ಕುಷ್ಟಗಿ ತಾಲೂಕಿನ ಚಳಗೇರಿ ಗ್ರಾಮದ ಶರಣಯ್ಯ ಗಣಾಚಾರ್ ಅವರ ಜಾನುವಾರು ಶೆಡ್‌ನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಆಕಳು ಮೃತಪಟ್ಟ ಹಿನ್ನೆಲೆಯಲ್ಲಿ ಶಾಸಕ ದೊಡ್ಡನಗೌಡ ಪಾಟೀಲ್‌ ಅವರು ಸ್ಥಳಕ್ಕೆ ಭೇಟಿ ನೀಡಿದರು.

ಕುಷ್ಟಗಿ: ತಾಲೂಕಿನ ಚಳಗೇರಿ ಗ್ರಾಮದ ಶರಣಯ್ಯ ಗಣಾಚಾರ್ ಅವರ ಜಾನುವಾರು ಶೆಡ್‌ನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಆಕಳು ಮೃತಪಟ್ಟ ಹಿನ್ನೆಲೆಯಲ್ಲಿ ಶಾಸಕ ದೊಡ್ಡನಗೌಡ ಪಾಟೀಲ್‌ ಅವರು ಸ್ಥಳಕ್ಕೆ ಭೇಟಿ ನೀಡಿ, ಶರಣಯ್ಯ ಗಣಾಚಾರ್ ಹಾಗೂ ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳಿದರು.ಘಟನೆಯಿಂದ ಉಂಟಾದ ನಷ್ಟದ ಕುರಿತು ಕುಟುಂಬದವರಿಂದ ಮಾಹಿತಿ ಪಡೆದ ಶಾಸಕರು, ಗಾಯಗೊಂಡ ಜಾನುವಾರುಗಳ ಸ್ಥಿತಿಗತಿಯನ್ನೂ ವಿಚಾರಿಸಿದರು.

ಶಾಸಕ ದೊಡ್ಡನಗೌಡ ಪಾಟೀಲ್‌ ಮಾತನಾಡಿ, ಜಾನುವಾರುಗಳ ನಷ್ಟದಿಂದ ಶರಣಯ್ಯ ಗಣಾಚಾರ್ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಗಾಯಗೊಂಡ ಜಾನುವಾರುಗಳಿಗೆ ಚಿಕಿತ್ಸೆ ಹಾಗೂ ನಿಯಮಾನುಸಾರ ಪರಿಹಾರ ದೊರೆಯುವಂತೆ ಅಧಿಕಾರಿಗಳೊಂದಿಗೆ ಮಾತನಾಡಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಜಾನುವಾರು ಶೆಡ್‌ ಭಸ್ಮ-ಪರಿಹಾರ ನೀಡಲು ರೈತ ಸಂಘ ಆಗ್ರಹ:

ಜಾನುವಾರ ಶೆಡ್‌ ಸುಟ್ಟು ಭಸ್ಮವಾಗಿ, ಆಕಳು ಮೃತಪಟ್ಟ ಹಿನ್ನೆಲೆಯಲ್ಲಿ ತಾಲೂಕಿನ ಚಳಗೇರಿ ಗ್ರಾಮದ ರೈತ ಶರಣಯ್ಯ ಗಣಾಚಾರ ಅವರ ಹೊಲಕ್ಕೆ ರೈತ ಸಂಘದ ಮುಖಂಡರು ಭೇಟಿ ನೀಡಿ ಪರಿಶೀಲಿಸಿದರು.ಶುಕ್ರವಾರ ರಾತ್ರಿ ಸಂಭವಿಸಿದ ಈ ಅವಘಡದಲ್ಲಿ ಒಂದು ಆಕಳು ಮೃತಪಟ್ಟಿದ್ದು, ಮತ್ತಷ್ಟು ಜಾನುವಾರುಗಳು ಗಾಯಗೊಂಡಿವೆ. ಶೆಡ್‌ನಲ್ಲಿದ್ದ ವಸ್ತುಗಳು ಸಹ ಸುಟ್ಟುಹೋಗಿದ್ದು, ರೈತ ಕುಟುಂಬಕ್ಕೆ ಅಪಾರ ನಷ್ಟವಾಗಿದೆ. ರೈತ ಸಂಘದ ಮುಖಂಡರು ಸಂತ್ರಸ್ತ ರೈತ ಕುಟುಂಬದವರಿಗೆ ಸಾಂತ್ವನ ಹೇಳಿದರು.ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ದೋಟಿಹಾಳ ಹಾಗೂ ಕೊಪ್ಪಳ ಜಿಲ್ಲಾಧ್ಯಕ್ಷ ಹೊನ್ನಪ್ಪ ಎಚ್. ತಳವಾರ್ ಮಾತನಾಡಿ, ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಶಾಸಕರು ಕೂಡ ಕುಟುಂಬಕ್ಕೆ ನೆರವಾಗಬೇಕು. ಸರ್ಕಾರ ಸಂತ್ರಸ್ತ ರೈತ ಕುಟುಂಬಕ್ಕೆ ತಕ್ಷಣ ₹5 ಲಕ್ಷ ಪರಿಹಾರ ನೀಡಬೇಕು. ಪರಿಹಾರ ನೀಡುವಲ್ಲಿ ವಿಳಂಬವಾದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.ಗ್ರಾಮಸ್ಥರು ಹಾಗೂ ರೈತ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.