ಮೈಷುಗರ್ ಕಾರ್ಖಾನೆಗೆ ಸಂಬಂಧಿಸಿದ ಯಾವುದೇ ಮಾಹಿತಿಗಳನ್ನು ನೀಡದೆ ಮುಚ್ಚಿಡುತ್ತಿರುವುದು ಆಡಳಿತ ಪಾರದರ್ಶಕವಾಗಿಲ್ಲ ಎನ್ನುವುದಕ್ಕೆ ಪ್ರಮುಖ ಸಾಕ್ಷಿಯಾಗಿದೆ. ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ್ ಪ್ರತಿಯೊಂದು ಹಂತದಲ್ಲೂ ಎಗ್ಗಿಲ್ಲದೆ ಭ್ರಷ್ಟಾಚಾರ ನಡೆಸುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಮೈಷುಗರ್ ಕಾರ್ಖಾನೆಗೆ ಸಂಬಂಧಿಸಿದ ಯಾವುದೇ ಮಾಹಿತಿಗಳನ್ನು ನೀಡದೆ ಮುಚ್ಚಿಡುತ್ತಿರುವುದು ಆಡಳಿತ ಪಾರದರ್ಶಕವಾಗಿಲ್ಲ ಎನ್ನುವುದಕ್ಕೆ ಪ್ರಮುಖ ಸಾಕ್ಷಿಯಾಗಿದೆ. ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ್ ಪ್ರತಿಯೊಂದು ಹಂತದಲ್ಲೂ ಎಗ್ಗಿಲ್ಲದೆ ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎಂದು ಮೈಷುಗರ್ ಕಬ್ಬು ಒಪ್ಪಿಗೆದಾರರ ಸಂಘದ ಅಧ್ಯಕ್ಷ ಎಸ್.ಕೃಷ್ಣ ಆರೋಪಿಸಿದರು.ಕಾರ್ಖಾನೆಯ ಬಿ-ಮಿಲ್ ಮಾರಾಟದ ಬಗ್ಗೆ ಆಡಳಿಯ ಮಂಡಳಿಯಲ್ಲಿ ತೀರ್ಮಾನವಾಗಿದೆಯೇ ವಿನಃ ಸರ್ಕಾರ ಅನುಮತಿ ಕೊಟ್ಟಿಲ್ಲ. ರೈತರೂ ಕಾರ್ಖಾನೆಯ ಷೇರುದಾರರಾಗಿರುವುದರಿಂದ ವಾರ್ಷಿಕ ಮಹಾ ಸಭೆಯಲ್ಲಿಟ್ಟು ತೀರ್ಮಾನಿಸಿಲ್ಲ. ಬಿ-ಮಿಲ್ ಸೇರಿದಂತೆ ಅನುಪಯುಕ್ತ ವಸ್ತುಗಳ ತೂಕವನ್ನು ಕೇಂದ್ರ ಸರ್ಕಾರದ ಮೆಟೀರಿಯಲ್ ಸಕ್ಯಾಪ್ ಕಾರ್ಪೋರೇಷನ್‌ನಿಂದ ಮಾಪನ ಮಾಡಿಸಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.
ಕನಿಷ್ಠ ಪಕ್ಷ ಬಿ-ಮಿಲ್‌ನ ಒಟ್ಟಾರೆ ತೂಕ ಎಷ್ಟು, ಅದರೊಳಗಿದ್ದ ಹಿತ್ತಾಳೆ, ತಾಮ್ರ, ಕಬ್ಬಿಣದ ತೂಕ ಎಷ್ಟು, ಅನುಪಯುಕ್ತ ವಸ್ತುಗಳ ಒಟ್ಟು ತೂಕ ಇದಾವುದರ ಬಗ್ಗೆಯೂ ಮಾಹಿತಿಯನ್ನು ನೀಡದಿರುವುದು ಇವುಗಳ ಮಾರಾಟದಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಅನುಮಾನಗಳು ಮೂಡುವಂತೆ ಮಾಡಿವೆ. ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಲು ಇಚ್ಛಿಸದ ಅಧ್ಯಕ್ಷ ಸಿ.