ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಸಿಇಟಿ ಪರೀಕ್ಷೆ ವೇಳೆ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ರಚಿಸಿ ಸೂಕ್ತ ತನಿಖೆ ನಡೆಸಬೇಕೆಂದು ಒತ್ತಾಯಿಸಿ ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದಿಂದ ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ನವನಗರದ ಜಿಲ್ಲಾಡಳಿತ ಭವನ ಮುಂಭಾಗ ಬ್ರಾಹ್ಮಣ ವಿದ್ಯಾರ್ಥಿಗಳನ್ನು ಗುರಿಯಾಗಿಸಿ ನಡೆದಿರುವ ಕೃತ್ಯ ಖಂಡಿಸಿದ ಮುಖಂಡರು ಬೆಂಗಳೂರಿನ ಮಡಿವಾಳದಲ್ಲಿರುವ ಕೃಪಾನಿಧಿ ಕಾಲೇಜು ಹಾಗೂ ಚಿಕ್ಕಬಳ್ಳಾಪುರದಲ್ಲಿರುವ ನಾಗಾರ್ಜುನ ಕಾಲೇಜಿನ ಪರೀಕ್ಷಾ ಕೇಂದ್ರಗಳಲ್ಲಿ ಕೃತ್ಯ ನಡೆದಿರುವುದರಿಂದ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮವಾಗಬೇಕು. ಎರಡೂ ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಯಬೇಕೆಂದು ಒತ್ತಾಯಿಸಿದರು.ಮಹಾಸಂಘದ ರಾಜ್ಯ ಉಪಾಧ್ಯಕ್ಷ ನಾರಾಯಣ ದೇಸಾಯಿ ಮಾತನಾಡಿ, ಬ್ರಾಹ್ಮಣರು ಜನಸಂಖ್ಯೆಯಲ್ಲಿ ಕಡಿಮೆ ಇರಬಹುದು. ಆದರೆ ಹಿಂದೂ ಸಮಾಜದ ಸಂಘಟನೆಯಲ್ಲಿ ಸಮಾಜದ ಪಾತ್ರ ದೊಡ್ಡದಾಗಿದೆ. ಸಿಇಟಿ ಪರೀಕ್ಷೆಯಲ್ಲಿ ಕಳೆದ ವರ್ಷವೂ ಬ್ರಾಹ್ಮಣ ವಿದ್ಯಾರ್ಥಿಯ ಜನಿವಾರವನ್ನು ಕಳಚಲಾಗಿತ್ತು. ಈ ಬಾರಿಯೂ ಈ ಸಂಪ್ರದಾಯ ಮುಂದುವರಿದಿರುವುದು ಸರಿಯಲ್ಲ. ಘಟನೆಗೆ ಸಂಬಂಧಿಸಿದಂತೆ ಒಂದು ಕಡೆ ಮಾತ್ರವೇ ಪ್ರಕರಣ ದಾಖಲಾಗಿದೆ. ಮತ್ತೊಂದರಲ್ಲಿ ದಾಖಲಾಗಿಲ್ಲ. ಕೂಡಲೇ ಎಫ್ಐಆರ್ ದಾಖಲಿಸಬೇಕು. ಇಂತಹ ಕೃತ್ಯಗಳು ಪುನರಾವರ್ತನೆ ಆಗದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.ಈ ವೇಳೆ ಪಂ.ಬಿಂದುಮಾಧವಾಚಾರ್ಯ ನಾಗಸಂಪಿಗೆ ಮಾತನಾಡಿ, ಈ ರೀತಿಯ ಘಟನೆಗಳು ಪುನರಾವರ್ತನೆ ಆಗುತ್ತಿವೆ. ಮೂಗುಬೊಟ್ಟು, ಮಂಗಳಸೂತ್ರ, ಜನಿವಾರ ತೆಗೆಸಿ ಹಿಂದೂ ಸಂಪ್ರದಾಯಗಳಿಗೆ ಅಪಚಾರವೆಸಗುವ ಕೆಲಸ ಮಾಡಲಾಗುತ್ತಿದೆ. ಜನಿವಾರಕ್ಕೆ ನಮ್ಮ ಸಂಪ್ರದಾಯದಲ್ಲಿ ಅತ್ಯಂತ ಮಹತ್ವ ನೀಡಲಾಗಿದೆ. ಪರೀಕ್ಷಾ ಸಂದರ್ಭದಲ್ಲಿ ಅವುಗಳನ್ನು ತೆಗೆಯುವಂತೆ ವಿದ್ಯಾರ್ಥಿಗಳ ಮೇಲೆ ಒತ್ತಡ ಹಾಕಿದರೆ ಅವರು ಪರೀಕ್ಷೆಯನ್ನೂ ಸರಿಯಾಗಿ ಬರೆಯುವುದಿಲ್ಲ. ಕಳೆದ ವರ್ಷ ಇಂತಹ ಘಟನೆ ನಡೆದಂತೆ ಮತ್ತೆಂದೂ ಪುನರಾವರ್ತನೆ ಆಗಬಾರದಿತ್ತು. ಆದರೆ ಈ ವರ್ಷವೂ ಕೆಲವು ಕಡೆಗಳಲ್ಲಿ ಜನಿವಾರ ತೆಗೆಸಿರುವುದು ನಾಚಿಗೇಡಿನ ಸಂಗತಿ ಎಂದರು.ಪಂ.ಭೀಮಸೇನಾಚಾರ್ಯ ಪಾಂಡುರಂಗಿ ಮಾತನಾಡಿ, ಪರೀಕ್ಷಾ ನೆಪದಲ್ಲಿ ಪರಿವೀಕ್ಷಕರಾದವರು ಹೇಯಕೃತ್ಯವೆಸಗಿದ್ದಾರೆ. ಭಾರತದ ಪರಂಪರೆ, ಸಂಸ್ಕೃತಿಯನ್ನು ಅರಿಯದಷ್ಟು ಹೀನಬುದ್ಧಿಯನ್ನು ಜನಿವಾರ ತೆಗೆಸಿದವರು ಹೊಂದಿದ್ದಾರೆಯೇ ಎಂದು ಪ್ರಶ್ನಿಸಿದರು.

