ವಿದ್ಯುತ್ ವಾಹಕ ಚಾಲನೆ: ಸಾರ್ವನಿಕರಿಗೆ ಸೂಚನೆ

| Published : Jan 29 2025, 01:30 AM IST

ಸಾರಾಂಶ

ಮೈಸೂರು ವಲಯದ ಕೆಪಿಟಿಸಿಎಲ್‌ ಕೊಡಗು ಬೃಹತ್ ಕಾಮಗಾರಿ ವಿಭಾಗದ ವತಿಯಿಂದ ಸೋಮವಾರಪೇಟೆ ತಾಲೂಕಿನಲ್ಲಿ ನಿರ್ಮಾಣ ಹಂತದಲ್ಲಿದ್ದ 19.55 ಕಿ.ಮೀ. ಉದ್ದದ 66 ಕೆ.ವಿ ವಿದ್ಯುತ್ ಪ್ರಸರಣ ಮಾರ್ಗದ ಕಾಮಗಾರಿ ಪೂರ್ಣಗೊಂಡಿದೆ. ಈ ಮಾರ್ಗದಲ್ಲಿ ವಿದ್ಯುತ್ ಪ್ರವಾಹ ಆರಂಭವಾಗುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಮುನ್ಸೂಚನೆ ನೀಡಲಾಗಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಮೈಸೂರು ವಲಯದ ಕೆಪಿಟಿಸಿಎಲ್‌ ಕೊಡಗು ಬೃಹತ್ ಕಾಮಗಾರಿ ವಿಭಾಗದ ವತಿಯಿಂದ ಸೋಮವಾರಪೇಟೆ ತಾಲೂಕಿನಲ್ಲಿ ನಿರ್ಮಾಣ ಹಂತದಲ್ಲಿದ್ದ 19.55 ಕಿ.ಮೀ. ಉದ್ದದ 66 ಕೆ.ವಿ ವಿದ್ಯುತ್ ಪ್ರಸರಣ ಮಾರ್ಗದ ಕಾಮಗಾರಿ ಪೂರ್ಣಗೊಂಡಿದೆ. ಈ ಮಾರ್ಗದಲ್ಲಿ ವಿದ್ಯುತ್ ಪ್ರವಾಹ ಆರಂಭವಾಗುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಮುನ್ಸೂಚನೆ ನೀಡಲಾಗಿದೆ.

ನೂತನವಾಗಿ ನಿರ್ಮಿಸಿರುವ 66/33/11 ಕೆ.ವಿ. ಸೋಮವಾರಪೇಟೆ ವಿದ್ಯುತ್ ವಿತರಣಾ ಕೇಂದ್ರದ ಒಳಬರುವ ಹಾಲಿ 66/11 ಕೆ.ವಿ ಸುಂಟಿಕೊಪ್ಪ ವಿದ್ಯುತ್ ವಿತರಣಾ ಕೇಂದ್ರದಿಂದ ನೂತನ 66/33/11 ಕೆ.ವಿ ಸೋಮವಾರಪೇಟೆ ವಿದ್ಯುತ್ ವಿತರಣಾ ಕೇಂದ್ರದವರೆಗೆ ನಿರ್ಮಾಣ ಹಂತದಲ್ಲಿದ್ದ 19.55 ಕಿ.ಮೀ ಉದ್ದದ 66 ಕೆ.ವಿ. ವಿದ್ಯುತ್ ಪ್ರಸರಣ ಮಾರ್ಗದ ಕಾಮಗಾರಿ ಕೆಲಸ ಮುಕ್ತಾಯವಾಗಿದೆ. ಈ ಮಾರ್ಗವನ್ನು ಜ.30 ಗುರುವಾರ ಅಥವಾ ನಂತರದ ಯಾವುದೇ ದಿನಗಳಲ್ಲಿ ವಿದ್ಯುತ್‌ ಹರಿಸಿ ಚಾಲನೆಗೊಳಿಸಲಾಗುವುದು.

ಈ ಮಾರ್ಗವು ಕುಶಾಲನಗರ ಮತ್ತು ಸೋಮವಾರಪೇಟೆ ತಾಲೂಕಿನ ಹಾನಗಲ್ಲುಬಾಣೆ, ಹಾನಗಲ್ಲು, ಬಲಗುಂದ, ಕಿರಂಗದೂರು, ಐಗೂರು, ಕುಂಬೂರು, ಗರಗಂದೂರು, ಹರದೂರು, ಪಣ್ಯ, ಹುಲುಗುಲಿ ಮತ್ತು ಶುಂಟಿಕೊಪ್ಪ ಗ್ರಾಮಗಳ ಸರಹದ್ದಿನಲ್ಲಿ ಹಾದುಹೊಗುತ್ತದೆ.

ಈ 66 ಕೆವಿ ಮಾರ್ಗದ ವಿದ್ಯುತ್ ಗೋಪುರಗಳ ಮೇಲಿರುವ ವಿದ್ಯುತ್ ವಾಹಕವು ಚಾಲನೆಗೊಳ್ಳುವುದರಿಂದ ಸಾರ್ವನಿಜಕರು ಎಚ್ಚರವಹಿಸಬೇಕು. ಗೋಪುರಗಳಿಗೆ ದನಕರುಗಳನ್ನು ಮತ್ತು ಇತರೆ ಸಾಕುಪ್ರಾಣಿಗಳನ್ನು ಕಟ್ಟುವುದಾಗಲಿ, ಲೋಹದ ಪಟ್ಟಿ ತೆಗೆಯುವುದಾಗಲಿ, ಗೋಪುರಗಳನ್ನು ಹತ್ತುವುದಾಗಲಿ, ತಂತಿಗಳನ್ನು ಮುಟ್ಟುವುದಾಗಲಿ, ಗೋಪುರಗಳ ಕೆಳಗೆ ಮರಗಿಡಗಳನ್ನು ನೆಡುವುದಾಗಲಿ, ಗೋಪುರಗಳಿಗೆ ಬಳ್ಳಿ, ತಂತಿ, ಹಗ್ಗ ಮುಂತಾದುವುಗಳನ್ನು ಎಸೆಯುವುದಾಗಲಿ, ಗಾಳಿಪಟ ಮುಂತಾದುವುಗಳನ್ನು ಗೋಪುರದ ಹತ್ತಿರ ಹಾರಿಸುವುದಾಗಲಿ ಮಾಡಬಾರದು. ಹಾಗೆ ಮಾಡುವುದರಿಂದ ತುಂಬಾ ಅಪಾಯಕಾರಿ ಅಪಘಾತ ಮತ್ತು ಪ್ರಾಣಹಾನಿಯಾಗುವ ಸಂಭವವಿರುತ್ತದೆ ಎಂದು ತಿಳಿಸಲಾಗಿದೆ.

ಈ ಸೂಚನೆ ಉಲ್ಲಂಘಿಸಿದಲ್ಲಿ ಉಂಟಾಗುವ ಯಾವುದೇ ತರಹದ ಅಫಘಾತ ಅಥವಾ ಪ್ರಾಣಹಾನಿಗೆ ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮವು ಜವಾಬ್ದಾರರಲ್ಲ ಎಂದು ಸಾರ್ವಜನಿಕರ ಗಮನಕ್ಕೆ ತರಲಾಗಿದೆ ಎಂದು ಮೈಸೂರು ಎನ್‌ಆರ್.ಮೊಹಲ್ಲ ಕವಿಪ್ರನಿನಿ., ಕೊಡಗು ಬೃಹತ್ ಕಾಮಗಾರಿ ವಿಭಾಗದ ಕಾರ್ಯ ನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.