ಡಬಲ್ ಡ್ಯೂಟಿಯಲ್ಲಿ ಅಧಿಕಾರಿಗಳು । ಚುನಾಯಿತ ಪ್ರತಿನಿಧಿಗಳಿಲ್ಲದೆ ಆಡಳಿತ ಸಂಕಷ್ಟರಾಘು ಕಾಕರಮಠಕನ್ನಡಪ್ರಭ ವಾರ್ತೆ ಅಂಕೋಲಾಗ್ರಾಪಂಗಳಲ್ಲಿ ಚುನಾಯಿತ ಪ್ರತಿನಿಧಿಗಳಿಲ್ಲದೆ ಆಡಳಿತಾಧಿಕಾರಿಗಳ ನೇಮಕವಾಗಿದೆ. ಬಿರುಬೇಸಿಗೆಯಲ್ಲಿ ನೂರಾರು ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಅಧಿಕಾರಿಗಳಿಗೆ ಬೇಸಿಗೆ ನಿರ್ವಹಣೆ ಸವಾಲಾಗಿದೆ. ಅದರಲ್ಲೂ ಅಧಿಕಾರಿಗಳಿಗೆ ಸ್ಥಳೀಯಾಡಳಿತದ ಹೆಚ್ಚುವರಿ ಚಾಲೆಂಜ್ ತಲೆನೋವಾಗಿ ಪರಿಗಣಿಸಿದೆ.ಇಲಾಖೆಯ ಕಾರ್ಯದೊತ್ತಡದ ನಡುವೆ ಪಂಚಾಯಿತಿ ಪ್ರಾಬ್ಲಂ ಶುರುವಾಗಿದೆ. ಕೃಷಿ, ತೋಟಗಾರಿಕೆ, ತಾಪಂ, ಶಿಕ್ಷಣ, ಇಲಾಖೆ, ಅರಣ್ಯ, ನೀರು ಸರಬರಾಜು ಸೇರಿದಂತೆ ಬಹುತೇಕ ಇಲಾಖೆಗಳ ಅಧಿಕಾರಿಗಳಿಗೆ ಸ್ಥಳೀಯಾಡಳಿತದ ಜವಾಬ್ದಾರಿ ವಹಿಸಲಾಗಿದೆ. ಒಬ್ಬ ಅಧಿಕಾರಿಗೆ 2-3 ಗ್ರಾಪಂ ಆಡಳಿತದ ಹೊಣೆಗಾರಿಕೆಯಿದೆ.ಈಗಾಗಲೇ ಜಿಪಂ, ತಾಪಂ ಸದಸ್ಯರಿಲ್ಲದೇ ಆಡಳಿತದ ಸಂಪೂರ್ಣ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಜನಪ್ರತಿನಿಧಿಗಳಿಲ್ಲದೇ ಇರುವುದರಿಂದ ಜನ ಅಧಿಕಾರಿಗಳ ಬಳಿಯೇ ಅಳಲು ತೋಡಿಕೊಳ್ಳಬೇಕು, ಹಾಗೆ ಅಧಿಕಾರಿಗಳನ್ನೇ ಪ್ರಶ್ನಿಸಬೇಕು. ಈ ನಡುವೆ ಪಂಚಾಯಿತಿ ಮಟ್ಟದಲ್ಲೂ ಚುನಾಯಿತ ಸದಸ್ಯರು ಇಲ್ಲದಿರುವುದು ಆಡಳಿತ ಯುಂತ್ರಕ್ಕೆ ಹೊಡೆತ ನೀಡಿದೆ. ಅದರಲ್ಲೂ ಆಡಳಿತಾಧಿಕಾರಿ ಹುದ್ದೆ ಕಾರ್ಯಾಭಾರ ಅಧಿಕಾರಿಗಳ ಒತ್ತಡ ಹೆಚ್ಚಿಸಿದೆ. ಇಲಾಖೆಗಳಲ್ಲಿ ಹುದ್ದೆಗಳು ಖಾಲಿಯಿದ್ದು ಖಾಲಿ ಹುದ್ದೆ ಭಾರ ಹೊತ್ತಿರುವ ಅಧಿಕಾರಿಗಳ ಮೇಲೆ ಮತ್ತಷ್ಟು ಭಾರ ಹಾಕಲಾಗುತ್ತಿದೆ.

