ಚನ್ನರಾಯಪಟ್ಟಣ ಆಸ್ಪತ್ರೆಯಲ್ಲಿ ಸಮಸ್ಯೆಗಳ ಸರಮಾಲೆ: ವೈದ್ಯರ ನಿರ್ಲಕ್ಷ್ಯ

| Published : Jun 21 2024, 01:06 AM IST

ಚನ್ನರಾಯಪಟ್ಟಣ ಆಸ್ಪತ್ರೆಯಲ್ಲಿ ಸಮಸ್ಯೆಗಳ ಸರಮಾಲೆ: ವೈದ್ಯರ ನಿರ್ಲಕ್ಷ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಚನ್ನರಾಯಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ರೋಗಿಗಳು ಪರದಾಡಬೇಕಾಗಿದ್ದು ಇದರಿಂದ ಬೇಸತ್ತು ಆಸ್ಪತ್ರೆ ಸಿಬ್ಬಂದಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಸಿಬ್ಬಂದಿ ಕೊರತೆಗೆ ಹೈರಾಣಾದ ರೋಗಿಗಳು । ಸರತಿಯಲ್ಲಿ ನಿಂತು ಟೋಕನ್‌ ಪಡೆದರೂ ದೊರೆಯದ ವೈದ್ಯರು । ಬಡವರಿಗೆ ತೊಂದರೆ

ನಂದನ್‌ಪುಟ್ಟಣ್ಣ

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ರೋಗಿಗಳು ಪರದಾಡಬೇಕಾಗಿದ್ದು ಇದರಿಂದ ಬೇಸತ್ತು ಆಸ್ಪತ್ರೆ ಸಿಬ್ಬಂದಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಪ್ರತಿ ನಿತ್ಯ ಸಾವಿರಾರು ಜನರು ಬರುವ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿ ಇಲ್ಲದೆ ರೋಗಿಗಳು ಪರಿತಪ್ಪಿಸುತ್ತಿದ್ದು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಂಡೂ ಕಾಣದಂತೆ ಕಣ್ಮುಚ್ಚಿ ಕುಳಿತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಅಧಿಕಾರಿಗಳು, ರಾಜಕೀಯ ನಾಯಕರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಒಬ್ಬ ರೋಗಿ ಸರ್ಕಾರಿ ಆಸ್ಪತ್ರೆಗೆ ಬಂದರೆ ಸರತಿ ಸಾಲಿನಲ್ಲಿ ನಿಂತು ಟೋಕನ್ ಪಡೆಯಬೇಕು. ಅದಕ್ಕೆ ಸುಮಾರು ಒಂದು ಗಂಟೆ ಸಮಯವಾಗುತ್ತದೆ, ಆದ ನಂತರ ವೈದ್ಯರನ್ನು ಕಾಣಲು ಆಸ್ಪತ್ರೆ ಒಳಗೆ ಹೋದರೆ ವೈದ್ಯರ ಕೊಠಡಿಯಲ್ಲಿ ಕುರ್ಚಿಗಳು ಬಿಟ್ಟರೆ ವೈದ್ಯರೇ ಇರುವುದಿಲ್ಲ. ಇನ್ನು ತುರ್ತು ನಿಗಾ ಘಟಕದಲ್ಲಿ ಯಾವುದಾದರೂ ಅಪಘಾತ ಪ್ರಕರಣಗಳು ಬಂದರಂತೂ ಆ ದೇವರೇ ಕಾಪಾಡಬೇಕು. ಇಂತಹ ದುಸ್ಥಿತಿಯಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಗ್ರಹಣ ಹಿಡಿದಂತಾಗಿದ್ದು ಬಡ ಜನರಿಗೆ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ದೂರಲಾಗಿದೆ.

ಸರ್ಕಾರಗಳು ಜನರಿಗೆ ಎಷ್ಟೆಲ್ಲಾ ಸೌಲಭ್ಯಗಳನ್ನು ನೀಡಲು ಮುಂದಾದರೂ ನೇರವಾಗಿ ಜನರಿಗೆ ಸೌಲಭ್ಯಗಳು ದೊರೆಯದೆ ಸಮಸ್ಯೆಗಳೇ ಹೆಚ್ಚಾಗುತ್ತಿದ್ದು ಆಯುರ್ವೇದ ವೈದ್ಯರು ಜ್ವರಕ್ಕೆ ಔಷಧಿ ನೀಡಿದರೆ, ಮಕ್ಕಳ ತಜ್ಞ ವೈದ್ಯರು ವೃದ್ಧರಿಗೆ ಔಷಧಿ ನೀಡುವ ಪ್ರಸಂಗಗಳು ಸರ್ವೇ ಸಾಮಾನ್ಯವಾಗಿವೆ.

ಜನರು ಏರು ಧ್ವನಿಯಲ್ಲಿ ವೈದ್ಯರು ಎಲ್ಲಿ ಎಂದು ಕೇಳಿದರೆ ಆಪರೇಷನ್ ಕೊಠಡಿಗೆ ಹೋಗಿದ್ದಾರೆ ಎಂದು ದಾದಿಯರು ಸಬೂಬು ನೀಡುತ್ತಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ದಾದಿಯರದೇ ದರ್ಬಾರಾಗಿದ್ದು, ಸಮಸ್ಯೆಗಳ ಕೂಪವಾಗಿಬಿಟ್ಟಿದೆ.

