ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಸಿಇಟಿ ಪರೀಕ್ಷೆ ವೇಳೆ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ಜಿಲ್ಲಾ ಬ್ರಾಹ್ಮಣ ಸಭಾದಿಂದ ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಸೇರಿದ ಬ್ರಾಹ್ಮಣ ಸಭಾದ ಸದಸ್ಯರು ಅಲ್ಲಿಂದ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಬಳಿಗೆ ಆಗಮಿಸಿದರು. ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬ್ರಾಹ್ಮಣ ಸಮಾಜದ ಮೇಲೆ ಕೆಲವು ಸಮಾಜ ವಿದ್ರೋಹಿ ಮನಸ್ಥಿತಿಯ ಅವಿವೇಕಿಗಳು ಆಗಾಗ್ಗೆ ಉಪದ್ರವಗಳನ್ನು ಉಂಟುಮಾಡುತ್ತಿದ್ದಾರೆ. ಇದು ವಿಕೋಪ ಮತ್ತು ಅತಿರೇಕಕ್ಕೆ ಹೋಗುತ್ತಿದೆ. ಶಿವಮೊಗ್ಗ, ಬೀದರ್, ಸಾಗರ, ಧಾರವಾಡದಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಗೆ ಹಾಜರಾಗಲು ಹೋದಾಗ ಕೆಲವು ಅವಿವೇಕಿ ಅಧಿಕಾರಿಗಳು ಜನಿವಾರ ತೆಗೆದು ಹಾಕಿ ಬಂದರೆ ಮಾತ್ರ ಪರೀಕ್ಷೆ ಬರೆಯಲು ಅವಕಾಶ ನೀಡುತ್ತೇವೆ. ಇಲ್ಲದಿದ್ದರೆ ಪರೀಕ್ಷೆಯಿಂದ ವಂಚಿತರಾಗುವ ಬೆದರಿಕೆ ಹಾಕಿರುವುದು ಖಂಡನೀಯ ಎಂದರು.ಎರಡು ವರ್ಷಗಳಿಂದ ಕಷ್ಟಪಟ್ಟು ಓದಿ ಉನ್ನತ ವ್ಯಾಸಂಗಕ್ಕೆ ತೆರಳುವ ಮುನ್ನ ಅವರ ಭವಿಷ್ಯದ ಜೊತೆ ಆಟವಾಡಿ ಬ್ರಾಹ್ಮಣ ವಿದ್ಯಾರ್ಥಿಗಳ ಆತ್ಮಸ್ಥೈರ್ಯ ಕುಗ್ಗಿಸಿರುತ್ತಾರೆ. ಸಂವಿಧಾನ ವಿರೋಧಿ ಧೋರಣೆ ಅನುಸರಿಸುತ್ತಿದ್ದಾರೆ. ದಾರಗಳ ಎಳೆಗಳಿರುವ ಪವಿತ್ರವಾದ ಜನಿವಾರ, ಶಿವದಾರ, ಕಾಶಿದಾರದಲ್ಲಿ ಪರೀಕ್ಷೆಯಲ್ಲಿ ನಕಲು ಮಾಡುವ ಯಾವ ರೀತಿಯ ಡಿವೈಸ್‌ಗಳನ್ನು ಇಡಲು ಸಾಧ್ಯವಿದೆ. ಇದು ಸಾಮಾನ್ಯಜ್ಞಾನ. ಪರೀಕ್ಷಾ ನಿಯಮಗಳಲ್ಲೂ ಜನಿವಾರ ತೆಗೆಸಿ ಪರೀಕ್ಷೆ ಬರೆಯಬೇಕೆಂಬ ಯಾವ ನಿಯಮವೂ ಇಲ್ಲ. ಈ ವಿಚಾರದ ಪರಿಜ್ಞಾನವಿಲ್ಲದೆ ಸರ್ಕಾರಿ ಅಧಿಕಾರಿಗಳು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡಬಬಾರದು. ಇದೊಂದು ಉದ್ದೇಶ ಪೂರ್ವಕ ನಡವಳಿಕೆ ಎಂದು ಟೀಕಿಸಿದರು.
ಒಮ್ಮೆ ಜನಿವಾರ ಧರಿಸಿದಿರೆ ಜೀವನ ಪೂರ್ತಿ ಯಾವುದೇ ಕಾರಣಕ್ಕೂ ಜನಿವಾರವಿಲ್ಲದೆ ಇರಬಾರದು ಎಂಬುದು ನಾವು ನಂಬುವ ಶಾಸ್ತ್ರ. ಸರ್ಕಾರಕ್ಕೆ ಎಲ್ಲಾ ವರ್ಗದವರ ಹಿತಾಸಕ್ತಿ ಕಾಪಾಡುವುದು ಮುಖ್ಯವಾಗಿದೆ. ಪರೀಕ್ಷೆ ಬರೆಯುವುದಕ್ಕೂ ಜಾತಿ ಮನಸ್ಥಿತಿಯನ್ನು ಪ್ರದರ್ಶಿಸುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಪರೀಕ್ಷೆಯಿಂದ ವಂಚಿತರಾದ ವಿದ್ಯಾರ್ಥಿಗಳಿಗೆ ಸರ್ಕಾರದ ಕಾಲೇಜುಗಳಲ್ಲಿ ಉಚಿತ ಸೀಟ್‌ಗಳನ್ನು ನೀಡುವಂತೆ ಆಗ್ರಹಪಡಿಸಿದರು.ಪ್ರತಿಭಟನೆಯಲ್ಲಿ ಬ್ರಾಹ್ಮಣ ಸಭಾದ ಅಧ್ಯಕ್ಷ ಪ್ರೊ.ಎಚ್.ಎಸ್.ನರಸಿಂಹಮೂರ್ತಿ, ಕಾರ್ಯದರ್ಶಿ ಗೋಪಾಲಕೃಷ್ಣ ಶೆಣೈ, ಎಸ್.ಎಲ್.ಗೋಪಾಲ್, ಬೆಳ್ಳೂರು ಎಸ್.ಶ್ರೀಧರ್, ಡಾ.ಉಮಾದೊರೆಸ್ವಾಮಿ, ಬಿ.ಸಿ.ಮಧುಸೂಧನ, ಕೆ.ಪ್ರಭಾಕರ್, ವಿಜಯಲಕ್ಷ್ಮೀ, ಎಂ.ಎಸ್.ಪ್ರಸನ್ನಮಯ್ಯ, ಎಂ.ವೆಂಕಟೇಶ್, ಶ್ರೀಪತಿ ಭಾರದ್ವಾಜ್ ಇತರರಿದ್ದರು.