ಸಾರಾಂಶ
ಅಶೋಕ ಕೃತಿಯು ಮನೆಗಳಲ್ಲಿ ಇರಬೇಕು. ಆಗ ಭಾರತದ ಪುರಾತನ ಚರಿತ್ರೆಯ ಅರಿವು ಇರುತ್ತದೆ ಎಂದೆ ಎಂದು ಪ್ರೊ.ಮಲ್ಲೇಪುರಂ ವಿ. ವೆಂಕಟೇಶ್ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಹಿರಿಯ ಕವಿ ನಾ.ಕಸ್ತೂರಿ ಅವರು ಸಾಮ್ರಾಟ ಅಶೋಕನ ಬಗ್ಗೆ ಕನ್ನಡದಲ್ಲಿ ಮೊದಲ ಕೃತಿ ಹೊರತಂದಿದ್ದರು. ದಶಕಗಳ ಬಳಿಕ ಇದೀಗ ಡಾ। ಸಿ.ಚಂದ್ರಪ್ಪ ಅವರು ‘ಅಶೋಕ’ ಎಂಬ ಮಹಾನ್ ಕೃತಿಯನ್ನು ಹೊರ ತಂದಿದ್ದಾರೆ ಎಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ್ ಮೆಚ್ಚುಗೆ ವ್ಯಕ್ತಪಡಿಸಿದರು.ಮಿಥಿಕ್ ಸೊಸೈಟಿಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಸಪ್ನ ಬುಕ್ ಹೌಸ್ ಹೊರತಂದಿರುವ ಪ್ರಾಧ್ಯಾಪಕ ಡಾ। ಸಿ.ಚಂದ್ರಪ್ಪ ಅವರ ‘ಅಶೋಕ’ ಕೃತಿ ಲೋಕಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಾ.ಕಸ್ತೂರಿ ಅವರ ಅಶೋಕನಿಗೆ ಸಂಬಂಧಿಸಿದ ಕೃತಿಯನ್ನು ಮೈಸೂರು ವಿಶ್ವವಿದ್ಯಾಲಯವು ಪ್ರಟಿಸಿತ್ತು. 45 ವರ್ಷದ ಹಿಂದೆ ಅದನ್ನು ಅಭ್ಯಾಸಿಸಿದ್ದೆ. ಆ ಕಾಲಕ್ಕೆ ಲಭ್ಯವಿದ್ದ ಮಾಹಿತಿಗಳನ್ನು ಸಂಗ್ರಹಿಸಿ ಅಚ್ಚುಕಟ್ಟಾಗಿ ಕೃತಿ ಹೊರತರಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೂ ಅಶೋಕನ ಕುರಿತು ಬಿಡಿ ಬಿಡಿ ಬರಹಗಳು ಕನ್ನಡದಲ್ಲಿ ಹೊರಬಂದಿದ್ದವು. ಆದರೆ ಇದೀಗ ಚಂದ್ರಪ್ಪ ಅವರು ಮಹಾನ್ ಕೃತಿ ಹೊರತಂದಿದ್ದಾರೆ ಎಂದು ಪ್ರಶಂಸಿಸಿದರು.ಶ್ರದ್ಧೆ, ಭಕ್ತಿಯ ಯಾನ:
ಅಶೋಕ ಮಹಾನ್ ವ್ಯಕ್ತಿಯಾಗಿದ್ದು ಇಂತಹ ವ್ಯಕ್ತಿಯ ಕುರಿತು ಹೊರತಂದಿರುವ ಈ ಕೃತಿ ಮಹಾನ್ ಕೃತಿಯಾಗಿದೆ. ಇದರಲ್ಲಿ ವಿವಿಧ ಮಗ್ಗಲುಗಳಲ್ಲಿ ಅಶೋಕನನ್ನು ಚಿತ್ರಿಸಲಾಗಿದೆ. ಶ್ರದ್ಧೆ, ಭಕ್ತಿಯಿಂದ ಅಶೋಕ ಧಮ್ಮಯಾನವನ್ನು ಚಂದ್ರಪ್ಪ ಮಾಡಿದ್ದಾರೆ. ಕೃತಿಯು ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ಮನೆಯಲ್ಲಿ ಇಂತಹ ಪುಸ್ತಕಗಳಿದ್ದರೆ ಪ್ರಾಚೀನ ಭಾರತದ ಚರಿತ್ರೆ ತಿಳಿದುಕೊಳ್ಳಬಹುದು ಎಂದು ಸಲಹೆ ನೀಡಿದರು.ವಿದ್ವಾಂಸ ಡಾ। ವಿಜಯ್ ಪೂಣಚ್ಚ ತಂಬಂಡ ಮಾತನಾಡಿ, ಅಶೋಕನಿಗೆ ಸಂಬಂಧಿಸಿದಂತೆ ದಕ್ಷಿಣ ಭಾರತದಲ್ಲಿ 13 ಶಾಸನಗಳು ಲಭಿಸಿದ್ದು, ಇದರಲ್ಲಿ 11 ಶಾಸನ ಕರ್ನಾಟಕದಲ್ಲಿ ಸಿಕ್ಕಿರುವುದು ವಿಶೇಷವಾಗಿದೆ. ಅಹಿಂಸೆ ಬೋಧಿಸಿದ ಅಶೋಕನ ಸಂದೇಶ ಇಂದಿಗೂ ಪ್ರಸ್ತುತವಾಗಿದೆ ಎಂದು ತಿಳಿಸಿದರು.
ಪ್ರಾಧ್ಯಾಪಕ ಡಾ। ಎಂ.ಕೊಟ್ರೇಶ್, ಲೇಖಕ ಡಾ। ಸಿ.ಚಂದ್ರಪ್ಪ, ಸಪ್ನ ಬುಕ್ ಹೌಸ್‌ನ ವ್ಯವಸ್ಥಾಪಕ ನಿರ್ದೇಶಕ ದೀಪಕ್ ಶಾ ಉಪಸ್ಥಿತರಿದ್ದರು.