ಸಾರಾಂಶ
ಸಿಂಧನೂರು ದಸರಾ ಉತ್ಸವ ಅಂಗವಾಗಿ ಕೃಷಿ ಇಲಾಖೆಯ ಸಹಯೋಗದಲ್ಲಿ ಸಿರಿಧಾನ್ಯ ಮತ್ತು ಸಾವಯವ ಉತ್ಪನ್ನಗಳ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾಲ್ನಡಿಗೆ ಜಾಥಾವನ್ನು ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಸಿಂಧನೂರು
ಪಟ್ಟಣದ ನಗರಸಭೆ ಆವರಣದಲ್ಲಿ ಸಿಂಧನೂರು ದಸರಾ ಉತ್ಸವ ಅಂಗವಾಗಿ ರೈತ ದಸರಾ ಅಡಿಯಲ್ಲಿ ದಸರಾ ಉತ್ಸವ ಸಮಿತಿ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಿರಿಧಾನ್ಯ ಮತ್ತು ಸಾವಯವ ಉತ್ಪನ್ನಗಳ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾಲ್ನಡಿಗೆ ಜಾಥಾಕ್ಕೆ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಚಾಲನೆ ನೀಡಿದರು.ನಂತರ ಡೊಳ್ಳು ವಾದ್ಯದೊಂದಿಗೆ ಆರಂಭಗೊಂಡ ಜಾಥಾ ಕಿತ್ತೂರು ರಾಣಿ ಚೆನ್ನಮ್ಮ ವೃತ್ತ, ಕನಕದಾಸ ವೃತ್ತ, ಸಾರ್ವಜನಿಕ ಆಸ್ಪತ್ರೆ ರಸ್ತೆ, ಗಾಂಧಿ ಸರ್ಕಲ್, ಬಸ್ ನಿಲ್ದಾಣ ರಸ್ತೆ, ಬಸವೇಶ್ವರ ವೃತ್ತ, ಬಾಬು ಜಗಜೀವನರಾಂ ವೃತ್ತದ ಮೂಲಕ ಎಪಿಎಂಸಿಗೆ ತಲುಪಿತು.
ಜಾಥಾ ಉದ್ದಕ್ಕೂ ವಿವಿಧ ಪಕ್ಷಗಳ ರಾಜಕೀಯ ಮುಖಂಡರು, ತಾಲೂಕು ಮಟ್ಟದ ಅಧಿಕಾರಿಗಳು, ವಿವಿಧ ಕಾಲೇಜುಗಳ ವಿದ್ಯಾರ್ಥಿನಿಯರು ಬಿಳಿ ಟೀಶರ್ಟ್ ಧರಿಸಿ, ಕೈಯಲ್ಲಿ ಸಿರಿಧಾನ್ಯಗಳ ಮಹತ್ವ ಕುರಿತಾದ ಭಿತ್ತಿಪತ್ರಗಳನ್ನು ಹಿಡಿದುಕೊಂಡು ಘೋಷಣೆ ಕೂಗಿ ಸಾರ್ವಜನಿಕರ ಗಮನ ಸೆಳೆದರು.ಶಾಸಕ ಹಂಪನಗೌಡ ಬಾದರ್ಲಿ, ಮಾಜಿ ಸಚಿವ ವೆಂಕಟರಾವ್ ನಾಡಗೌಡ, ತಹಸೀಲ್ದಾರ್ ಅರುಣ್ ಎಚ್.ದೇಸಾಯಿ, ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಜಯಪ್ರಕಾಶ, ಸಹಾಯಕ ನಿರ್ದೇಶಕ ನಜೀರ್ ಅಹ್ಮದ್, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ, ಸೈಯ್ಯದ್ ಆಸೀಫ್ ಇದ್ದರು.