ರಾಜಕಾರಣಿಗಳು ಹಾಗೂ ರಕ್ಷಾ ಸಮಿತಿಯ ಸದಸ್ಯರಂತೂ ಆಸ್ಪತ್ರೆಯ ಬಗ್ಗೆ ನಿಗಾ ವಹಿಸುವ ಬದಲು ಪೊಲೀಸ್ ಠಾಣೆಗಳ ಎದುರು ರಾಜಕೀಯ ಮಾಡಿಕೊಂಡು ಪಂಚಾಯಿತಿ ಮಾಡುವುದರಲ್ಲಿ ಸಕ್ರಿಯರಾಗಿದ್ದಾರೆ.

ತಾಲೂಕಿನ ಹೃದಯ ಭಾಗದಲ್ಲಿರುವ ಸರ್ಕಾರಿ ಆಸ್ಪತ್ರೆ ವಿಶಾಲವಾಗಿದ್ದು ಸರಿಯಾದ ನಿರ್ವಹಣೆ ಇಲ್ಲದೆ ಹೇಳುವವರು, ಕೇಳುವವರು ಇಲ್ಲದಂತಾಗಿದೆ. ಇನ್ನು ರೋಗಿಗಳಿಗೆ ಉದ್ದೇಶಪೂರ್ವಕವಾಗಿ ಸಮಸ್ಯೆಗಳನ್ನು ನೀಡಿದರೆ ಅವರೇ ಬೇಸತ್ತು ಖಾಸಗಿ ಆಸ್ಪತ್ರೆಗೆ ಹೋಗುವಂತೆ ಮಾಡುವುದು ಇದರ ಉದ್ದೇಶ ಎಂಬುದು ಕೆಲವರ ಮಾತಾಗಿದೆ.

ಮಧುಮೇಹ, ಸಕ್ಕರೆ ಕಾಯಿಲೆ ರೋಗಿಗಳಂತೂ ಸರ್ಕಾರಿ ಆಸ್ಪತ್ರೆಗೆ ಹೋಗುವುದೇ ಇಲ್ಲ, ರಸ್ತೆ ಅಪಘಾತವಾಗಿ ಆಸ್ಪತ್ರೆಗೆ ರೋಗಿಯನ್ನು ಕರೆತಂದರೆ ಪ್ರಥಮ ಚಿಕಿತ್ಸೆ ನೀಡಿ ವೈದ್ಯರಿಲ್ಲ ಹಾಸನಕ್ಕೆ ಅಥವಾ ಬೇರೆ ಖಾಸಗಿ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿ ರೋಗಿಯ ಜೀವಕ್ಕೆ ಅಪಾಯವಿದೆ. ಆ್ಯಂಬುಲೆನ್ಸ್‌ಗಳನ್ನು ಕರೆಸುತ್ತೇವೆ, ಕಡಿಮೆ ಖರ್ಚಿನಲ್ಲಿ ಹೋಗಬಹುದು ಎಂದು ಜಾರಿಕೊಳ್ಳುವ ಪ್ರಸಂಗಗಳು ಹೆಚ್ಚಾಗುತ್ತಿವೆ.

ಪಟ್ಟಣದ ಖಾಸಗಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳದ್ದೇ ಆಸ್ಪತ್ರೆಯಲ್ಲಿ ದರ್ಬಾರಾಗಿದ್ದು ಹೆರಿಗೆ ವಿಭಾಗದಲ್ಲಿ ಹಣ ನೀಡಿದರೆ ಮಾತ್ರ ಬೆಡ್ ನೀಡುವ ವ್ಯವಸ್ಥೆಗಳು ನಿರ್ಮಾಣವಾಗಿವೆ. ರೋಗಿ ಒಬ್ಬನೇ ಬಂದು ಚಿಕಿತ್ಸೆ ಪಡೆದುಕೊಳ್ಳುವುದು ಅಸಾಧ್ಯದ ಮಾತಾಗಿದ್ದು ಸಂಬಂಧಿಕರು, ಅಣ್ಣ ತಮ್ಮಂದಿರ ಜೊತೆ ದಿನಗಟ್ಟಲೆ ಕಾಯ್ದು ಚಿಕಿತ್ಸೆ ಪಡೆಯುವ ದುಸ್ಥಿತಿ ನಿರ್ಮಾಣವಾಗಿದೆ.

ಸರ್ಕಾರಿ ಆಸ್ಪತ್ರೆಯಲ್ಲಿ ಆಗುತ್ತಿರುವ ತೊಂದರೆಗಳಿಂದ ರೋಗಿಗಳು ಬೇಸತ್ತಿದ್ದು ಉದ್ದೇಶಪೂರ್ವಕವಾಗಿ ಜನರಿಗೆ ತೊಂದರೆ ನೀಡಿ ಖಾಸಗಿ ಆಸ್ಪತ್ರೆಗೆ ಹೋಗುವಂತೆ ಮಾಡುತ್ತಿದ್ದಾರೆ. ಇದರ ಬಗ್ಗೆ ಅಧಿಕಾರಿಗಳು ಗಮನಹರಿಸಲಿ.

ಅಡಗೂರು ಶ್ರೀನಿವಾಸ್, ಸಾಮಾಜಿಕ ಕಾರ್ಯಕರ್ತ.

ಸರ್ಕಾರಿ ಆಸ್ಪತ್ರೆ ಕೇವಲ ನೆಪ ಮಾತ್ರಕ್ಕೆ ಇದ್ದು ಜನರಿಗೆ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ. ಸರ್ಕಾರಿ ಆಸ್ಪತ್ರೆಗೆ ಬೀಗ ಹಾಕಿದರೆ ಎಲ್ಲವೂ ಸರಿಹೋಗುತ್ತದೆ.

ಸಿ.ಜಿ.ರವಿ- ತಾಲೂಕು ರೈತ ಸಂಘದ ಅಧ್ಯಕ್ಷ.