ಕನ್ನಡಪ್ರಭ ವಾರ್ತೆ ಬೆಂಗಳೂರುಎಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶು ವೈದ್ಯಕೀಯ ಸೇರಿ ವಿವಿಧ ವೃತ್ತಿಪರ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸುವ 2026ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಏ.23 ಮತ್ತು 24 ರಂದು ಸಿಸಿ ಕ್ಯಾಮೆರಾಗಳ ಕಣ್ಗಾವಲಿನಲ್ಲಿ ನಡೆಯಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ತಿಳಿಸಿದೆ.

ಏ.23ರಂದು ಭೌತ ವಿಜ್ಞಾನ ಮತ್ತು ರಸಾಯನ ವಿಜ್ಞಾನ ಹಾಗೂ ಏ.24ರಂದು ಗಣಿತ ಮತ್ತು ಜೀವ ವಿಜ್ಞಾನ ವಿಷಯಗಳ ಪರೀಕ್ಷೆಗಳು ನಡೆಯಲಿವೆ. ಒಟ್ಟು 3,30,479 ಅಭ್ಯರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ. 745 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಇದಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.

ನೇಮಕಾತಿ ಪರೀಕ್ಷೆ ರೀತಿ ಈ ಪರೀಕ್ಷೆಗೂ ಪರೀಕ್ಷಾ ಕೇಂದ್ರಗಳನ್ನು ಕ್ಯಾಮೆರಾ ಮೂಲಕ ಲೈವ್ ಆಗಿ ಮೇಲ್ವಿಚಾರಣೆ ಮಾಡಲಾಗುತ್ತದೆ. ಅದಕ್ಕಾಗಿ 15,265 ಕ್ಯಾಮೆರಾಗಳನ್ನು ಅಳವಡಿಸಿ ಕಂಟ್ರೋಲ್ ರೂಮ್ ಸ್ಥಾಪಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಸಿಇಒಗಳು ಮೇಲುಸ್ತುವಾರಿ ಮಾಡುತ್ತಾರೆ. ಬೆಂಗಳೂರಿನ 163 ಕೇಂದ್ರಗಳಲ್ಲಿ ಅತಿ ಹೆಚ್ಚು ಅಂದರೆ ಒಟ್ಟು 77,604 ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಇದರ ಕಮಾಂಡ್ ಸೆಂಟರ್ ಕೆಇಎ ಕಚೇರಿಯಲ್ಲಿ ಸ್ಥಾಪಿಸಲಾಗಿದೆ ಎಂದು ಎಚ್. ಪ್ರಸನ್ನ ವಿವರಿಸಿದರು.

970 ಅಂಗವಿಕಲ ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಹೊರನಾಡು ಮತ್ತು ಗಡಿನಾಡು ಕನ್ನಡಿಗರಿಗೆ ಏ.22ರಂದು ಕನ್ನಡ ಭಾಷಾ ಪರೀಕ್ಷೆಯು ಬೆಂಗಳೂರು, ಮಂಗಳೂರು, ವಿಜಯಪುರ ಮತ್ತು ಬೆಳಗಾವಿ ನಗರಗಳ ಒಟ್ಟು 5 ಕೇಂದ್ರಗಳಲ್ಲಿ ನಡೆಯಲಿದೆ ಎಂದು ಪ್ರಸನ್ನ ತಿಳಿಸಿದ್ದಾರೆ. -ಬಾಕ್ಸ್-