ಪರಿಣಾಮಕಾರಿ ಅನುಷ್ಠಾನ ಹೇಗೆ? ಇಲಾಖೆ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಮತ್ತು ಫಾಲೋಅಪ್ ಮಾಡುವುದು ಅಧಿಕಾರಿಗಳಿಗೆ ಕಷ್ಟ. ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಸಚಿವರು, ಶಾಸಕರ ಪ್ರಶ್ನೆಗಳಿಗೆ ಉತ್ತರ ಕೊಡಲಾಗುವುದಿಲ್ಲ. ಹೆಚ್ಚುವರಿ ಕಾರ್ಯಭಾರ ಇದೆ, ಹುದ್ದೆ ಖಾಲಿ ಇವೆ ಎಂದು ತುಟಿ ಬಿಚ್ಚುವಂತಿಲ್ಲ. ಉದಾಹರಣೆಗೆ ಕೃಷಿಗೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಬೆಳೆ, ಬೆಳೆ ವಿಮೆ, ರಸಗೊಬ್ಬರ ಬಳಕೆ, ಔಷಧ ಸಿಂಪಡಣೆ... ಹೀಗೆ ಹತ್ತಾರು ವಿಷಯಗಳ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಆದರೆ ದಿನದ ಬಹುತೇಕ ಆಡಳಿತ ಅವಧಿ ಪಂಚಾಯಿತಿಯಲ್ಲೇ ಕಳೆಯುವಂತಾಗಿದೆ.ಗಣತಿ, ಸಾಲು ಸಾಲು ಕಾರ್ಯಕ್ರಮ: ಸದ್ಯದ ಗಣತಿ ಕಾರ್ಯಕ್ಕೂ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಜತೆಗೆ ಸರ್ಕಾರದ ಕಾರ್ಯಕ್ರಮಗಳು ಇಲಾಖಾವಾರು ಸೇವಾ ಸಮಯ ತಿನ್ನುತ್ತಿವೆ. ತಾಲೂಕಿನ 21 ಗ್ರಾಪಂಗಳಲ್ಲಿ 6 ಗ್ರಾಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಖಾಸಗಿ ಟ್ಯಾಂಕರ್‌ಗಳ ಮೂಲಕ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ಈ ಬಗ್ಗೆಯೂ ಗಮನ ಹರಿಸಬೇಕಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯದೇ ಇರುವುದರಿಂದ ಗ್ರಾಮೀಣ ಭಾಗದ ಅಭಿವೃದ್ಧಿ ಕುಂಠಿತವಾಗಿದೆ. ಅಧಿಕಾರಿಗಳ ಕೈಯಲ್ಲಿ ಆಡಳಿತವಿದೆ. ಅವರಿಗೆ ಇಲಾಖೆ ಕೆಲಸದ ಜತೆಗೆ ಬೇರೆ ಕೆಲಸದ ಒತ್ತಡವೂ ಇದೆ. ಜನಪ್ರತಿನಿಧಿಗಳಿಲ್ಲದೆ ಆಡಳಿತ ವ್ಯವಸ್ಥೆ ಸುಧಾರಿಸದು. ಚುನಾವಣಾ ಆಯೋಗ ಈ ಬಗ್ಗೆ ಮುತುವರ್ಜಿ ವಹಿಸಿ, ಚುನಾವಣೆಯನ್ನು ನಡೆಸುವ ಮೂಲಕ ಜನ ಸಾಮಾನ್ಯರಿಗೆ ಸುಲಭವಾಗಿ ಸೇವೆ ದೊರೆಯಂತಾಗಲು ತಮ್ಮ ಇಚ್ಚಾಶಕ್ತಿಯನ್ನು ಪ್ರದರ್ಶಿಸಬೇಕು ಎನ್ನುತ್ತಾರೆ ಗ್ರಾಪಂ ಅಧ್ಯಕ್ಷ- ಉಪಾಧ್ಯಕ್ಷರ ಒಕ್ಕೂಟದ ಅಧ್ಯಕ್ಷ -ಪ್ರದೀಪ ವಾಸರೆ.