ಛಲವಾದಿ ನಾರಾಯಣಸ್ವಾಮಿ ರಾಜಿನಾಮೆಗೆ ಆಗ್ರಹ

| Published : Dec 27 2024, 12:46 AM IST

ಛಲವಾದಿ ನಾರಾಯಣಸ್ವಾಮಿ ರಾಜಿನಾಮೆಗೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಅಲೆಮಾರಿ ಪಟ್ಟಿಯಿಂದ ಕೊರಚ ಸಮುದಾಯವ ಹೊರಗಿಡುವ ಛಲವಾದಿ ನಾರಾಯಣಸ್ವಾಮಿ ಹೇಳಿಕೆಗೆ ಅಖಿಲ ಕರ್ನಾಟಕ ಕೊರಚ ಸಮುದಾಯ ಸಂಘಟನೆಗಳ ಒಕ್ಕೂಟ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಅಲೆಮಾರಿ ಪಟ್ಟಿಯಿಂದ ಕೊರಚರ ಹೊರಗಿಡುವ ಹೇಳಿಕೆಗೆ ಆಕ್ರೋಶ

ಕನ್ನಡಪ್ರಭವಾರ್ತೆ ಚಿತ್ರದುರ್ಗಅಲೆಮಾರಿ ಪಟ್ಟಿಯಿಂದ ಕೊರಚ ಸಮುದಾಯವ ಹೊರಗಿಡುವ ಛಲವಾದಿ ನಾರಾಯಣಸ್ವಾಮಿ ಹೇಳಿಕೆಗೆ ಅಖಿಲ ಕರ್ನಾಟಕ ಕೊರಚ ಸಮುದಾಯ ಸಂಘಟನೆಗಳ ಒಕ್ಕೂಟ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೊರಚ ಮಹಾ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವೈ. ಕುಮಾರ್, ವಿಪ ಸದಸ್ಯತ್ವಕ್ಕೆ ತಕ್ಷಣವೇ ರಾಜಿನಾಮೆ ನೀಡುವಂತೆ ಆಗ್ರಹಿಸಿದರು.

ಬೆಳಗಾವಿ ಸುವರ್ಣಸೌಧದಲ್ಲಿ ಕಲಾಪ ನಡೆಯುವ ವೇಳೆ ಪ್ರತಿಭಟನೆ ನಡೆಸುತ್ತಿದ್ದ ಅಲೆಮಾರಿ ಸಂಘಟನೆಯೊಂದರ ಮನವಿ ಸ್ವೀಕರಿಸಿ ಮಾತನಾಡಿದ ಛಲವಾದಿ ನಾರಾಯಣ ಸ್ವಾಮಿ ಕೊರಚ, ಕೊರಮರು ಪರಿಶಿಷ್ಟ ಅಲೆಮಾರಿ ಪಟ್ಟಿ (49ರಲ್ಲಿ) ಬರುವುದಿಲ್ಲ. ಮಾತ್ರವಲ್ಲ ಪರಿಶಿಷ್ಟ ಜಾತಿ ಒಳಮೀಸಲಾತಿ ಪಟ್ಟಿಗೂ ಅವರು ಸೇರುವುದಿಲ್ಲ ಎಂಬ ಹೇಳಿಕೆ ನೀಡಿದ್ದಾರೆ. ಯಾವುದೇ ಆಧಾರವಿಲ್ಲದ ಈ ಮಾತು ಅಲೆಮಾರಿ ಸಮುದಾಯಗಳ ನಡುವೆ ಜಗಳ ಹಚ್ಚುವ ಕೆಲಸವಾಗಿದೆ. ನಾರಾಯಣ ಸ್ವಾಮಿ ಕೂಡಲೇ ತನ್ನ ಹೇಳಿಕೆಯನ್ನು ಹಿಂತೆಗೆದುಕೊಂಡು ಸಮಾಜದ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

ಕೊರಚ ಸಮುದಾಯ ತಲತಲಾಂತರಿದಿಂದ ಕಳ್ಳರು ಎಂಬ ಹಣೆಪಟ್ಟಿಯನ್ನು ಕಟ್ಟಿಕೊಂಡು ಬದುಕುತ್ತಿದೆ. ಬ್ರಿಟಿಷರ ಆಗಮನದ ಬಳಿಕ ಅವರು ತಂದ ರಸ್ತೆ ಸಾರಿಗೆ ಕೊರಚರ ಜೀವನಧಾರವಾಗಿದ್ದ ಎತ್ತುಗಳ ಮೂಲಕ ಸರಕುಸಾಗಣೆ ವೃತ್ತಿಗೆ ಏಟು ಬಿತ್ತು. ಆಗ ಕೊರಚರು ಹೊಟ್ಟೆಪಾಡಿಗಾಗಿ ಆಹಾರಧಾನ್ಯ ಕಳ್ಳತನಕ್ಕೆ ಇಳಿದರು ಎಂದು ಚರಿತ್ರೆ ಹೇಳುತ್ತದೆ. ಅದನ್ನೇ ದೊಡ್ಡದು ಮಾಡಿದ ಬ್ರಿಟಿಷರು ಕ್ರಿಮಿನಲ್ ಟೈಬಲ್ ಕಾಯ್ದೆ ಹೇರಿ ಕೊರಚರು ಶಾಶ್ವತವಾಗಿ ಕಳ್ಳತನದ ಆರೋಪ ಹೊತ್ತು ತಿರುಗುವಂತೆ ಮಾಡಿದರು ಎಂದು ಬೇಸರ ವ್ಯಕ್ತಪಡಿಸಿದರು.ಬ್ರಿಟೀಷರು ಹಚ್ಚಿದ ಕಳಂಕದ ಕಾರಣಕ್ಕೆ ಕೊರಚರು ಊರು ಹೊರಗೆ ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುವಂತಾಯಿತು. ಅವರಿನ್ನೂ ಮುಖ್ಯವಾಹಿನಿಗೆ ಬರದಿರುವುದಕ್ಕೆ ಇದು ಪ್ರಮುಖ ಕಾರಣ. ಕೊರಚರು ಇಂದಿಗೂ ಹಗ್ಗ ಕಣ್ಣಿ, ಕಸಪೊರಕೆ ಮಾರಾಟ, ಬುಟ್ಟಿ ಹೆಣೆಯುವುದು, ಹಂದಿ ಸಾಕಾಣೆ ಇತ್ಯಾದಿ ಹೊಟ್ಟೆ ತುಂಬದ ವೃತ್ತಿಯಲ್ಲಿ ಬದುಕು ಸವೆಸುತ್ತಿದ್ದಾರೆ ಎಂದು ನೋವು ತೋಡಿಕೊಂಡರು.

