ಇಸ್ಕಾನ್‌ ಗೋವರ್ಧನ್‌ ಗಿರಿಯಲ್ಲಿ ಚೈತನ್ಯೋತ್ಸವ ಸಂಭ್ರಮ

| Published : Mar 24 2025, 12:30 AM IST

ಸಾರಾಂಶ

ಇಸ್ಕಾನ್ ಸಂಸ್ಥೆಯು ಬೆಂಜನಪದವಿನಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿರುವ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕೇಂದ್ರ ಗೋವರ್ಧನ್ ಗಿರಿಯಲ್ಲಿ ಚೈತನ್ಯೋತ್ಸವ ಸಂಭ್ರಮಾಚರಣೆ ನಡೆಯಿತು. ಶ್ರೀ ಚೈತನ್ಯ ಮಹಾಪ್ರಭುಗಳ ಆವಿರ್ಭಾವ ದಿನವಾದ ಗೌರ ಪೂರ್ಣಿಮೆಯ ಸಲುವಾಗಿ ಚೈತನ್ಯೋತ್ಸವವನ್ನು ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ನಗರದ ಇಸ್ಕಾನ್ ಸಂಸ್ಥೆಯು ಬೆಂಜನಪದವಿನಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿರುವ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕೇಂದ್ರ ಗೋವರ್ಧನ್ ಗಿರಿಯಲ್ಲಿ ಚೈತನ್ಯೋತ್ಸವ ಸಂಭ್ರಮಾಚರಣೆ ನಡೆಯಿತು. ಶ್ರೀ ಚೈತನ್ಯ ಮಹಾಪ್ರಭುಗಳ ಆವಿರ್ಭಾವ ದಿನವಾದ ಗೌರ ಪೂರ್ಣಿಮೆಯ ಸಲುವಾಗಿ ಚೈತನ್ಯೋತ್ಸವವನ್ನು ಆಚರಿಸಲಾಯಿತು.

ಶ್ರೀ ನಿತಾಯ್ ಗೌರಾಂಗರಿಗೆ ವಿಶೇಷ ಅಭಿಷೇಕ ಸೇವೆ ನೆರವೇರಿತು. ಬಳಿಕ ಗೋವರ್ಧನ ಗಿರಿ ಜಾಗವನ್ನು ಇಸ್ಕಾನ್ ಸಂಸ್ಥೆಗೆ ಭೂದಾನ ಮಾಡಿದ ದಾನಿಗಳು ಇಟ್ಟಿಗೆಗಳನ್ನು ಪೂಜಿಸಿ ಸಮರ್ಪಿಸಿದರು.

ಇಸ್ಕಾನ್ ಸಂಸ್ಥೆಯ ಸಹ ಸಂಸ್ಥೆ ಅಕ್ಷಯ ಪಾತ್ರ ಪ್ರತಿಷ್ಠಾನ ದಿನಂಪ್ರತಿ ಜಿಲ್ಲೆಯ 190 ಸರ್ಕಾರಿ ಶಾಲೆಯ 20,000 ವಿದ್ಯಾರ್ಥಿಗಳಿಗೆ ಉಚಿತವಾಗಿ ಬಿಸಿಯೂಟ ಸರಬರಾಜು ಮಾಡುತ್ತಿದೆ. ಇದೀಗ ಗೋವರ್ಧನಗಿರಿಯಲ್ಲಿ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕೇಂದ್ರವನ್ನು ಸ್ಥಾಪಿಸಲು ಇಸ್ಕಾನ್ ಉದ್ದೇಶಿಸಿದೆ. ಈ ಯೋಜೆನಯು ನಮ್ಮ ಮುಂದಿನ ಪೀಳಿಗೆಗೆ ಬಹಳ ಅಗತ್ಯವಾದ ಸೇವೆಯನ್ನು ನೀಡಲಿದ್ದು , ನಾವೆಲ್ಲರೂ ಈ ಸಂಸ್ಥೆಯನ್ನು ತನು ಮನ ಧನದಿಂದ ಪ್ರೋತ್ಸಾಹಿಸಬೇಕು ಎಂದು ಎಸ್‌.ಎಸ್‌. ನಾಯಕ್ ಅಂಡ್ ಅಸೋಸಿಯೇಟ್ಸ್ ಸಂಸ್ಥೆಯ ಪಾಲುದಾರ ಎಸ್‌.ಎಸ್‌.ನಾಯಕ್‌ ಮನವಿ ಮಾಡಿದರು.

ಇಸ್ಕಾನ್ ಅಧ್ಯಕ್ಷ ಗುಣಾಕರ ರಾಮದಾಸ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಗೋವರ್ಧನ ಗಿರಿಯಲ್ಲಿ ಅಕ್ಷಯ ಪಾತ್ರೆಯು ಅನ್ನದಾನದ ಮೂಲಕ ಹಸಿದ ಮಕ್ಕಳ ಸೇವೆಯನ್ನು ಹೇಗೆ ಮಾಡುತ್ತಿದೆಯೋ ಹಾಗೆಯೇ ಮುಂದಿನ ದಿನದಲ್ಲಿ ನಿರ್ಮಾಣವಾಗಲಿರುವ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕೇಂದ್ರದ ಮೂಲಕ ಜನತೆಯ ಬೌದ್ಧಿಕ ಹಾಗು ಆಧ್ಯಾತ್ಮಿಕ ಅಗತ್ಯತೆಗಳನ್ನು ಪೂರೈಸುವ ಮಹತ್ತರ ಸೇವೆಯನ್ನು ಮಾಡಲಿದೆ ಎಂದರು.

ಮೇರಮಜಲು ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ನಾಯ್ಕ್ ಹಾಗೂ ಅಮ್ಮುಂಜೆ ಗ್ರಾಮಪಂಚಾಯತ್ ಉಪಾಧ್ಯಕ್ಷ ರಾಧಾಕೃಷ್ಣ ತಂತ್ರಿ ಮಾತನಾಡಿದರು.

ಗೇರುಬೀಜ ಉದ್ಯಮಿ ಬೆಳ್ವೆ ಗಣೇಶ್ ಕಿಣಿ , ಉದ್ಯಮಿ ಗೋಪಾಲಕೃಷ್ಣ ಶೆಟ್ಟಿ, ಉದ್ಯಮಿ ಮನು ಇದ್ದರು.

ಸನಂದನ ದಾಸ ವಂದಿಸಿದರು. ಶ್ವೇತದ್ವೀಪ ದಾಸ ನಿರೂಪಿಸಿದರು.