ಜಾಮರ್ ಅಳವಡಿಕೆ


ಪರೀಕ್ಷಾ ಅಕ್ರಮ ತಡೆಯಲು ಸೂಕ್ಷ್ಮ ಪರೀಕ್ಷಾ ಕೇಂದ್ರಗಳಲ್ಲಿ ಜಾಮರ್ ಅಳವಡಿಸಲಾಗಿದೆ. ಮುಖ ಚಹರೆ ಮತ್ತು ಕ್ಯೂಆರ್ ಕೋಡ್ ಮೂಲಕ ನೈಜತೆ ಪರಿಶೀಲನೆ ಮಾಡಲಾಗುತ್ತದೆ. ಹೀಗಾಗಿ, ಅಭ್ಯರ್ಥಿಗಳು 2 ತಾಸು ಮುಂಚಿತವಾಗಿ ಪರೀಕ್ಷಾ ಕೇಂದ್ರಕ್ಕೆ ಆಗಮಿಸುವಂತೆ ಕೆಇಎ ಸಲಹೆ ನೀಡಿದೆ.ಬಾಕ್ಸ್..

ಮಂಗಳಸೂತ್ರ ಧರಿಸಬಹುದು

ಪರೀಕ್ಷಾ ಕೇಂದ್ರದಲ್ಲಿ ಮಂಗಳಸೂತ್ರ ಹೊರತುಪಡಿಸಿ ಬೇರಾವುದೇ ಆಭರಣಗಳಿಗೆ ಅನುಮತಿಸುವುದಿಲ್ಲ. ಇನ್ನು ಮೊಬೈಲ್, ಬ್ಲೂಟೂತ್, ಇಯರ್ ಫೋನ್, ಮೈಕ್ರೋ ಫೋನ್ ಇತ್ಯಾದಿ ಎಲೆಕ್ಟ್ರಾನಿಕ್ ವಸ್ತುಗಳನ್ನು ಸಂಪೂರ್ಣ ನಿಷೇಧಿಸಲಾಗಿದೆ ಎಂದು ಕೆಇಎ ಹೇಳಿದೆ.

-ಬಾಕ್ಸ್-

ಮೊದಲ ಬಾರಿ ವಸ್ತ್ರ ಸಂಹಿತೆ ಅಧಿಕಾರಿ ನೇಮಕ

ಅನಗತ್ಯ ಗೊಂದಲ ತಪ್ಪಿಸಲು ಇದೇ ಮೊದಲ ಬಾರಿ ಪ್ರತಿ ಕೇಂದ್ರಕ್ಕೆ ಒಬ್ಬ ವಸ್ತ್ರ ಸಂಹಿತೆ ಅಧಿಕಾರಿಯನ್ನು ನೇಮಿಸಲಾಗಿದೆ. ಪುರುಷ/ಮಹಿಳಾ ಅಭ್ಯರ್ಥಿಗಳು ಅರ್ಧ ತೋಳಿನ ಬಟ್ಟೆ ಧರಿಸಬೇಕು. ಸಾಧ್ಯವಾದಷ್ಟು ಕಾಲರ್ ಇಲ್ಲದಿರುವುದನ್ನು ಹಾಕಿಕೊಂಡು ಬಂದರೆ ಉತ್ತಮ. ಪುರುಷರು, ಜೇಬು ಇಲ್ಲದ/ಕಡಿಮೆ ಜೇಬುಗಳಿರುವ ಸರಳ ಪ್ಯಾಂಟ್ ಧರಿಸಬೇಕು. ಕುರ್ತಾ ಪೈಜಾಮ/ಜೀನ್ಸ್ ಪ್ಯಾಂಟ್‌ಗೆ ಅವಕಾಶ ಇಲ್ಲ. ಶೂ ಕೂಡ ನಿಷೇಧಿಸಲಾಗಿದೆ.ಸಿಇಟಿ ಪರೀಕ್ಷೆ ಅಂಕಿ-ಅಂಶಗಳು

ಒಟ್ಟು ಅಭ್ಯರ್ಥಿಗಳು - 3,30,479ಗಂಡು: 1,44,380ಹೆಣ್ಣು: 1,86,099ಅಂಗವಿಕಲರು: 970ಪರೀಕ್ಷಾ ಕೇಂದ್ರ: 745ಸಿಸಿಟಿವಿ ಕ್ಯಾಮೆರಾ: 15,265