ಸಾರಾಂಶ
ಶಿವಾನಂದ ಅಂಗಡಿ
ಅಣ್ಣಿಗೇರಿ:ನವಲಗುಂದ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೊಲಗಳಿಗೆ ತೆರಳಲು ಶಾಸಕ ಎನ್.ಎಚ್. ಕೋನರಡ್ಡಿ ಅವರು ನಿರ್ಮಿಸಿದ ಚಕ್ಕಡಿ ರಸ್ತೆಯಿಂದಾಗಿ ಅಣ್ಣಿಗೇರಿಯಲ್ಲಿ ಹೊಲಗಳಿಗೆ ಭಾರಿ ಬೇಡಿಕೆ ಬಂದಿದ್ದು, ದುಪ್ಪಟ್ಟು ದರಕ್ಕೆ ಮಾರಾಟವಾಗುತ್ತಿವೆ. ದಾಖಲೆಯ ಲೆಕ್ಕದಲ್ಲಿ ವರ್ಷಕ್ಕೆ ಲಾವಣಿ ದರ ನಿಗದಿಯಾಗುತ್ತಿದೆ.
''''ನಮ್ಮ ಹೊಲ ನಮ್ಮ ರಸ್ತೆ'''' ಯೋಜನೆಯಡಿ ನವಲಗುಂದ ಕ್ಷೇತ್ರದ ನವಲಗುಂದ ಹಾಗೂ ಅಣ್ಣಿಗೇರಿ, ಹುಬ್ಬಳ್ಳಿ ತಾಲೂಕು ಸೇರಿದಂತೆ ಆಯಾ ತಾಲೂಕಿನಲ್ಲಿ 71 ಚಕ್ಕಡಿ ರಸ್ತೆಗಳು ನಿರ್ಮಾಣವಾಗಿವೆ. ಒಂದೊಂದು ರಸ್ತೆ 30ರಿಂದ 35 ಫುಟ್ ಅಗಲವಾಗಿದ್ದು, ಹೆದ್ದಾರಿ ನೋಡಿದಂತಾಗುತ್ತದೆ. 219ಕ್ಕೂ ಹೆಚ್ಚು ಕಿಮೀ ರಸ್ತೆ ಈಗಾಗಲೇ ಸಂಚಾರಕ್ಕೆ ಮುಕ್ತವಾಗಿದ್ದು, ಇನ್ನು ಕೆಲವು ರಸ್ತೆಗಳ ಕಾಮಗಾರಿ ಪ್ರಗತಿಯಲ್ಲಿದೆ ಎನ್ನುತ್ತಾರೆ ಶಾಸಕ ಕೋನರಡ್ಡಿ.ಅಣ್ಣಿಗೇರಿ ಪಟ್ಟಣದ ಹೊಲಗಳಿಗೆ ತೆರಳಲು ವಿವಿಧೆಡೆ ಚಕ್ಕಡಿ ರಸ್ತೆಗಳನ್ನು ನಿರ್ಮಿಸಲಾಗಿದ್ದು, ಈ ರಸ್ತೆ ನಿರ್ಮಾಣದ ಬಳಿಕ ಹೊಲಗಳಿಗೆ ಭಾರೀ ಬೇಡಿಕೆ ಬಂದಿದೆ. ಎಕರೆಗೆ ₹6-7 ಲಕ್ಷಕ್ಕೆ ಮಾರಾಟವಾಗುತ್ತಿದ್ದ ಹೊಲಗಳು ಈಗ ₹ 10ರಿಂದ 15 ಲಕ್ಷದ ವರೆಗೆ ಮಾರಾಟವಾಗುತ್ತಿವೆ. ಪಟ್ಟಣದಲ್ಲಿ ಲಾವಣಿ ಹೊಲದ ದರ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಹಿಂದಿನ ವರ್ಷಗಳಲ್ಲಿ 4 ಎಕರೆಗೆ ₹30ರಿಂದ ₹40 ಸಾವಿರ ವರೆಗೂ ವರ್ಷಕ್ಕೆ ಲಾವಣಿ ಆಗುತ್ತಿದ್ದವು. ಕಳೆದ ಯುಗಾದಿ ಸಂದರ್ಭದಲ್ಲಿ ಇದೇ ಹೊಲ ₹60ರಿಂದ ₹70 ಸಾವಿರ ವರೆಗೂ ಲಾವಣಿ ಆಗಿವೆ ಎನ್ನುತ್ತಾರೆ ಈ ಭಾಗದ ರೈತರು.
ದಾರಿ ಇಲ್ಲದ್ದಕ್ಕೆ ಬಿತ್ತನೆಯೇ ಆಗುತ್ತಿರಲಿಲ್ಲ:ನವಲಗುಂದ ವಿಧಾನಸಭಾ ಕ್ಷೇತ್ರ ಬಹುತೇಕ ಎರೆಮಣ್ಣು ಹೊಂದಿದ ಭೂಮಿ ಇದೆ. ಮುಂಗಾರಿ ಸಂದರ್ಭದಲ್ಲಿ ಮಳೆ ಆರಂಭವಾದರೆ ರೈತರು ಬಿತ್ತನೆಗೆ ಅನುಕೂಲವಾಯಿತು ಎಂದು ಹರ್ಷ ಪಡುತ್ತಾರೆ. ಆದರೆ, ಕ್ಷೇತ್ರದಲ್ಲಿ ಮಳೆ ಹೆಚ್ಚಾದರೆ ಹೊಲಗಳಿಗೆ ತೆರಳಲು ಎರೆಮಣ್ಣಿನ ದಾರಿಗಳು ಕುಸಿದು ಬಂದ್ ಆಗುತ್ತಿದ್ದವು. ಹೀಗಾಗಿ ಬಹುತೇಕ ಹೊಲಗಳಲ್ಲಿ ಬಿತ್ತನೆಯೇ ಆಗುತ್ತಿರಲಿಲ್ಲ. ಎಷ್ಟೋ ಬಾರಿ ಟ್ರ್ಯಾಕ್ಟರ್‌ಗಳು ತೆಗ್ಗುಗಳಲ್ಲಿ ಸಿಲುಕಿಕೊಂಡು ಎರಡೆರಡು ಟ್ರ್ಯಾಕ್ಟರ್ ಹಚ್ಚಿ ಮೇಲಕ್ಕೆ ಬಂದ ಉದಾಹರಣೆಗಳಿವೆ.
