ಯುಬಿಡಿಟಿಯಲ್ಲಿ ಚೈತ್ರ-ಪಾರಂಪರಿಕ ಸಾಂಸ್ಕೃತಿಕ ದಿನ ಸಂಭ್ರಮ

| Published : Apr 18 2025, 01:47 AM IST

ಸಾರಾಂಶ

ಯುಬಿಡಿಟಿ ಕಾಲೇಜಿನಲ್ಲಿ ಗುರುವಾರ ಚೈತ್ರ ಮತ್ತು ಪಾರಂಪರಿಕ ಸಾಂಸ್ಕೃತಿಕ ದಿನದ ಕಾರ್ಯಕ್ರಮ ಸಂಭ್ರಮ ಸಡಗರದಿಂದ ಕಾಲೇಜು ಆವರಣದಲ್ಲಿ ನಡೆಯಿತು. ಎಲ್ಲ ವಿಭಾಗಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸೇರಿ ಹಬ್ಬದಂತೆ ಸಂಭ್ರಮಿಸಿದ್ದಾರೆ.

- ಕಾಲೇಜು ಆವರಣದಲ್ಲಿ ಜಾನಪದ ಲೋಕ ಸೃಷ್ಠಿ । ವಿವಿಧ ಸಂಸ್ಕೃತಿಗಳ ವೇಷಭೂಷಣದಲ್ಲಿ ಮಿಂಚಿದ ವಿದ್ಯಾರ್ಥಿಗಳು - - -

ಕನ್ನಡಪ್ರಭ ವಾರ್ತೆ ದಾವಣಗೆರೆ ಯುಬಿಡಿಟಿ ಕಾಲೇಜಿನಲ್ಲಿ ಗುರುವಾರ ಚೈತ್ರ ಮತ್ತು ಪಾರಂಪರಿಕ ಸಾಂಸ್ಕೃತಿಕ ದಿನದ ಕಾರ್ಯಕ್ರಮ ಸಂಭ್ರಮ ಸಡಗರದಿಂದ ಕಾಲೇಜು ಆವರಣದಲ್ಲಿ ನಡೆಯಿತು. ಎಲ್ಲ ವಿಭಾಗಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸೇರಿ ಹಬ್ಬದಂತೆ ಸಂಭ್ರಮಿಸಿದರು.

ಇಂದಿನ ಆಧುನಿಕ ಸಂಸ್ಕೃತಿಯ ನಡುವೆ ನಮ್ಮ ಮೂಲ ಸಂಸ್ಕೃತಿ ಜನಪದವು ಸೇರಿ ಹೋಗುತ್ತದೆ. ಇದು ಉಳಿದರೆ ನಮ್ಮ ಸಂಸ್ಕೃತಿ ಉಳಿಯುತ್ತದೆ ಎಂಬುದನ್ನು ನಗರದ ಯುಬಿಡಿಟಿ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಸಾಕ್ಷೀಕರಿಸಿದರು.

ಕಾಲೇಜಿನ ಆಡಳಿತ ಮಂಡಳಿ ಆಯೋಜಿಸಿದ್ದ ''''ಚೈತ್ರ ಮತ್ತು ಪಾರಂಪರಿಕ ಸಾಂಸ್ಕೃತಿಕ ದಿನ'''' ಕಾರ್ಯಕ್ರಮ ಸಾಂಪ್ರದಾಯಿಕ ಪೂಜೆಯ ಮೂಲಕ ಪ್ರಾರಂಭವಾಯಿತು. ಮುತ್ತೈದೆಯರು ಮತ್ತು ಹಿರಿಯ ಉಪನ್ಯಾಸಕರು ಕಾಲೇಜಿನ ಆವರಣದಲ್ಲಿ ಹಾಕಿದ್ದ ಭತ್ತದ ರಾಶಿಗೆ ಪೂಜೆ ಸಲ್ಲಿಸಿದರು. ಎಲ್ಲ ಕಾರ್ಯಗಳು ಸುಗಮವಾಗಿ ನಡೆಯಲಿ ಎಂದು ಪ್ರಾರ್ಥನೆ ಮಾಡಿದರು. ಒಂದು ರೀತಿ ಹಳ್ಳಿಗಳಲ್ಲಿ ಆಚರಿಸುವ ಹಬ್ಬದ ರೀತಿ ಕಾಲೇಜು ಆವರಣ ರಂಗು ರಂಗಿನಿಂದ ಅನಾವರಣಗೊಂಡಿತ್ತು.

