ಪ್ರತಿಯೊಬ್ಬರ ಸಾಧನೆಗೆ ಚೈತನ್ಯ ಸ್ವರೂಪಳು ತಾಯಿ: ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ.

| Published : Mar 10 2025, 12:15 AM IST

ಪ್ರತಿಯೊಬ್ಬರ ಸಾಧನೆಗೆ ಚೈತನ್ಯ ಸ್ವರೂಪಳು ತಾಯಿ: ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ.
Share this Article
  • FB
  • TW
  • Linkdin
  • Email

ಸಾರಾಂಶ

ಮಹಿಳೆ ಸಿದ್ಧಪಡಿಸುವ ಗೃಹ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದರೆ ಅವರಿಗೆ ಮತ್ತಷ್ಟು ಶಕ್ತಿ ತುಂಬಿದಂತಾಗುತ್ತದೆ ಎಂದು ಎಂದು ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಹೇಳಿದರು.

ಧಾರವಾಡ: ನಮ್ಮೆಲ್ಲ ಸಾಧನೆಗೆ ತಾಯಿಯೇ ಪ್ರೇರಕ ಶಕ್ತಿ. ಅವಳು ಶಕ್ತಿ ತುಂಬುವ ಚೈತನ್ಯ ಸ್ವರೂಪಳು ಎಂದು ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘ ಗೌರಮ್ಮ ಚೆನ್ನಪ್ಪ ಹಲಗತ್ತಿ ದತ್ತಿ ಅಂಗವಾಗಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ‘ಶ್ರಮಿಕ ಮಹಿಳೆ " ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಮಹಿಳೆಯರು ಎಂದಿಗೂ ಅಬಲೆಯರಲ್ಲ. ಅವಳು ಸಬಲೆಯಾಗಿದ್ದರಿಂದಲೇ ಕುಟುಂಬದ ಒಳಗೂ ಮತ್ತು ಹೊರಗೂ ಶ್ರಮದಾಯಕ ಕಾರ್ಯ ಮಾಡಿ ತನ್ನ ಕುಟುಂಬವನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದಾಳೆ. ಕುಟುಂಬದ ಒಳಿತಿಗಾಗಿ ಸರ್ವಸ್ವವನ್ನೇ ತ್ಯಾಗ ಮಾಡುವ ತ್ಯಾಗಮಯಿ ಮಹಿಳೆಯಾಗಿದ್ದಾಳೆ. ಅಂತಹ ಮಹಿಳೆ ಸಿದ್ಧಪಡಿಸುವ ಗೃಹ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದರೆ ಅವರಿಗೆ ಮತ್ತಷ್ಟು ಶಕ್ತಿ ತುಂಬಿದಂತಾಗುತ್ತದೆ ಎಂದು ಹೇಳಿದರು.

ತುಮಕೂರು ವಿವಿ ಪ್ರಾಧ್ಯಾಪಕಿ ಡಾ. ಜ್ಯೋತಿ ‘ಸ್ವ ಅರಿವು ಇಂದಿನ ಅಗತ್ಯತೆ’ ಕುರಿತು ಉಪನ್ಯಾಸ ನೀಡಿ, ಹೆಣ್ಣು ಮಕ್ಕಳು ಭವಿಷ್ಯದಲ್ಲಿ ಎದುರಾಗುವ ಸಮಸ್ಯೆಗಳನ್ನು ನಿರರ್ಗಳವಾಗಿ ಎದುರಿಸಲು ಅವರಿಗೆ ಧೈರ್ಯ ತುಂಬುವ ಕಾರ್ಯವಾಗಬೇಕು. ಈ ಕಾರ್ಯ ಶಿಕ್ಷಣದಿಂದ ಮಾತ್ರ ಸಾಧ್ಯ. ಇಂದಿನ ಪರಿಸ್ಥಿತಿಯಲ್ಲಿ ಆಡಂಬರದ ಮದುವೆಗೆ ದುಂದುವೆಚ್ಚ ಮಾಡುವ ಬದಲು ಅವಳಿಗೆ ಶಿಕ್ಷಣ ನೀಡಿದರೆ, ಆ ಶಿಕ್ಷಣದಿಂದಲೇ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು. ಮಹಿಳೆಯರು ತಮ್ಮ ಭಾವನೆ ಹಾಗೂ ನಡವಳಿಕೆ ತಮ್ಮ ಮೇಲೆ ಹಾಗೂ ಸಮಾಜದ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬಲ್ಲಿ ಅಗತ್ಯವಾಗಿ ಸ್ವಅರಿವು ಸಹಾಯವಾಗಬಲ್ಲದು ಎಂದು ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷೆ ಪ್ರೊ. ಮಾಲತಿ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿ, ಪ್ರಶಸ್ತಿಗಳು ಸಿಗುವುದು ದೊಡ್ಡ ವಿಷಯವಲ್ಲ. ಆದರೆ, ಶ್ರಮಿಕ ಮಹಿಳೆ ಗುರುತಿಸಿ ಪ್ರಶಸ್ತಿ ನೀಡುವುದು ಅಭಿನಂದನೀಯ ಎಂದು ಹೇಳಿದರು.

ಹಾವೇರಿಯ ಸಾಮಾಜಿಕ ಹೋರಾಟಗಾರ್ತಿ ನಿಂಗಮ್ಮ ಸವಣೂರ ಅವರಿಗೆ ‘ಶ್ರಮಿಕ ಮಹಿಳೆ-2025’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿದ ನಿಂಗಮ್ಮ ಅನ್ಯಾಯದ ವಿರುದ್ಧದ ನನ್ನ ಹೋರಾಟಕ್ಕೆ ಸಂದ ಫಲವಾಗಿದ್ದು, ನನ್ನ ಹೊಣೆಗಾರಿಕೆಯನ್ನು ಇನ್ನೂ ಹೆಚ್ಚಿಸಿದೆ ಎಂದರು.

ಖುಷಿ ದೇವೇಂದ್ರ ಢವಳಿ ತಂಡದಿಂದ ಸುಗಮ ಸಂಗೀತ ಜರುಗಿತು. ಹಾರ್ಮೋನಿಯಂ ವಿನೋದ ಪಾಟೀಲ ಹಾಗೂ ತಬಲಾ ಸಾಥ್ ಡಾ. ಅನಿಲ ಮೇತ್ರಿ ನೀಡಿದರು. ಶಿಕ್ಷಣ ಇಲಾಖೆ ವಿಶ್ರಾಂತ ಉಪನಿರ್ದೇಶಕ ಆರ್.ಸಿ. ಹಲಗತ್ತಿ, ಹೇಮಲತಾ ನೇಕಾರ ಮಾತನಾಡಿದರು. ವಿಶ್ವೇಶ್ವರಿ ಹಿರೇಮಠ ಸ್ವಾಗತಿಸಿದರು. ಶಂಕರ ಹಲಗತ್ತಿ ಪರಿಚಯಿಸಿದರು. ಡಾ. ಶೈಲಜಾ ಅಮರಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶಂಕರ ಕುಂಬಿ ವಂದಿಸಿದರು.