ಮಾ.1ರಿಂದ ಚಾಲುಕ್ಯ ಉತ್ಸವ-2025: ಶಾಸಕ ಚಿಮ್ಮನಕಟ್ಟಿ

| Published : Jan 15 2025, 12:45 AM IST

ಸಾರಾಂಶ

ಚಾಲುಕ್ಯ ಉತ್ಸವವನ್ನು ಪಟ್ಟಣದ ಎಪಿಎಂಸಿ ಯಾರ್ಡ್‌ನಲ್ಲಿ ಮೂರು ದಿನ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ.

ಕನ್ನಡಪ್ರಭ ವಾರ್ತೆ ಬಾದಾಮಿ

ಐತಿಹಾಸಿಕ ಚಾಲುಕ್ಯರ ಇತಿಹಾಸ, ಕಲೆ, ಸಂಸ್ಕೃತಿಯನ್ನು ನಾಡಿನ ಜನತೆಗೆ ಪರಿಚಯಿಸಲು ಮಾ.1, 2, 3 ರಂದು ಮೂರು ದಿನಗಳ ಚಾಲುಕ್ಯ ಉತ್ಸವ-2025 ಕಾರ್ಯಕ್ರಮವನ್ನು ರಾಷ್ಟ್ರೀಯ ಉತ್ಸವವಾಗಿ ಆಚರಿಸಲಾಗುತ್ತಿದ್ದು, ಎರಡು ದಿನ ಬಾದಾಮಿ, ಒಂದು ದಿನ ಐಹೊಳೆಯಲ್ಲಿ ಕಾರ್ಯಕ್ರಮ ನಡೆಸಲಾಗುವುದು ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ತಿಳಿಸಿದರು.

ಮಂಗಳವಾರ ಪಟ್ಟಣದ ತಾಪಂ ಸಭಾಭವನದಲ್ಲಿ ನಡೆದ ಸಾಹಿತಿ, ಕಲಾವಿದರು, ಪತ್ರಕರ್ತರು, ಸಾರ್ವಜನಿಕರಿಂದ ಸಲಹೆ, ಸೂಚನೆಗಳನ್ನು ಸ್ವೀಕರಿಸಲು ಕರೆದ ಎರಡನೇ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಚಾಲುಕ್ಯ ಉತ್ಸವವನ್ನು ಪಟ್ಟಣದ ಎಪಿಎಂಸಿ ಯಾರ್ಡ್‌ನಲ್ಲಿ ಮೂರು ದಿನ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ. ಪಟ್ಟದಕಲ್ಲು ಊರಲ್ಲೂ ಸಂಗೀತ, ಕಲೆ, ಸಾಹಿತ್ಯದ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಯಶಸ್ವಿಗೊಳಿಸಲು ತಿರ್ಮಾನಿಸಲಾಯಿತು ಉತ್ಸವ ಉದ್ಘಾಟನೆ ಸೇರಿದಂತೆ ಸಮಾರೋಪ ಸಮಾರಂಭಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವ ಮಂಡಲದ ಸದಸ್ಯರು, ನಾಡಿನ ಹಿರಿಯ ಸಂಶೋಧಕರ, ಸಾಹಿತಿಗಳನ್ನು ಆಮಂತ್ರಿಸಿ ಉತ್ಸವಕ್ಕೆ ಮೆರಗು ನೀಡಲಾಗುವುದು ಎಂದರು. ಕಾರ್ಯಕ್ರಮಗಳನ್ನು ಅಚ್ಚುಕಟ್ಟಿನಿಂದ ನಡೆಸಲು ವಿವಿಧ ಸಮಿತಿ ರಚಿಸಿ ಜವಾಬ್ದಾರಿ ನಿಭಾಯಿಸಲು ಸರಳ ಮತ್ತು ಒಳ್ಳೆಯ ರೀತಿಯಲ್ಲಿ ಆಯೋಜನೆ ಮಾಡಬೇಕು ಎಂದು ಸಮಾಜ ಸೇವಕ ಇಷ್ಟಲಿಂಗ ಶಿರಶಿ ಸಲಹೆ ನೀಡಿದರು.