ಮಹಾಸಂಘದ ಜಿಲ್ಲಾಧ್ಯಕ್ಷ ನರಸಿಂಹ(ನವೀನ) ದೇಶಪಾಂಡೆ ಮಾತನಾಡಿ, ಮಡಿವಾಳದ ಕೃಪಾನಿಧಿ ಕಾಲೇಜು ಹಾಗೂ ಚಿಕ್ಕಬಳ್ಳಾಪುರದ ನಾಗರಾರ್ಜುನ ಕಾಲೇಜಿನ ಸಿಇಟಿ ಪರೀಕ್ಷಾ ಕೇಂದ್ರಗಳ ವಿರುದ್ಧ ಸಮಗ್ರ ತನಿಖೆ ನಡೆಯಬೇಕು. ಘಟನೆಯಲ್ಲಿ ಹೊಣೆಗಾರರಾದ ಪ್ರಾಚಾರ್ಯರು, ಪರೀಕ್ಷಾ ಮೇಲ್ವಿಚಾರಕರು, ಭದ್ರತಾ ಸಿಬ್ಬಂದಿ ಹಾಗೂ ಅಧಿಕಾರಿಗಳ ಅಮಾನತು ಆಗಬೇಕು. ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಬೇಕು ಎಂದು ಒತ್ತಾಯಿಸಿದರು.ಪರೀಕ್ಷೆಯಲ್ಲಿ ತೊಂದರೆ ಅನುಭವಿಸಿದ ವಿದ್ಯಾರ್ಥಿಗಳಿಗೆ ವಿಶೇಷ ಪರಿಹಾರ ಕ್ರಮ ಒದಗಿಸಬೇಕು. ಸಿಇಟಿ ಸೆಲ್ ಆಯುಕ್ತರನ್ನು ಅಮಾನತುಗೊಳಿಸಬೇಕು, ಜವಾಬ್ದಾರಿಯುತ ಹೊಸ ಅಧಿಕಾರಿಗಳನ್ನು ನೇಮಕ ಮಾಡಬೇಕು. ಮುಂದಿನ ದಿನಗಳಲ್ಲಿ ಯಾವುದೇ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ಧಾರ್ಮಿಕ ಗುರುತುಗಳಿಗೆ ಧಕ್ಕೆ ಉಂಟಾಗದಂತೆ ಸ್ಪಷ್ಟ ಮಾರ್ಗಸೂಚಿ ಬಿಡುಗಡೆಗೊಳಿಸಬೇಕು. ತನಿಖಾ ವರದಿಯನ್ನು ಸಾರ್ವಜನಿಕವಾಗಿ ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿದರು.ಈ ವೇಳೆ ಪಂ.ವಿಜಯೇಂದ್ರಾಚಾರ್ಯ ಯತ್ನಟ್ಟಿ, ಪ್ರಧಾನ ಕಾರ್ಯದರ್ಶಿ ಗುರುರಾಜ ಕುಲಕರ್ಣಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮೋಹಿನಿ ಗಾಂವಕರ, ದ.ರಾ.ಪುರೋಹಿತ, ಪ್ರಹ್ಲಾದ ಹುಯಿಲಗೋಳ, ಸತ್ಯನಾರಾಯಣ ಗುಡಿ, ಅರುಣ ದೇಸಾಯಿ, ಕೆ.ಬಿ.ದೇಸಾಯಿ, ಅನಂತ ಮಳಗಿ, ಬದರಿಆಚಾರ್ಯ ಗುಡಿ, ಶ್ರೀಹರಿ ಡಂಬಳ, ಅರುಣ ಕುಲಕರ್ಣಿ, ಅಕ್ಷರಾ ಕುಲಕರ್ಣಿ,ಆನಂದ ಕಲಕೇರಿ ಮತ್ತಿತರರು ಇದ್ದರು. .