ಗಣ್ಯರಿಂದ ಉದ್ಘಾಟನೆ:

ವಿಟಿಯು ಕುಲಸಚಿವ ಡಾ. ಬಿ.ಇ.ರಂಗಸ್ವಾಮಿ ಸೇರಿದಂತೆ ಅತಿಥಿಗಳು ರಾಶಿಪೂಜೆ ಮೂಲಕ ಚೈತ್ರ ಮತ್ತು ಪಾರಂಪರಿಕ ಸಾಂಸ್ಕೃತಿಕ ದಿನ ಕಾರ್ಯಕ್ರಮವನ್ನು ವಿದ್ಯುಕ್ತವಾಗಿ ಉದ್ಘಾಟಿಸಿದರು. ಡೆಂಟಲ್ ಕಾಲೇಜು ರಸ್ತೆಯ ಮುಂಭಾಗದ ದ್ವಾರ ಬಾಗಿಲಿನಿಂದ ಕಾಲೇಜು ಆವರಣದವರೆಗೆ ಅದ್ಧೂರಿ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ವೆಂಕಟೇಶ್ವರ, ಪೂರಿ ಜಗನ್ನಾಥ, ರೇಣುಕ ಯಲ್ಲಮ್ಮ ಸೇರಿದಂತೆ ವಿವಿಧ ದೇವರ ಮೂರ್ತಿಗಳ ಸ್ತಬ್ಧಚಿತ್ರಗಳು, ಜಾನಪದ ವೈಭವ ಸಾರುವ ಪೋಸ್ಟರ್‌ಗಳು, ರಥಗಳು ಹಾಗೂ ವಿವಿಧ ವೇಷಭೂಷಣಗಳೊಂದಿಗೆ ಆಗಮಿಸಿದ್ದ ವಿದ್ಯಾರ್ಥಿಗಳು ಗಮನ ಸೆಳೆದರು.

ವಿವಿಧ ರಾಜ್ಯ, ಜಿಲ್ಲೆಗಳ ವೇಶಭೂಷಣ:

ಸದಾ ಜೀನ್ಸ್-ಟೀ ಶರ್ಟ್ ಹಾಗೂ ಚೂಡಿದಾರ್‌ಗಳಲ್ಲಿ ಕಾಲೇಜಿಗೆ ಆಗಮಿಸುತ್ತಿದ್ದ ವಿದ್ಯಾರ್ಥಿನಿಯರು ಗುರುವಾರ ಸಾಂಪ್ರದಾಯಿಕ ಉಡುಗೆ- ತೊಡುಗೆಗಳ ಮೂಲಕ ಸೀರೆ, ಲಂಗ, ದಾವಣಿಗಳಲ್ಲಿ, ಕೆಲವರು ರೇಷ್ಮೆ ಸೀರೆಗಳು ಹಾಗೂ ಮಿರಮಿರ ಮಿಂಚುವ ಚಿನ್ನದಂಥ ಆಭರಣಗಳೊಂದಿಗೆ ಮಿಂಚುತ್ತಿದ್ದರು.

ವಿದ್ಯಾರ್ಥಿಗಳು ಸಹ ನಾವೂ ಕಡಿಮೆ ಇಲ್ಲ ಎನ್ನುವಂತೆ ಬಿಳಿ ಷರ್ಟ್ ಮತ್ತು ಪಂಚೆಯಲ್ಲಿ ಮಿಂಚುತ್ತಿದ್ದರು. ನಮ್ಮ ದೇಶದ ವಿವಿಧ ಭಾಷೆ, ಸಂಸ್ಕೃತಿಯ ಸೊಬಗನ್ನು ಬಿಂಬಿಸುವ ವಸ್ತ್ರಗಳನ್ನು ಧರಿಸಿ ಎಲ್ಲರ ಗಮನ ಸೆಳೆದರು.

ವರ್ಣರಂಜಿತ ನೃತ್ಯ ಪ್ರದರ್ಶನ:

ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳು ದೇಶದ ವಿವಿಧ ರಾಜ್ಯಗಳ ಭಾಷೆ, ಸಂಸ್ಕೃತಿಯನ್ನು ಬಿಂಬಿಸುವ ಕಲೆಗಳ ನೃತ್ಯ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು. ಸಿಎಸ್‌ಇ ವಿಭಾಗದ ಎಂಜಿನಿಯರ್ ವಿದ್ಯಾರ್ಥಿಗಳು ರಾಜಸ್ಥಾನ ಸಂಸ್ಕೃತಿ ಮತ್ತು ರಾಜ್ಯದ ಕೊಡವ ನೃತ್ಯ, ಎಂಸಿಎ ವಿಭಾಗದ ವಿದ್ಯಾರ್ಥಿಗಳು ಕೇರಳ ಸಂಸ್ಕೃತಿ ಮತ್ತು ರಾಜ್ಯದ ಡೊಳ್ಳು ಕುಣಿತ, ಇ ಮತ್ತು ಇ ವಿಭಾಗದ ವಿದ್ಯಾರ್ಥಿಗಳು ಪಂಜಾಬ್ ಸಂಸ್ಕೃತಿ ಮತ್ತು ರಾಜ್ಯದ ಹುಲಿ ಕುಣಿತ, ಐ ಮತ್ತು ಪಿ ವಿಭಾಗದ ವಿದ್ಯಾರ್ಥಿಗಳು ಮಹಾರಾಷ್ಟ್ರದ ಸಂಸ್ಕೃತಿ ಮತ್ತು ಸುಗ್ಗಿ ಹಾಡುಗಳಿಗೆ ನೃತ್ಯ ಮಾಡುವ ಮೂಲಕ ಎಲ್ಲರ ಕಣ್ಮನ ಸೆಳೆದರು.

ಸಿವಿಲ್ ವಿಭಾಗದ ವಿದ್ಯಾರ್ಥಿಗಳು ಆಂಧ್ರಪ್ರದೇಶದ ಸಂಸ್ಕೃತಿ ಮತ್ತು ಯಲ್ಲಮ್ಮ ದೇವಿ, ಲಂಬಾಣಿ ನೃತ್ಯ ಮಾಡಿದರು. ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳು ಒಡಿಸಾ ಮತ್ತು ಪಶ್ಚಿಮ ಬಂಗಾಳದ ಸಂಸ್ಕೃತಿ ಮತ್ತು ರಾಜ್ಯದ ಕೋಲಾಟ, ಇ ಮತ್ತು ಸಿ ವಿಭಾಗದ ವಿದ್ಯಾರ್ಥಿಗಳು ಉತ್ತರಪ್ರದೇಶದ ಸಂಸ್ಕೃತಿ ಮತ್ತು ರಾಜ್ಯದ ಯಕ್ಷಗಾನ, ಇ ಮತ್ತು ಐ ವಿಭಾಗದ ವಿದ್ಯಾರ್ಥಿಗಳು ತಮಿಳುನಾಡಿನ ಸಂಸ್ಕೃತಿ ಮತ್ತು ವೀರಗಾಸೆ ಹಾಗೂ ಎಂಬಿಎ ವಿಭಾಗದ ವಿದ್ಯಾರ್ಥಿಗಳು ಗುಜರಾತ್ ಸಂಸ್ಕೃತಿ ಮತ್ತು ಕಂಸಾಳೆ ನೃತ್ಯ ಮಾಡುವ ಮೂಲಕ ಸಂಸ್ಕೃತಿಯನ್ನು ಅನಾವರಣಗೊಳಿಸಿದರು. ಒಟ್ಟಾರೆ ಈ ಕಾರ್ಯಕ್ರಮ ಒಂದು ಹಳ್ಳಿಯಲ್ಲಿ ನಡೆದ ಹಬ್ಬದಂತೆ ಕಂಡು ಬಂದಿತು.

ಕಾಲೇಜಿನ ಪ್ರಾಚಾರ್ಯರು, ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು, ಭಾಗವಹಿಸಿದ್ದರು.

- - -

-17ಕೆಡಿವಿಜಿ42: ದಾವಣಗೆರೆಯ ಯುಬಿಡಿಟಿ ಕಾಲೇಜಿನಲ್ಲಿ ನಡೆದ ಚೈತ್ರ ಮತ್ತು ಪಾರಂಪರಿಕ ಸಾಂಸ್ಕೃತಿಕ ದಿನದ ಕಾರ್ಯಕ್ರಮವನ್ನು ವಿಟಿಯು ಕುಲಸಚಿವ ಡಾ.ಬಿ.ಇ.ರಂಗಸ್ವಾಮಿ ಉದ್ಘಾಟಿಸಿದರು.

-17ಕೆಡಿವಿಜಿ43, 44, 45, 46, 47, 48: ದಾವಣಗೆರೆಯ ಯುಬಿಡಿಟಿ ಕಾಲೇಜಿನಲ್ಲಿ ನಡೆದ ಚೈತ್ರ ಮತ್ತು ಪಾರಂಪರಿಕ ಸಾಂಸ್ಕೃತಿಕ ದಿನದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಿವಿಧ ಸಂಸ್ಕೃತಿ ಬಿಂಬಿಸುವ ವಸ್ತ್ರಗಳನ್ನು ತೊಟ್ಟು ಸಂಭ್ರಮಿಸಿದರು.