ಸಾರಾಂಶ
ಕೆಲವರಿಗೆ ಅಂಬೇಡ್ಕರ್ ಅವರ ಜಪ ಮಾಡುವುದು ಫ್ಯಾಷನ್ ಆಗಿದೆ ಎನ್ನುವ ಮೂಲಕ ದೇಶದ ಬಹುಜನರ ಹೃದಯವನ್ನು ಕೆಣಕಿದ್ದಾರೆ.
ಬಳ್ಳಾರಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಕುರಿತು ಕೇಂದ್ರ ಸಚಿವ ಅಮಿತ್ ಶಾ ಅವರು ನೀಡಿರುವ ಹೇಳಿಕೆಯನ್ನು ಖಂಡಿಸಿ ಜಿಲ್ಲಾ ಪ್ರಜಾ ಪರಿವರ್ತನಾ ವೇದಿಕೆ ಹಾಗೂ ರಾಜ್ಯ ಛಲವಾದಿ ಮಹಾಸಭಾ ನೇತೃತ್ವದಲ್ಲಿ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಕೆಲವರಿಗೆ ಅಂಬೇಡ್ಕರ್ ಅವರ ಜಪ ಮಾಡುವುದು ಫ್ಯಾಷನ್ ಆಗಿದೆ ಎನ್ನುವ ಮೂಲಕ ದೇಶದ ಬಹುಜನರ ಹೃದಯವನ್ನು ಕೆಣಕಿದ್ದಾರೆ. ಸಂಸತ್ ನಲ್ಲಿಯೇ ಈ ರೀತಿಯ ಆಕ್ಷೇಪಾರ್ಹ ಮಾತುಗಳನ್ನಾಡಿರುವುದು ಅತ್ಯಂತ ಖಂಡನೀಯ. ಈ ರೀತಿಯ ಹೇಳಿಕೆಗಳನ್ನು ದೇಶದ ಬಹುಜನರು ಒಪ್ಪಲು ಸಾಧ್ಯವಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.ದಲಿತ ಹಾಗೂ ಶೋಷಿತ ಸಮದಾಯಗಳ ಆಶಾಕಿರಣವಾಗಿರುವ ಅಂಬೇಡ್ಕರ್ ಅವರು ತಮ್ಮ ಇಡೀ ಬದುಕನ್ನು ತುಳಿತಕ್ಕೊಳಗಾದ ಸಮುದಾಯಕ್ಕೆ ಮೀಸಲಿಟ್ಟ ಮಹಾಚೇತನವಾಗಿದ್ದಾರೆ. ದಾದಾಸಾಹೇಬ್ ಬಿ.ಆರ್.ಅಂಬೇಡ್ಕರ್ ಅವರ ಹೋರಾಟದಿಂದಾಗಿಯೇ ದಲಿತ ಸಮುದಾಯ ಒಂದಷ್ಟು ಸೌಲಭ್ಯಗಳನ್ನು ಕಾಣಲು ಸಾಧ್ಯವಾಗಿದೆ. ಹೀಗಿರುವಾಗ ಜವಾಬ್ದಾರಿ ಸ್ಥಾನದಲ್ಲಿರುವ ಕೇಂದ್ರ ಸಚಿವರು ಈ ರೀತಿಯ ಹೇಳಿಕೆಗಳನ್ನು ನೀಡುವುದು ಎಷ್ಟು ಸರಿ ? ಎಂದು ಪ್ರಶ್ನಿಸಿದರಲ್ಲದೆ, ಕೇಂದ್ರ ಸಚಿವರ ವಿರುದ್ಧ ರಾಷ್ಟ್ರಪತಿಗಳು ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ನಗರದ ಪ್ರಮುಖ ಬೀದಿಗಳ ಮೂಲಕ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ರಾಜ್ಯ ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಕೆ.ಸಿ.ಸಿದ್ಧಬಸಪ್ಪ, ಜಿಲ್ಲಾ ಉಪಾಧ್ಯಕ್ಷ ಆನಂದ್‌ಕುಮಾರ ಕುಡಿತಿನಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಲೋಕೇಶ್ ಕಪ್ಪಗಲ್ ಸೇರಿದಂತೆ ಸಂಘಟನೆಗಳ ಜಿಲ್ಲಾ ಹಾಗೂ ತಾಲೂಕು ಸಮಿತಿ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.24ಬಿಆರ್‌ವೈ4
ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತು ಕೇಂದ್ರ ಸಚಿವ ಅಮಿತ್ ಶಾ ಅವರು ನೀಡಿರುವ ಹೇಳಿಕೆಯನ್ನು ಖಂಡಿಸಿ ಬಳ್ಳಾರಿಯಲ್ಲಿ ಮಂಗಳವಾರ ಜಿಲ್ಲಾ ಪ್ರಜಾ ಪರಿವರ್ತನಾ ವೇದಿಕೆ ಹಾಗೂ ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾ ಸದಸ್ಯರು ಪ್ರತಿಭಟನೆ ನಡೆಸಿದರು.