ಛಲವಾದಿ ನಾರಾಯಣಸ್ವಾಮಿ ಬಗ್ಗೆ ಲಘುಮಾತು: ಸಚಿವ ಎಂ.ಬಿ.ಪಾಟೀಲ್ ಬಹಿರಂಗ ಕ್ಷಮೆಗೆ ಆಗ್ರಹ

| Published : Sep 03 2024, 01:31 AM IST

ಸಾರಾಂಶ

ಈ ಹಿಂದೆ ಕೆಐಎಡಿಬಿ ವತಿಯಿಂದ ಸೈಟ್ ಅಲಾಟ್ ಮಾಡಲಾಗಿದೆ. ಸಿಎ ಸೈಟ್ ಪಡೆಯಲು 283 ಅರ್ಜಿ ಹೋಗಿವೆ. ಆದರೆ ತರಾತುರಿಯಲ್ಲಿ ಒಂದು ತಿಂಗಳೊಳಗೆ 193 ಸೈಟುಗಳನ್ನು ವಿತರಿಸಲಾಗಿದೆ. ಈ ಬಗ್ಗೆ ನಾರಾಯಣಸ್ವಾಮಿ ಅವರು ತನಿಖೆಗೆ ಒತ್ತಾಯಿಸಿದ್ದಾರೆ. ಇದನ್ನೇ ಮುಂದಿಟ್ಟುಕೊಂಡು ನಾರಾಯಣಸ್ವಾಮಿ ವಿರುದ್ಧ ಅವಮಾನಕಾರಿಯಾಗಿ ಮಾತನಾಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಬಗ್ಗೆ ಲಘುವಾಗಿ ಮಾತನಾಡಿರುವ ಸಚಿವ ಎಂ.ಬಿ.ಪಾಟೀಲ್ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ಎಂದು ಭಾರತೀಯ ಜನತಾ ಪಕ್ಷದ ಎಸ್ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಎಂ.ಎಸ್. ಪರಮಾನಂದ ಆಗ್ರಹಿಸಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರದ ವಿರುದ್ಧ ನಿರ್ಭೀತಿಯಿಂದ ಪ್ರಶ್ನಿಸುವ ಛಲವಾದಿ ನಾರಾಯಣಸ್ವಾಮಿ ಅವರ ಬಗ್ಗೆ ಸಚಿವರಾದ ಪ್ರಿಯಾಂಕ ಖರ್ಗೆ ಮತ್ತು ಎಂ.ಬಿ.ಪಾಟೀಲ್ ಅವಮಾನಕಾರಿಯಾಗಿ ನಿಂದನೆ ಮಾಡುತ್ತಿರುವುದನ್ನು ಖಂಡಿಸಿದರು.

ಈ ಹಿಂದೆ ಕೆಐಎಡಿಬಿ ವತಿಯಿಂದ ಸೈಟ್ ಅಲಾಟ್ ಮಾಡಲಾಗಿದೆ. ಸಿಎ ಸೈಟ್ ಪಡೆಯಲು 283 ಅರ್ಜಿ ಹೋಗಿವೆ. ಆದರೆ ತರಾತುರಿಯಲ್ಲಿ ಒಂದು ತಿಂಗಳೊಳಗೆ 193 ಸೈಟುಗಳನ್ನು ವಿತರಿಸಲಾಗಿದೆ. ಈ ಬಗ್ಗೆ ನಾರಾಯಣಸ್ವಾಮಿ ಅವರು ತನಿಖೆಗೆ ಒತ್ತಾಯಿಸಿದ್ದಾರೆ. ಇದನ್ನೇ ಮುಂದಿಟ್ಟುಕೊಂಡು ನಾರಾಯಣಸ್ವಾಮಿ ವಿರುದ್ಧ ಅವಮಾನಕಾರಿಯಾಗಿ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ದಲಿತ ,ವಂಚಿತ ಮತ್ತು ಪೀಡಿತ ಜನರಿಗೆ ಸಾಮಾಜಿಕ ನ್ಯಾಯ ಕೊಡಿಸುವ ಬದಲು ದಲಿತರ ಹೆಸರಿನಲ್ಲಿ ಸರ್ವವನ್ನು ಬಾಚಿಕೊಂಡು ತಮ್ಮ ಕುಟುಂಬ ಭದ್ರ ಪಡಿಸಿಕೊಳ್ಳುವ ಖರ್ಗೆ ಕುಟುಂಬಕ್ಕೂ ನ್ಯೂನ್ಯತೆಗಳನ್ನು ಎತ್ತಿ ಹಿಡಿದು ತಳ ಸಮುದಾಯಗಳಿಗೆ ನ್ಯಾಯ ಕೊಡಿಸಲು ಹೋರಾಡುತ್ತಿರುವ ಚಲವಾದಿ ನಾರಾಯಣಸ್ವಾಮಿ ಅವರಿಗೂ ಯಾವ ಹೋಲಿಕೆ ಇದೆ ಎಂದು ಪ್ರಶ್ನಿಸಿದರು.

ಭ್ರಷ್ಟಾಚಾರದ ವಿರುದ್ಧ ಸೊಲ್ಲೆತ್ತಿದರೆ ಭ್ರಷ್ಟರೆಲ್ಲ ಸೇರಿ ನಾರಾಯಣಸ್ವಾಮಿ ಅವರನ್ನು ಕೀಳು ಮಟ್ಟದ ಭಾಷೆ ಬಳಸಿ ನಿಂದಿಸುತ್ತಿದ್ದಾರೆ. ತಪ್ಪೇ ಮಾಡದೆ ನ್ಯಾಯದ ಪರ ಇರುವವರನ್ನು ಅಪಮಾನಿಸಿ ತೇಜೊವಧೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

ಸಚಿವ ಎಂ.ಬಿ.ಪಾಟೀಲ್ ನಾರಾಯಣಸ್ವಾಮಿ ಅವರನ್ನು ಶೆಡ್ ಗಿರಾಕಿ ಎಂದು ಟೀಕಿಸಿದ್ದಾರೆ. ಆದರೆ, ಎಂ.ಬಿ.ಪಾಟೀಲ್ ಅವರೇ ಲೊಡ್ದು ಗಿರಾಕಿಯಾಗಿದ್ದಾರೆ. ಕೂಡಲೇ ಅವಹೇಳನಕಾರಿ ಹೇಳಿಕೆ ನೀಡಿರುವ ಕುರಿತು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಟಿ.ಜಿ.ಶಂಕರ್, ಜಿಲ್ಲಾ ವಕ್ತಾರ ಸಿ.ಟಿ.ಮಂಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಧರಣೇಂದ್ರ, ಕೆ.ಆರ್.ನಿತ್ಯಾನಂದ, ಜಿ.ಡಿ.ಯೋಗೇಶ್ ಇತರರಿದ್ದರು.