ಕ್ಷೇತ್ರದ ಶಾಸಕರಾಗಿರುವ ಎಂ.ಟಿ.ಕೃಷ್ಣಪ್ಪ ಹುಟ್ಟುಹೋರಾಟಗಾರರು. ಕ್ಷೇತ್ರದ ಜನತೆ ನಾಲ್ಕು ಬಾರಿ ಶಾಸಕರನ್ನಾಗಿ ಮಾಡಿದ್ದಾರೆ. ಯಾರದೋ ಗೊಡ್ಡು ಬೆದರಿಕೆಗೆ ಬಗ್ಗುವ ಜಾಯಮಾನ ಅವರದ್ದಲ್ಲ ಎಂದು ತಾಲೂಕು ಜೆಡಿಎಸ್ ನ ವಕ್ತಾರ ವೆಂಕಟಾಪುರ ಯೋಗೀಶ್ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ತುರುವೇಕೆರೆ
ಕ್ಷೇತ್ರದ ಶಾಸಕರಾಗಿರುವ ಎಂ.ಟಿ.ಕೃಷ್ಣಪ್ಪ ಹುಟ್ಟುಹೋರಾಟಗಾರರು. ಕ್ಷೇತ್ರದ ಜನತೆ ನಾಲ್ಕು ಬಾರಿ ಶಾಸಕರನ್ನಾಗಿ ಮಾಡಿದ್ದಾರೆ. ಯಾರದೋ ಗೊಡ್ಡು ಬೆದರಿಕೆಗೆ ಬಗ್ಗುವ ಜಾಯಮಾನ ಅವರದ್ದಲ್ಲ ಎಂದು ತಾಲೂಕು ಜೆಡಿಎಸ್ ನ ವಕ್ತಾರ ವೆಂಕಟಾಪುರ ಯೋಗೀಶ್ ಹೇಳಿದ್ದಾರೆ.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕೃಷ್ಣಪ್ಪನ ಉಪ ಮುಖ್ಯಮಂತ್ರಿಗಳನ್ನು ಸ್ವಾಗತಿಸಲು ಕುಣಿಗಲ್ ಗೆ ತೆರಳಿದ್ದರು. ಆ ವೇಳೆ ಕುಣಿಗಲ್ ಶಾಸಕ ರಂಗನಾಥ್ ನಮ್ಮ ತಾಲೂಕಿಗೆ ಹೇಮಾವತಿ ನೀರು ಹರಿಸಲು ಶಾಸಕ ಎಂ.ಟಿ.ಕೃಷ್ಣಪ್ಪ ಬಿಡುತ್ತಿಲ್ಲ ಅವರು ಬಂದಿದ್ದಾರೆ. ಅಲ್ಲಿ ಹೋಗಿ ಗಲಾಟೆ ಮಾಡಿ ಎಂದು ಅಲ್ಲಿಯ ಕಾಂಗ್ರೆಸ್ ಕಾರ್ಯಕರ್ತರಿಗೆ ಚಿತಾವಣೆ ಮಾಡಿ ಶಾಸಕ ಕೃಷ್ಣಪ್ಪನವರ ವಿರುದ್ಧ ಘೋಷಣೆ ಕೂಗಿಸಿದರು. ಇದು ಅವರ ಯೋಗ್ಯತೆಯನ್ನು ಬಿಂಬಿಸುತ್ತದೆ ಎಂದು ಕಿಡಿಕಾರಿದರು. ಶಾಸಕ ರಂಗನಾಥ್ ರಿಗೆ ಬುದ್ದಿ ಕಲಿಸಲು ಬರುತ್ತದೆ. ಪರಮೇಶ್ವರ್ ರವರೊಂದಿಗೆ ತುರುವೇಕೆರೆಗೆ ಬಂದಿದ್ದ ವೇಳೆ ನಾವೂ ಧಿಕ್ಕಾರ ಕೂಗಬಹುದಿತ್ತು. ಆದರೆ ಅದು ನಮ್ಮ ಸಂಸ್ಕೃತಿಯಲ್ಲ ಎಂದರು.
ತಾಲೂಕು ಜೆಡಿಎಸ್ ನ ಅಧ್ಯಕ್ಷ ಸಾದರಹಳ್ಳಿ ದೊಡ್ಡೇಗೌಡ, ವಿನಾ ಕಾರಣ ಶಾಸಕ ಎಂ.ಟಿ.ಕೃಷ್ಣಪ್ಪನವರನ್ನು ಅವಮಾನಿಸಿದ ಶಾಸಕ ರಂಗನಾಥ್ ರವರು ಕೃಷ್ಣಪ್ಪನವರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು. ಗುಬ್ಬಿಯ ಹಾಲಿ ಕಾಂಗ್ರೆಸ್ ಶಾಸಕ ಶ್ರೀನಿವಾಸ್ ರವರು ಎಕ್ಸ್ ಪ್ರೆಸ್ ಕೆನಾಲ್ ಕಾಮಗಾರಿ ವಿರೋಧಿಸುತ್ತಿದ್ದಾರೆ ಎಂದರು.ಮಂಗೀಕುಪ್ಪೆ ಬಸವರಾಜು ಮಾತನಾಡಿ, ಹಾಲಿ ಕಾಂಗ್ರೆಸ್ ಶಾಸಕರಾಗಿರುವ ಶ್ರೀನಿವಾಸ್ ರವರ ಬಾಯಿಯನ್ನು ಮುಚ್ಚಲು ಸಾಧ್ಯವಿಲ್ಲದ ರಂಗನಾಥ್ ಕೃಷ್ಣಪ್ಪನವರ ಬಾಯಿಯನ್ನು ಮುಚ್ಚಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಈ ವೇಳೆ ಜೆಡಿಎಸ್ ಮುಖಂಡರಾದ ಬಡಗರಹಳ್ಳಿ ತ್ಯಾಗರಾಜು, ವಿಜಯೇಂದ್ರ, ಹೆಡಿಗೇಹಳ್ಳಿ ವಿಶ್ವನಾಥ್, ಕಣತೂರು ಸತೀಶ್, ಗೋಣಿತುಮಕೂರು ನಾಗೇಂದ್ರ ಉಪಸ್ಥಿತರಿದ್ದರು.