ನೂರಾರು ಹಳ್ಳಿಗಳ ಸಹಸ್ರಾರು ರೈತರ ಈ ಸಮಸ್ಯೆಯನ್ನು ಮನಗಂಡ ಶಾಸಕ ಕೋನರಡ್ಡಿ ಅವರು ನಮ್ಮ ಹೊಲ ನಮ್ಮ ರಸ್ತೆ ಯೋಜನೆಯಡಿ ಇಡೀ ಕ್ಷೇತ್ರದಾದ್ಯಂತ ಚಕ್ಕಡಿ ರಸ್ತೆಗಳನ್ನುನಿರ್ಮಿಸಿದ್ದಾರೆ. ಹೀಗಾಗಿ ಹದಗೆಟ್ಟ ರಸ್ತೆಗಳಲ್ಲಿ ತೆರಳಲು ಡೀಸೆಲ್ ಪ್ರಮಾಣ ಕೂಡಾ ಹೆಚ್ಚಾಗುತ್ತಿತ್ತು. ಈಗ ಚಕ್ಕಡಿ ರಸ್ತೆಗಳಾದ ಮೇಲೆ ಹತ್ತೇ ನಿಮಿಷದಲ್ಲಿ ಹೊಲಕ್ಕೆ ತೆರಳುತ್ತೇವೆ. ಒಕ್ಕಲುತನ ಸಲೀಸಾಗಿದೆ ಎಂದು ಹರ್ಷ ವ್ಯಕ್ತಪಡಿಸುತ್ತಾರೆ ರೈತರು.ಅಣ್ಣಿಗೇರಿಯಲ್ಲಿ ಅಣ್ಣಿಗೇರಿ-ಯಮನೂರ ಚಕ್ಕಡಿ ರಸ್ತೆ ನಿರ್ಮಿಸಿದ್ದು, ಭದ್ರಾಪುರ, ಬಸಾಪುರಕ್ಕೂ ಇದು ಸಂಪರ್ಕಿಸುತ್ತದೆ. ಅಣ್ಣಿಗೇರಿ-ಬೆಂತೂರ-ಕುರ್ತಕೋಟಿ, ಅಣ್ಣಿಗೇರಿ-ಉಮಚಗಿ, ಅಣ್ಣಿಗೇರಿ-ಭದ್ರಾಪುರ ಚಕ್ಕಡಿ
ರಸ್ತೆಯನ್ನು ಸಹ ನಿರ್ಮಿಸಲಾಗಿದೆ.ರೈತರೇ ನಿಂತು ಚಕ್ಕಡಿ ರಸ್ತೆ ಮಾಡಿಸಿದ್ದಾರೆ. ಇನ್ನೂ ಕೆಲವು ಕಡೆ ರಸ್ತೆ ಕಾಮಗಾರಿಗಳು ನಡೆಯಬೇಕಾಗಿದ್ದು, ಮಳೆ ಹಿನ್ನೆಲೆಯಲ್ಲಿ ಕೆಲಸ ನಿಂತಿದೆ. ಆದಷ್ಟು ಬೇಗ ಕಾಮಗಾರಿಗಳನ್ನು ಮುಗಿಸಿ ಹೊಲಗಳಿಗೆ ತೆರಳಲು ಅನುಕೂಲ ಕಲ್ಪಿಸುತ್ತೇವೆ ಎಂದು ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದ್ದಾರೆ.ಮುಂಗಾರಿ ಸಂದರ್ಭದಲ್ಲಿ ಹೊಲಗಳಿಗೆ ತೆರಳಲು ದಾರಿ ಇಲ್ಲದೇ ನಾವು ಬಿತ್ತನೆಯನ್ನೇ ಮಾಡುತ್ತಿರಲಿಲ್ಲ. ಈಗ ಚಕ್ಕಡಿ ರಸ್ತೆ ನಿರ್ಮಿಸಿದ ಮೇಲೆ ಒಕ್ಕಲುತನ ಬಹಳ ಸಲೀಸಾಗಿದ್ದು, ಹತ್ತೇ ನಿಮಿಷದಲ್ಲೇ ಹೊಲಗಳಿಗೆ ತೆರಳುತ್ತೇವೆ. ಡೀಸೆಲ್ ಖರ್ಚು ಸಹ ಕಡಿಮೆಯಾಗಿದೆ ಎಂದು ಅಣ್ಣಿಗೇರಿಯ ಪ್ರಗತಿಪರ ರೈತ ಭಗವಂತಪ್ಪ ರಾಮಪ್ಪ ಪುಟ್ಟಣ್ಣವರ ತಿಳಿಸಿದರು.