಯ ರೈತ ಉತ್ಪಾದಕ ಕಂಪನಿ ಸಿಇಒ ಸೂರ್ಯಕಾಂತ ತೇಗುಣಸಿ, ಮೇಳದಲ್ಲಿ ಕೃಷಿಕರ ಜತೆಗೆ ಸಿರಿಧಾನ್ಯಗಳ ಕುರಿತು ಜಾಗೃತಿ ಮೂಡಿಸಲು ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ, ಮಹಿಳೆಯರಿಗೆ ಸಿರಿಧಾನ್ಯಗಳ ಅಡುಗೆ ತಯಾರಿಸುವ ಸ್ಪರ್ಧೆ ಏರ್ಪಡಿಸಿರುವುದು ಸಂತಸ ತಂದಿದೆ. ಕೃಷಿಕರ ಜತೆಗೆ ಸ್ಪರ್ಧೆಯಲ್ಲಿ ಭಾಗವಹಿಸಿದವರಿಂದ ಸಿರಿಧಾನ್ಯಗಳ ಮಾಹಿತಿ ಇತರರಿಗೆ ತಲುಪುತ್ತದೆ ಎನ್ನುತ್ತಾರೆ ಉಣಕಲ್‌ ನಿವಾಸಿ ಶಂಕರ ಸಾಮೋಜಿ,