ಪರಿಶಿಷ್ಟ ಜಾತಿ, ಅಲೆಮಾರಿ, ಅರೆಬರೆಯಾಗಿ ಪಡೆಯಲ್ಲಿರುವ ಸಮುದಾಯಗಳು ಇನ್ನೊಬ್ಬರ ಸವಲತ್ತುಗಳ ಕಿತ್ತುಕೊಂಡು ತಿನ್ನುವಷ್ಟು ಬಲಾಢ್ಯವಾಗಿಲ್ಲ ಹಾಗೂ ಸಂಘಟಿತ ಶಕ್ತಿಯೂ ಆಗಿಲ್ಲ. ಸಿದ್ದರಾಮಯ್ಯನವರ ಸರ್ಕಾರ ಈ ಕೋಶ ರಚಿಸಿದ ಬಳಿಕ ಸಮುದಾಯದಲ್ಲಿರುವವರು ನಿಧಾನವಾಗಿ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವ ಪ್ರಕ್ರಿಯೆ ಆರಂಭವಾಗಿದೆ ಎಂದು ತಿಳಿಸಿದರು.

ವಾಸ್ತವಾಂಶ ಹೀಗಿರುವಾಗ ಅಲೆಮಾರಿ ಪಟ್ಟಿಯಲ್ಲಿರುವ ಕೆಲ ಸಮುದಾಯದ ಪುಡಿ ನಾಯಕರು ಇಲ್ಲಸಲ್ಲದ ವಿಚಾರಗಳನ್ನು ತಮ್ಮ ತಲೆಯಲ್ಲಿ ತುಂಬಿಕೊಂಡು ಕೊರಚರು ಮತ್ತು ಕೊರಮದು ಅಲೆಮಾರಿ ಕೋಶದೊಳಗೆ ಮೀಸಲಾತಿ ಕಬಳಿಸುತ್ತಿದ್ದಾರೆ. ಹಾಗಾಗಿ ಆ ಸಮುದಾಯಗಳನ್ನು ಅಲೆಮಾರಿ ಕೋಶದಿಂದ ಹೊರಗೆ ಹಾಕಬೇಕೆಂಬ ಆಧಾರವಿಲ್ಲದ ಬೇಡಿಕೆಯನ್ನಿಟ್ಟುಕೊಂಡು ಹೋರಾಟ ಮಾಡುತ್ತಿರುವುದು ದುರದುಷ್ಟಕರ ಎಂದು ಕುಮಾರ್ ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದಿನ ಅವಧಿಯಲ್ಲಿ ರಾಜ್ಯದಲ್ಲಿರುವ ಅಲೆಮಾರಿ, ಅರೆಅಲೆಮಾರಿ ಸಮುದಾಯಗಳ ಕುರಿತು ರಾಷ್ಟ್ರೀಯ ಕಾನೂನು ಶಾಲೆ ಮತ್ತು ಸಾಮಾಜಿಕ ಚಿಂತಕರನ್ನೊಂಗೊಂಡ ತಂಡದ ಮೂಲಕ ಅಧ್ಯಯನ ನಡೆಸಿ ಪರಿಶಿಷ್ಟ ಅಲೆಮಾರಿಗಳ ಪಟ್ಟಿಯಲ್ಲಿ (ಕೊರಚ, ಕೊರಮ ಸಮುದಾಯಗಳು ಸೇರಿ) 51 ಸಮುದಾಯಗಳಿವೆ. ಆದರೆ, 49 ಸಮುದಾಯಗಳೆಂದು ಸುಳ್ಳು ಮಾಹಿತಿ ನೀಡಿ ಜನರನ್ನು ದಾರಿ ತಪ್ಪಿಸುವ ಕೆಲಸವನ್ನು ಮಾಡಲಾಗುತ್ತಿದೆ. ಇದಕ್ಕೆ ಛಲವಾದಿ ನಾರಾಯಣಸ್ವಾಮಿ ತುಪ್ಪ ಸುರಿದು ದುಡಿಯುವ ಜನರ ನಡುವೆ ವಿಷ ಬೆರೆಸುವ ಕೆಲಸ ಮಾಡುತ್ತಿದ್ದಾರೆ ಅವರು ದೂರಿದರು.