ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನ.18ರಂದು ಬೆಳಿಗ್ಗೆ ಮಥುರಾ ಪ್ಯಾರಡೈಸ್‌ನಲ್ಲಿ ಶ್ರೀ ಶಂಕರನಾರಾಯಣ ಕಾಶಿ ಟ್ರಸ್ಟ್ ಶಿವಮೊಗ್ಗ ವತಿಯಿಂದ ಸವಾಲಾತ್ಮಕ ಸುಗಮ ಸಂಗೀತ (ಭಾವಗೀತೆ) ಗಾಯನ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಗುರುಗುಹ ಸಂಗೀತ ವಿದ್ಯಾಲಯದ ಪ್ರಾಚಾರ್ಯ ಎಚ್.ಎಸ್. ನಾಗರಾಜ್ ಹೇಳಿದರು.ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸುಗಮ ಸಂಗೀತ ಕ್ಷೇತ್ರದಲ್ಲಿ ಪ್ರತಿಭಾವಂತ ಯುವ ಕಲಾವಿದರು ಕಂಡು ಬರುತ್ತಿದ್ದರೂ ಅವರಲ್ಲಿ ಬಹುಪಾಲು ಯುವಕರಿಗೆ ತಾವು ಹಾಡಲಿರುವ ಕವನ ಮತ್ತು ಅದರ ಕವಿಯ ಕುರಿತು ಅರಿವು ಇರುವುದಿಲ್ಲ. ಇದಕ್ಕಾಗಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಶಂಕರನಾರಾಯಣ ಕಾಶಿ ಹೆಸರಿನಲ್ಲಿ ಹಾಗೂ ಪ್ರಸ್ತುತ ಮಥುರಾ ಪ್ಯಾರಡೈಸ್‌ನ 25ನೇ ವರ್ಷದ ಸಂಭ್ರಮಾಚರಣೆಯ ಧ್ಯೋತಕವಾಗಿ ಭಾವಗೀತೆಗಳ ಜಿಲ್ಲಾಮಟ್ಟದ ವಿಶೇಷ ರೀತಿಯ ಗಾಯನ ಸ್ಪರ್ಧೆಯನ್ನು ನಡೆಸಲು ಸಂಸ್ಥೆ ನಿಶ್ಚಯಿಸಿದೆ ಎಂದು ತಿಳಿಸಿದರು.
ಇದರಲ್ಲಿ ಕುವೆಂಪು, ದ.ರಾ. ಬೇಂದ್ರೆ, ಜಿ.ಎಸ್. ಶಿವರುದ್ರಪ್ಪ, ಎನ್.ಎಸ್. ಲಕ್ಷ್ಮೀನಾರಾಯಣ್ ಭಟ್ಟ, ಕೆ.ಎಸ್. ನಿಸಾರ್ ಅಹಮ್ಮದ್, ಬಿ.ಆರ್. ಲಕ್ಷ್ಮಣ್‌ರಾವ್ ಈ ಕವಿಗಳಲ್ಲಿ ಮೂವರು ಕವಿಗಳ ಒಂದೊಂದು ಕವನವನ್ನು ಆಯ್ದುಕೊಂಡು ಅದರಲ್ಲಿ ತೀರ್ಪುಗಾರರು ತಿಳಿಸಿದ ಒಂದು ಕವನವನ್ನು ಸ್ಪರ್ಧಿಯು ಹಾಡಬೇಕಾಗುತ್ತದೆ. ಪ್ರತಿ ಸ್ಪರ್ಧಿಗೂ 12 ನಿಮಿಷದ ಸಮಯಾವಕಾಶದಲ್ಲಿ ತೀರ್ಪುಗಾರರು ತಿಳಿಸಿದ ಒಂದು ಕವನವನ್ನು ಕುರಿತು ಕವಿಹೃದಯ, ಕವನ ಅಂತರಾಳ ಎಂದು ಎರಡು ಭಾಗದಲ್ಲಿ ಮಾತನಾಡಿ, ನಂತರ ಕವನ ಹಾಡಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.ಸ್ಪರ್ಧಿಯ ವಯಸ್ಸು 16ರಿಂದ 26ರೊಳಗಿರಬೇಕು. ಪ್ರಥಮ ಬಹುಮಾನ ₹8000, ದ್ವಿತೀಯ 6000., ತೃತೀಯ 4000 ಜೊತೆಗೆ ಪಾರಿತೋಷಕ ಇರುತ್ತದೆ. ಸ್ಪರ್ಧೆಗೆ ಸಲ್ಲಿಸಬೇಕಾದ ಅರ್ಜಿಯ ಮಾದರಿ ಮತ್ತು ಸ್ಪರ್ಧೆಯ ನೀತಿ ನಿಬಂಧನೆಗಳ ಒಳಗೊಂಡ ಕರಪತ್ರವು ಮಥುರಾ ಪ್ಯಾರಡೈಸ್‌ನಲ್ಲಿ ನ.11ರಿಂದ ದೊರೆಯಲಿದ್ದು, ಈ ಸ್ಪರ್ಧೆಗೆ ಯಾವುದೇ ಶುಲ್ಕವಿರುವುದಿಲ್ಲ, ವಾಟ್ಸಾಪ್ ಮೂಲಕವು ದೊರೆತ ಅರ್ಜಿಯನ್ನು ಭರ್ತಿ ಮಾಡಿ ಸ್ಪರ್ಧಿಗಳು ನ.14ರೊಳಗೆ ಮಥುರಾ ಪ್ಯಾರಡೈಸ್‌ನಲ್ಲಿ ನೀಡಿ, ಸ್ವೀಕೃತಿಯನ್ನು ಪಡೆಯತಕ್ಕದ್ದು, ಸ್ಪರ್ಧೆಗೆ ಯಾವುದೇ ವಾದ್ಯ ಸಹಕಾರ ಇರುವುದಿಲ್ಲ, ಶೃತಿ ವಾದ್ಯ ಬಳಸಬಹುದು. ಶಿವಮೊಗ್ಗಕ್ಕೆಹೊರಗಿನಿಂದ ಬಂದ ಬಹುಮಾನಿತರಿಗೆ ಪ್ರಯಾಣ ಭತ್ಯೆ ನೀಡಲಾಗುತ್ತದೆ. ಮಾಹಿತಿಗೆ 9448241149, 9480915777 ಸಂಪರ್ಕಿಸಬಹುದು ಎಂದರು.ಪ್ರಮುಖರಾದ ನಿರ್ಮಲಾ ಕಾಶಿ, ಎನ್. ಗೋಪಿನಾಥ್, ರವಿಕುಮಾರ್, ಸಂಯುಕ್ತ ಇದ್ದರು.