ಡಿ.ಗಂಗಾಧರ್ ಲೋಪಗಳನ್ನು ಮುಚ್ಚಿಡುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ ಎಂದು ಆರೋಪಿಸಿದರು.ಜಿಲ್ಲೆಯ ಖಾಸಗಿ ಕಾರ್ಖಾನೆಗಳು ಪ್ರಸ್ತುತ ೩.೫೦ ಲಕ್ಷ ಟನ್‌ನಿಂದ ೪ ಲಕ್ಷ ಟನ್ ಕಬ್ಬು ಅರೆದಿದ್ದರೂ ಮೈಷುಗರ್ ಕಾರ್ಖಾನೆ ಇಲ್ಲಿಯವರೆಗೆ ೧.೬೦ ಲಕ್ಷ ಟನ್ ಕಬ್ಬನ್ನು ಮಾತ್ರವೇ ಅರೆದಿದೆ. ನಿತ್ಯ ೩೫೦೦ ಟನ್ ಕಬ್ಬು ಅರೆಯುವ ಕಡೆ ಕೇವಲ ೧೮೦೦ ಟನ್ ಕಬ್ಬನ್ನು ಅರೆದಿದೆ. ಕಾರ್ಖಾನೆಗೆ ೩.೫೦ ಲಕ್ಷ ಟನ್ ಕಬ್ಬು ಒಪ್ಪಿಗೆಯಾಗಿದೆ. ಆ ಪ್ರಮಾಣದ ಕಬ್ಬನ್ನು ಅರೆಯುವುದಕ್ಕೆ ಸಾಧ್ಯವೇ ಇಲ್ಲ. ಹಿಂದೆಲ್ಲಾ ಒಪ್ಪಿಗೆ ಕಬ್ಬನ್ನು ಪೂರ್ಣ ಪ್ರಮಾಣದಲ್ಲಿ ಅರೆಯದಿದ್ದರೂ ಒಪ್ಪಿಗೆ ಮಾಡಿಕೊಂಡಷ್ಟು ಕಬ್ಬಿಗೆ ಹಣ ಪಾವತಿಸಲಾಗಿದೆ. ಈ ಬಾರಿ ಟನ್‌ಗೆ ೮೫೦ ರು.ನಂತೆ ಒಪ್ಪಿಗೆ ಮಾಡಿಕೊಂಡಿದ್ದು, ಒಪ್ಪಿಗೆ ಕಬ್ಬು ಅರೆಯದಿದ್ದರೂ ಪೂರ್ಣ ಹಣ ಪಾವತಿಸಬೇಕೆ. ಈ ಸಂಬಂಧ ಗುತ್ತಿಗೆ ಕಂಪನಿ ಜೊತೆ ಆಗಿರುವ ಒಪ್ಪಂದವನ್ನು ಬಹಿರಂಗಪಡಿಸುವುದಕ್ಕೂ ಅಧ್ಯಕ್ಷರು ಹಿಂದೇಟು ಹಾಕುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ದೂರಿದರು.
ಇದೀಗ ಬಾಯ್ಲರ್ ಹೌಸ್‌ಗೆ ಸರ್ಕಾರದಿಂದ ೬೦ ಕೋಟಿ ರು. ಬಿಡುಗಡೆಯಾಗಿದೆ. ಅದರಲ್ಲೂ ಪಾರದರ್ಶಕತರ ಕಾಯ್ದುಕೊಳ್ಳದಿದ್ದರೆ ೬೦ ಕೋಟಿ ರು. ಹಳ್ಳ ಹಿಡಿಯುವ ಸಾಧ್ಯತೆಗಳಿವೆ. ಹಾಗಾಗಿ ತಾಂತ್ರಿಕ ತಂಡವನ್ನು ರಚಿಸಿ ಪಾರದರ್ಶಕವಾಗಿ ಬಾಯ್ಲರ್ ಹೌಸ್ ಅಳವಡಿಸುವಂತೆ ಒತ್ತಾಯಿಸಿದರು.ಕಾರ್ಖಾನೆ ಮಾಜಿ ಅಧ್ಯಕ್ಷ ನಾಗರಾಜಪ್ಪ ಅವರಿಂದ ೧೨೭ ಕೋಟಿ ರು. ವಸೂಲಿ ಮಾಡುವಂತೆ ಹೈಕೋರ್ಟ್ ಆದೇಶ ಹೊರಡಿಸಿದ್ದರೂ ಇದುವರೆಗೂ ವಸೂಲಿಗೆ ಯಾವುದೇ ಕ್ರಮ ವಹಿಸುತ್ತಿಲ್ಲ. ಅಧ್ಯಕ್ಷರ ನಡೆಯನ್ನು ನೋಡಿದರೆ ಮಾಜಿ ಅಧ್ಯಕ್ಷರೊಂದಿಗೆ ಹೊಂದಾಣಿಕೆ ರಾಜಕಾರಣ ಮಾಡುತ್ತಿರುವಂತೆ ಕಂಡುಬರುತ್ತಿದ್ದಾರೆ. ಹಣ ವಸೂಲಿಗೆ ಪ್ರಾಮುಖ್ಯತೆಯನ್ನೇ ನೀಡುತ್ತಿಲ್ಲವೆಂದು ಆರೋಪಿಸಿದರು.
