ಸಾರಾಂಶ
ಹರಪನಹಳ್ಳಿ: ಕೊರಚ ಜನಾಂಗವನ್ನು ಅಲೆಮಾರಿ ಪಟ್ಟಿಯಿಂದ ಹೊರಗಿಡುವಂತೆ ಹೇಳಿಕೆ ನೀಡಿರುವ ಛಲವಾದಿ ನಾರಾಯಣಸ್ವಾಮಿ ಅವರ ನಡೆ ಖಂಡಿಸಿ ಅವರ ರಾಜೀನಾಮೆಗೆ ಆಗ್ರಹಿಸಿ ಅಖಿಲ ಕರ್ನಾಟಕ ಕೊರಚ ಮಹಾಸಂಘದ ಮುಖಂಡರು ತಹಶೀಲ್ದಾರ್ ಗಿರೀಶ್‌ಬಾಬು ಅವರಿಗೆ ಮನವಿ ಸಲ್ಲಿಸಿದರು.ಈ ವೇಳೆ ಕೊರಚ ಮಹಾಸಂಘದ ರಾಜ್ಯ ನಿರ್ದೇಶಕ ಎಂ.ನಾಗಪ್ಪ ಮಾತನಾಡಿ, ಕೊರಚ ಸಮುದಾಯವು ಪರಿಶಿಷ್ಟ ಜಾತಿ ಅಲೆಮಾರಿ ಪಟ್ಟಿ (49) ಕಲಂ ವ್ಯಾಪ್ತಿಯಲ್ಲಿ ಒಳಪಡುವುದಿಲ್ಲ. ಮಾತ್ರವಲ್ಲದೇ ಪರಿಶಿಷ್ಟ ಜಾತಿ ಒಳಮೀಸಲಾತಿ ಪಟ್ಟಿಗೂ ಅವರು ಸೇರುವುದಿಲ್ಲ ಎನ್ನುವ ಮೂಲಕ ಸಮಾಜವನ್ನು ಕೆರಳಿಸುವ ಕೆಲಸ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾರಾಯಣಸ್ವಾಮಿ ಅವರ ಹೇಳಿಕೆಯಿಂದ ನಮ್ಮ ಸಮಾಜಕ್ಕೆ ಅತೀವ ನೋವುಂಟಾಗಿದೆ. ಯಾವುದೇ ಆಧಾರವಿಲ್ಲದೆ ಈ ರೀತಿಯ ಹೇಳಿಕೆ ನೀಡಿರುವುದು ಅಲೆಮಾರಿ ಒಳಸಮುದಾಯಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡಿದ್ದಾರೆ ದೂರಿದರು.ಕೊರಚ ಸಮುದಾಯ ತಲಾತಲಾಂತರದಿಂದ ಕಳ್ಳತನ ಮಾಡುವ ವೃತ್ತಿ ಹೊಂದಿದವರು ಎನ್ನುವ ಕೆಟ್ಟ ಕಪ್ಪುಚುಕ್ಕಿಯನ್ನು ಇಟ್ಟುಕೊಂಡು ಜೀವನ ಸಾಗಿಸುತ್ತಾ ಬಂದಿದ್ದೇವೆ. ನಮ್ಮದು ಎತ್ತುಗಳ ವ್ಯಾಪಾರ, ಸರಕು ಸಾಗಾಣೆ ಮೂಲ ಕಸುಬಾಗಿದೆ. ನಮ್ಮ ಪೂರ್ವಜರು ವಿಧಿಯಿಲ್ಲದೆ ಊರಿನಿಂದ ಆಚೆ ಗುಡ್ಡಗಾಡು ಪ್ರದೇಶಗಳಲ್ಲಿ ಜೀವಿಸುತ್ತಾ ಬಂದಿರುವ ಕಾರಣ ಇದುವರೆಗೂ ಸಮಾಜವು ಶೈಕ್ಷಣಿಕ ಸಾಮಾಜಿಕ ಹಾಗೂ ಆರ್ಥಿಕವಾಗಿ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಛಲವಾದಿ ನಾರಾಯಣ ಸ್ವಾಮಿಯವರು ಕೂಡಲೇ ಸಮುದಾಯ ಕ್ಷಮೆ ಯಾಚಿಸಬೇಕು ಬಿಜೆಪಿಯ ಮುಖಂಡರು ಅವರ ಹೇಳಿಕೆಗೆ ತಕ್ಕ ಪಾಠ ಕಲಿಸಬೇಕು ಎಂದು ಅಗ್ರಹಿಸಿದರು.ಅಖಿಲ ಕರ್ನಾಟಕ ಕೊರಚ ಮಹಾಸಂಘದ ಸಂಘಟನಾ ಕಾರ್ಯದರ್ಶಿ ರಾಘವೇಂದ್ರ, ಸಹಕಾರ್ಯದರ್ಶಿ ಕೆ.ಆನಂದ ಇದ್ದರು.