ಸಾರಾಂಶ
ತಾಲ್ಲೂಕಿನ ಚಕ್ರಬಾವಿ ಗ್ರಾಮದ ಶಕ್ತಿದೇವತೆ ಹುಲಿಯೂರಮ್ಮ ದೇವಿಯ ಅಗ್ನಿಕೊಂಡೋತ್ಸವ ಅದ್ಧೂರಿಯಾಗಿ ನೆರವೇರಿತು.ಮಂಗಳವಾರ ಸಂಜೆ ಗ್ರಾಮಸ್ಥರಿಂದ ಅಗ್ನಿಕೊಂಡಕ್ಕೆ ಎತ್ತಿನ ಗಾಡಿ, ಟ್ರ್ಯಾಕ್ಟರ್ ಮೂಲಕ ಸೌದೆ ಸಂಗ್ರಹಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದ ಬಳಿಕ ಕೊಂಡಕ್ಕೆ ಹಾಕಲಾಯಿತು.
ಕನ್ನಡಪ್ರಭ ವಾರ್ತೆ ಮಾಗಡಿ
ತಾಲ್ಲೂಕಿನ ಚಕ್ರಬಾವಿ ಗ್ರಾಮದ ಶಕ್ತಿದೇವತೆ ಹುಲಿಯೂರಮ್ಮ ದೇವಿಯ ಅಗ್ನಿಕೊಂಡೋತ್ಸವ ಅದ್ಧೂರಿಯಾಗಿ ನೆರವೇರಿತು.ಮಂಗಳವಾರ ಸಂಜೆ ಗ್ರಾಮಸ್ಥರಿಂದ ಅಗ್ನಿಕೊಂಡಕ್ಕೆ ಎತ್ತಿನ ಗಾಡಿ, ಟ್ರ್ಯಾಕ್ಟರ್ ಮೂಲಕ ಸೌದೆ ಸಂಗ್ರಹಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದ ಬಳಿಕ ಕೊಂಡಕ್ಕೆ ಹಾಕಲಾಯಿತು. ತಮಟೆ ವಾದ್ಯದೊಂದಿಗೆ ಮೆರವಣಿಗೆ ಮೂಲಕ ಚಕ್ರಬಾವಿ ಕೆರೆ ಬಳಿ ಸೌದೆ ಶೇಖರಿಸಲಾಯಿತು. ರಾತ್ರಿ 11 ಗಂಟೆಗೆ ಹುಲಿಯೂರಮ್ಮ ದೇವಿಯ ಉತ್ಸವ ಮೂರ್ತಿಗೆ ಕೊಂಡದ ಬಳಿ ವಿಶೇಷ ಪೂಜೆ ಸಲ್ಲಿಸಿ ಗ್ರಾಮಸ್ಥರಿಂದ ಸೌದೆಗೆ ಅರಳು ಹಾಕಿ ಹರಕೆ ತೀರಿಸಿದ ಬಳಿಕ ಅಗ್ನಿ ಸ್ಪರ್ಶ ಮಾಡಲಾಯಿತು. ಬುಧವಾರ ಬೆಳಗ್ಗೆ 6 ಗಂಟೆಗೆ ಹುಲಿಯೂರಮ್ಮ ದೇವಿ, ಕೋಡಿ ಬಸವಣ್ಣ, ಮಾದೇಶ್ವರ ಸೇರಿ ವಿವಿಧ ಉತ್ಸವ ಮೂರ್ತಿಗಳ ಜೊತೆ ಮಹಿಳೆಯರು ಆರತಿಯೊಂದಿಗೆ ಹುಲಿಯೂರಮ್ಮ ದೇವಸ್ಥಾನದಿಂದ ಕೆರೆಯವರೆಗೂ ಮೆರವಣಿಗೆ ನಡೆಸಿ ಅಗ್ನಿ ಕೊಂಡೋತ್ಸವಕ್ಕೆ ಚಾಲನೆ ನೀಡಿದರು.
ಬಾಡೂಟ ವ್ಯವಸ್ಥೆ: ಹುಲಿಯೂರಮ್ಮ ದೇವಿಯ ಅಗ್ನಿಕೊಂಡೋತ್ಸವದ ಅಂಗವಾಗಿ ಗ್ರಾಮದೇವತೆ ಮಾರಮ್ಮ ದೇವಿಗೆ ಕೋಳಿ, ಆಡು ಬಲಿ ನೀಡಲಾಯಿತು. ಗ್ರಾಮಸ್ಥರು ಸಂಬಂಧಿಕರನ್ನು ಕರೆದು ಊರ ಹಬ್ಬದ ಪ್ರಯುಕ್ತ ಭರ್ಜರಿ ಬಾಡೂಟ ಹಾಕಿದರು. ಗುರುವಾರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಉತ್ಸವ ಮೂರ್ತಿಗಳ ಮೆರವಣಿಗೆಯೊಂದಿಗೆ ಚಕ್ರಬಾವಿ ಗ್ರಾಮದ ಊರ ಹಬ್ಬಕ್ಕೆ ತೆರೆಎಳೆಯಲಾಗುತ್ತದೆ. ಮೂರು ದಿನಗಳ ಕೋಡಿ ಬಸವಣ್ಣ ಸ್ವಾಮಿ, ಹುಲಿಯೂರಮ್ಮ ದೇವಿಯ ಅಗ್ನಿಕೊಂಡೋತ್ಸವಕ್ಕೆ ಚಕ್ರಬಾವಿ ಗ್ರಾಮಸ್ಥರು ಸೇರಿ ಸುತ್ತಮುತ್ತಲಿನ ಗ್ರಾಮಸ್ಥರು ಊರ ಹಬ್ಬಕ್ಕೆ ಸಾಕ್ಷಿಯಾದರು.