ಗೋಷ್ಠಿಯಲ್ಲಿ ಜಿ.ಬಿ.ಶಿವಕುಮಾರ್, ಸುನಂದಾ ಜಯರಾಂ, ಕೆ.ಬೋರಯ್ಯ, ಮುದ್ದೇಗೌಡ, ಕೃಷ್ಣಪ್ರಸಾದ್, ಎಂ.ವಿ.ಕೃಷ್ಣ ಇದ್ದರು.ರೈತರಿಗೆ ೫೦ ರು. ಕೊಡುವ ಯೋಗ್ಯತೆಯೂ ಇಲ್ಲ: ಸುನಂದಾ ಜಯರಾಂ
ಕನ್ನಡಪ್ರಭ ವಾರ್ತೆ ಮಂಡ್ಯಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿರುವ ರೈತರಿಗೆ ರಾಜ್ಯಸರ್ಕಾರ ನೀಡಿರುವ ೫೦ ರು. ಹಣ ಪಾವತಿಸುವ ಯೋಗ್ಯತೆಯನ್ನು ಇದುವರೆಗೂ ಕಾರ್ಖಾನೆ ಅಧ್ಯಕ್ಷರು ಪ್ರದರ್ಶಿಸಿಲ್ಲ ಎಂದು ರೈತನಾಯಕಿ ಸುನಂದಾ ಜಯರಾಂ ದೂಷಿಸಿದರು.
ಬಾಯಿ ಬಿಟ್ಟರೆ ಬರೀ ಸುಳ್ಳು. ಎಲ್ಲೆರೆದುರು ನಾಟಕ ಮಾಡುವುದನ್ನು ಚೆನ್ನಾಗಿ ಕರಗತ ಮಾಡಿಕೊಂಡಿದ್ದಾರೆ. ನಾಳೆ (ಅ.೭) ಸಚಿವರು ಸಭೆಗೆ ಬರುವ ಮುನ್ನ ೫೦ ರು. ಹಣವನ್ನು ಪಾವತಿಸಿರಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.ಕಾರ್ಖಾನೆ ವ್ಯಾಪ್ತಿಯ ಮೂವರು ಶಾಸಕರು ಮೌನ ವಹಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರೂ ಮಾತನಾಡದಿರುವುದು ರಾಜಕಾರಣಿಗಳಾದವರಿಗೆ ಕಾರ್ಖಾನೆ ಬಗ್ಗೆ ಜವಾಬ್ದಾರಿ ಇಲ್ಲವೇ. ಆಡಳಿತ ನಡೆಸುವವರಿಗೆ ಇಷ್ಟೊಂದು ಸಡಿಲತೆ ಕೊಟ್ಟರೆ ಏನಾಗಲಿದೆ ಎಂಬ ಕನಿಷ್ಠ ಪ್ರಜ್ಞೆ ಇಟ್ಟುಕೊಂಡು ಅವರನ್ನು ನಿಯಂತ್ರಣದಲ್ಲಿಡುವ ಕೆಲಸವಾಗುತ್ತಿಲ್ಲ ಎಂಬ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಹಾಲಿನಪುಡಿ ಕಲಬೆರಕೆ ಪ್ರಕರಣವನ್ನು ರಾಜ್ಯಸರ್ಕಾರ ಸಿಬಿಐ ತನಿಖೆಗೆ ಒಪ್ಪಿಸಬೇಕು. ನೇಮಕಾತಿ ಮತ್ತು ಹಾಲು-ನೀರು ಹಗರಣದಂತೆ ಇದೂ ಕೂಡ ಹಳ್ಳ ಹಿಡಿಯಲು ಬಿಡಬಾರದು. ತಪ್ಪಿತಸ್ಥರಿಗೆ ಶಿಕ್ಷೆಯಾದರೆ ಮಾತ್ರ ಸಮಾಜದಲ್ಲಿ ತಪ್ಪುಗಳು ಕಡಿಮೆಯಾಗಲು ಸಾಧ್ಯ ಎಂದರು.ಇಂದು ಸಚಿವರೊಂದಿಗೆ ಸಭೆ
ಮನ್‌ಮುಲ್ ಹಗರಣ, ಮೈಷುಗರ್ ಬಿಕ್ಕಟ್ಟು ಹಾಗೂ ಕಾವೇರಿ ಆರತಿ ಸಂಬಂಧ ಅ.೭ರಂದು ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರೊಂದಿಗೆ ರೈತಮುಖಂಡರ ಸಭೆ ನಡೆಯಲಿದೆ ಎಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಬಿ.ಶಿವಕುಮಾರ್ ಹೇಳಿದರು.ಸಮಿತಿಯ ಮನವಿಯ ಮೇರೆಗೆ ಸಚಿವರು ಸಭೆಯನ್ನು ಆಯೋಜಿಸಿದ್ದು, ಎಲ್ಲರೂ ಸಕಾಲಕ್ಕೆ ಆಗಮಿಸಿ ಸಭೆಯಲ್ಲಿ ತಮ್ಮ ಅಭಿಪ್ರಾಯ, ಸಲಹೆಗಳನ್ನು ನೀಡುವಂತೆ ಮನವಿ ಮಾಡಿದರು.