ಚಾಲಾಕಿ ಚಾಯ್‌ವಾಲಾ, ಫರ್ನಿಚರ್ ವರ್ಕರ್ ಸೆರೆ
KannadaprabhaNewsNetwork | Published : Oct 16 2023, 01:45 AM IST
ಚಾಲಾಕಿ ಚಾಯ್‌ವಾಲಾ, ಫರ್ನಿಚರ್ ವರ್ಕರ್ ಸೆರೆ
ಸಾರಾಂಶ
ಸರಣಿ ಸರಗಳ್ಳತನದಲ್ಲಿ ಭಾಗಿಯಾಗಿದ್ದ ಚಾಲಾಕಿಗಳು । 15 ಪ್ರಕರಣ ಪತ್ತೆ, ಕಳ್ಳತನವಾಗಿದ್ದ 17. 88 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ
ಸರಣಿ ಸರಗಳ್ಳತನದಲ್ಲಿ ಭಾಗಿಯಾಗಿದ್ದ ಚಾಲಾಕಿಗಳು । 15 ಪ್ರಕರಣ ಪತ್ತೆ, ಕಳ್ಳತನವಾಗಿದ್ದ 17. 88 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಕನ್ನಡಪ್ರಭ ವಾರ್ತೆ ಕಲಬುರಗಿ ಇಲ್ಲಿನ ಅಶೋಕ ನಗರ, ಸ್ಟೇಷನ್ ಬಜಾರ್, ರಾಘವೇಂದ್ರ ನಗರ, ಎಂಬಿ ನಗರ ಹಾಗೂ ವಿವಿ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸರಗಳ್ಳನ ಮಾಡುತ್ತಿದ್ದ ಟೀ ಶಾಪ್ ಮಾಲೀಕ ಹಾಗೂ ಪೀಠೋಪಕರಣ ಕುಶಲ ಕೆಲಸಗಾರರಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಇಬ್ಬರೂ ಖದೀಮರು ನಗರವಾಸಿಗಳನ್ನು ಬೆಚ್ಚಿ ಬೀಳಿಸಿದ್ದಂತಹ ತೀರ ಈಚೆಗೆ ನಗರದಲ್ಲಿ ಸಂಭವಿಸಿದ್ದಂತಹ 15 ಸರಗಳ್ಳತನ ಪ್ರಕರಣದಲ್ಲಿದ್ದರು ಎಂಬುದು ಗೊತ್ತಾಗಿದ್ದು ಇವರಿಂದ ಅಪಾರ ಪ್ರಮಾಣದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಕಳೆದ 3 ತಿಂಗಳಲ್ಲಿ ನಗರದಲ್ಲಿ ಹಲವು ಪ್ರದೇಶಗಳಲ್ಲಿ ಸರಗಳ್ಳತನ ನಡೆದು ಜನತೆ ಬೆಚ್ಚಿಬಿದ್ದಿದ್ದರು, ಪೊಲೀಸರಿಗೆ ಹಿಡಿಶಾಪ ಹಾಕುತ್ತ ಕಳೆದು ಹೋದ ಬಂಗಾರ, ಬೆಳ್ಳಿಗಾಗಿ ಪರದಾಡುತ್ತಿದ್ದರು. ಸರಣಿ ಸರಗಳ್ಳತನ ಮಾಡುತ್ತ ನಗರದ ಹಲವಾರು ಬಡಾವಣೆಗಳಲ್ಲಿ ಮಹಿಳೆಯರು, ಮಕ್ಕಳಲ್ಲಿ ಭಯ ಭೀತಿಯ ವಾತಾವರಣ ಹುಟ್ಟುಹಾಕಿದ್ದ ಆಳಂದ ರಿಂಗ್ ರೋಡ ಹತ್ತಿರ ಟೀ ಶಾಪ್‌ನಲ್ಲಿ ಕೆಲಸದಲ್ಲಿರುವ ಚಾಯ್‌ವಾಲಾ ಅಹ್ಮದ ನಗರದ ನಿವಾಸಿ ಶೇಖ್ ಅಜರುದ್ದಿನ್ ಶೇಖ್ ರುಕ್ಮೋದ್ದಿನ್ (26 ), ಪೀಠೋಪಕರಣ ಕುಶಲ ಕೆಲಸಗಾರ ಹಾಗರಗಾ ಕ್ರಾಸ್ ನೂರಾನಿ ಮೊಹಲ್ಲಾ ನಿವಾಸಿ ಮಹ್ಮದ್ ತೌಸೀಫ್ ಮಹ್ಮದ ರಫೀಕ್ ( 23) ಇವರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇರಿಬ್ಬರು ಎಂದಿನಂತೆ ಟೀ ಮಾರುವ, ಪೀಠೋಪಕರಣ ಕೆಲಸಗಳನ್ನು ಮಾಡುತ್ತಲೇ ಸರಗಳ್ಳತನ ಕೆಲಸದಲ್ಲಿ ಪಳಗಿದ್ದರು ಎಂದು ವಿಚಾರಣೆಯಿಂದ ಗೊತ್ತಾಗಿದೆ. ಯಾರಿಗೂ ತಮ್ಮ ಮೇಲೆ ಶಂಕೆ ಬಾರದಂತೆ ಇದ್ದ ಇವರ ದಿನಚರಿ ಕೇಳಿ ಪೊಲೀಸರೇ ಗಾಬರಿಯಾಗಿದ್ದಾರೆ. ನಗರದ ವಿವಿಧ ಠಾಣೆಗಳಲ್ಲಿ ವರದಿಯಾದ 15 ಸರಗಳ್ಳತನ ಪ್ರಕರಣಗಳಿಗೆ ಸಂಬಂಧಿಸಿದ 17.88 ಲಕ್ಷ ರೂ ಮೌಲ್ಯದ 298 ಗ್ರಾಂ ಬಂಗಾರದ ಆಭರಣಗಳು ಮತ್ತು ಕೃತ್ಯಗಳಿಗೆ ಉಪಯೋಗಿಸಿದ 2 ದ್ವಿಚಕ್ರ ವಾಹನಗಳನ್ನುಆರೋಪಿಗಳಿಂದ ಜಪ್ತಿ ಮಾಡಲಾಗಿದೆ. ನಗರ ಉಪ ಪೊಲೀಸ್ ಆಯುಕ್ತೆ ಕನಿಕಾ ಸಿಕ್ರಿವಾಲ್, ಚಂದ್ರಪ್ಪ ಮಾರ್ಗದರ್ಶನದಲ್ಲಿ , ದಕ್ಷಿಣ ಉಪ ವಿಭಾಗದ ಎಸಿಪಿ ಭೂತೇಗೌಡ ನೇತೃತ್ವದಲ್ಲಿ ಸ್ಟೇಷನ್ ಬಜಾರ್ ಪಿಐ ಶಕಿಲ್‍ಅಹ್ಮದ ಅಂಗಡಿ , ಅಶೋಕ ನಗರ ಪಿಐ ಅರುಣಕುಮಾರ, ಸಿಸಿಬಿ ಘಟಕ ಪಿಎಸ್ಐ ಬಸವರಾಜ ಹಾಗೂ ಸಿಬ್ಬಂದಿಗಳಾದ ವೈಜನಾಥ, ಗುರುಮೂರ್ತಿ, ಶಿವಲಿಂಗ, ಈರಣ್ಣಾ, ರಾಜಕುಮಾರ, ಫಿರೋಜ್, ಭೋಗೇಶ್,ಶಶಿಕಾಂತ, ಮೋಶಿನ್ ಮತ್ತು ಜಾವೀದ್ ಕೊತ್ವಾಲ್ ಅವರನ್ನು ಒಳಗೊಂಡ ತಂಡದವರು ಆರೋಪಿಗಳನ್ನು ಬಂಧಿಸಿದೆ. ಸರಗಳ್ಳರ ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದ ಕೆಲಸಕ್ಕೆ ನಗರ ಪೊಲೀಸ್ ಆಯುಕ್ತ ಚೇತನ್ ಆರ್ ಮೆಚ್ಚುಗೆ ಸೂಚಿಸಿದ್ದಾರೆ.