ಸಾರಾಂಶ
ಎಕೊ ಇಂಡಿಯಾ ಸಂಸ್ಥೆಯು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಸಹಯೋಗದಲ್ಲಿ ‘ಗರ್ಭಗೊರಳಿನ ಕ್ಯಾನ್ಸರ್ ನಿವಾರಣೆಗೆ ವೇಗವರ್ಧನೆ ಕರ್ನಾಟಕದ ಚಳವಳಿ’ ಎಂಬ ಶೀರ್ಷಿಕೆಯಡಿ ಆರಂಭಿಸಿರುವ ಜಂಟಿ ಕಾರ್ಯಕ್ರಮಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಎಕೊ ಇಂಡಿಯಾ ಸಂಸ್ಥೆಯು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಸಹಯೋಗದಲ್ಲಿ ‘ಗರ್ಭಗೊರಳಿನ ಕ್ಯಾನ್ಸರ್ ನಿವಾರಣೆಗೆ ವೇಗವರ್ಧನೆ: ಕರ್ನಾಟಕದ ಚಳವಳಿ’ ಎಂಬ ಶೀರ್ಷಿಕೆಯಡಿ ಆರಂಭಿಸಿರುವ ಜಂಟಿ ಕಾರ್ಯಕ್ರಮಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಿದ್ದಾರೆ.ವಿಕಾಸಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಪ್ರತಿಯೊಬ್ಬ ಮಹಿಳೆಗೂ ಗರ್ಭಗೊರಳಿನ ಕ್ಯಾನ್ಸರ್ ತಡೆ, ಪರೀಕ್ಷೆ ಮತ್ತು ಚಿಕಿತ್ಸೆ ಲಭ್ಯವಾಗುವಂತೆ ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ. ಜೀವಗಳನ್ನು ಉಳಿಸಲು ಆರಂಭದಲ್ಲೇ ರೋಗಪತ್ತೆ ಮತ್ತು ಸಕಾಲಿಕ ಚಿಕಿತ್ಸೆ ನೀಡಲು ಆದ್ಯತೆ ನೀಡುತ್ತದೆ ಎಂದರು.
ಫಿಗೊ ಡಿವಿಷನ್ ಡೈರೆಕ್ಟರ್ ಡಾ। ಹೇಮಾ ದಿವಾಕರ್ ಮಾತನಾಡಿ, ಗರ್ಭಗೊರಳಿನ ಕ್ಯಾನ್ಸರ್ ತಡೆಗೆ ನಿರಂತರವಾಗಿ ಅರಿವು ಮತ್ತು ಸಹಯೋಗದ ಕ್ರಮಗಳು ಅಗತ್ಯವಾಗಿದೆ. ಕರ್ನಾಟಕದ ಈ ಚಳವಳಿಯು ಹೆಣ್ಣುಮಕ್ಕಳಿಗೆ ಆರೋಗ್ಯಕರ ಜೀವನ ನಡೆಸಲು ನೆರವಾಗುವ ಪ್ರಮುಖ ಕಾರ್ಯತಂತ್ರಗಳನ್ನು ಹೊಂದಿದೆ. ವಿಶ್ವ ಸಂಸ್ಥೆಯ 90-70-90 ಕಾರ್ಯತಂತ್ರಕ್ಕೆ ಪೂರಕವಾಗಿ ಲಸಿಕೆ ಮತ್ತು ಪರೀಕ್ಷೆಯನ್ನು ಹೊಂದಿದೆ. ರಾಷ್ಟ್ರೀಯ ಮತ್ತು ಜಾಗತಿಕ ಸಂಘಟನೆಗಳೊಂದಿಗೆ ಸಹಯೋಗ ಹೊಂದುತ್ತೇವೆ. ಅಬ್-ಗೈನ್ ಸಂಘಟನೆಯ ಸಹಕಾರದೊಂದಿಗೆ ಇತರೆ ರಾಜ್ಯಗಳೂ ಈ ಚಳವಳಿಯಲ್ಲಿ ಭಾಗವಹಿಸಲು ಉತ್ತೇಜಿಸಲಿದೆ ಎಂದರು.ಕಾರ್ಯಕ್ರಮದಲ್ಲಿ ಡಾ.ಅಲೆಕ್ಸಾಂಡರ್ ಥಾಮಸ್, ಡಾ.ವಿಶಾಲ್ ರಾವ್, ಡಾ.ರಾಜ್ ಶಂಕರ್ ಘೋಷ್ ಉಪಸ್ಥಿತರಿದ್ದರು.