ಸಭೆಯಲ್ಲಿ ಚಾಲುಕ್ಯ ಉತ್ಸವ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಉತ್ಸವವಾಗಲಿ ಎಂದು ಒಕ್ಕೊರಲಿನಿಂದ ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಸ್ಥಳೀಯ, ರಾಜ್ಯ ಅಂತರಾಜ್ಯ ಕಲಾವಿದರಿಗೆ ಅವಕಾಶ ನೀಡಲಾಗುವುದು. ರಾತ್ರಿ ಸಮಾರಂಭದ ವೇದಿಕೆಯಿಂದ ಬಾದಾಮಿವರೆಗೆ ಸಾರಿಗೆ ಇಲಾಖೆಯ ಬಸ್ ವ್ಯವಸ್ಥೆ ಮಾಡಲಾಗುವುದು. ಬೂತನಾಥ ದೇವಾಲಯಕ್ಕೆ ಬೆಳಕಿನ ವ್ಯವಸ್ಥೆ ಮಾಡಲಾಗುವುದು. ಚಾಲುಕ್ಯರ ಇತಿಹಾಸ, ಶಾಸನಗಳ ಬಗ್ಗೆ ಚರ್ಚೆ ಗೋಷ್ಠಿ ಮಾಹಿತಿ, ಅಂತಾರಾಷ್ಟ್ರೀಯ ಕಲಾವಿದರಿಗೆ ಅವಕಾಶ ಮತ್ತು ಸಾಧನೆ ಮಾಡಿದ ಒಬ್ಬರಿಗೆ ಪ್ರತಿ ವರ್ಷ ಚಾಲುಕ್ಯ ಪ್ರಶಸ್ತಿ ನೀಡಿ ಗೌರವಿಸಬೇಕು. ಸ್ಮರಣ ಸಂಚಿಕೆ ಬಿಡುಗಡೆ, ಇಲಕಲ್ಲ ಸೀರೆ, ಗುಳೇದಗುಡ್ಡ ಖಣಕ್ಕೆ ಹೆಚ್ಚಿನ ಪ್ರಚಾರ ಸಿಗಬೇಕು. ಪ್ರತಿ ವರ್ಷ ಉತ್ಸವ ಆಚರಣೆ ಮಾಡಬೇಕು. ಕೆಲವರು ಒಂದೊಂದು ಸ್ಥಳದಲ್ಲಿ ಎರಡು ದಿನ ಆಚರಣೆ ಮಾಡಲಿ ಎಂಬ ಅಭಿಪ್ರಾಯವೂ ವ್ಯಕ್ತವಾಯಿತು.

ಚಾಲುಕ್ಯರ ಗತಕಾಲದ ವೈಭವದ ಮಾಹಿತಿ ಇಂದಿನ ಜನಾಂಗಕ್ಕೆ ತಲುಪಿಸಬೇಕಾಗಿದೆ. ಚಾಲುಕ್ಯರ ಬಗ್ಗೆ ಮಕ್ಕಳ ಕವಿಗೋಷ್ಠಿ, ಮಹಿಳಾ, ಯುವಗೋಷ್ಠಿ ಆಯೋಜನೆ ಮಾಡಬೇಕು. ಚಾಲುಕ್ಯ ಉತ್ಸವದಲ್ಲಿ ನಾರಿ ಸಿರಿ ಉತ್ಸವ, ಕಲೆ ಸಾಹಿತ್ಯ, ಸಂಸ್ಕೃತಿ ಬೆಳವಣಿಗೆಗೆ ಸಹಾಯಕವಾಗಬೇಕು. ಗುಡಿ ಕೈಗಾರಿಕೆ, ಆಧುನಿಕ ತಂತ್ರಜ್ಞಾನ ಬಳಕೆ, ನಾಟಕ, ರಂಗಭೂಮಿ ಕಲಾವಿದರು, ಮಕ್ಕಳು, ಸಾಮಾಜಿಕ ಜಾಲತಾಣ ಬಳಕೆ ಮಾಡಬೇಕು. ಇಮ್ಮಡಿ ಪುಲಿಕೇಶಿ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು. ಉತ್ಸವದಲ್ಲಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಬೇಕು. ಉತ್ಸವ ಬಗ್ಗೆ ಶಾಸಕರು ಪತ್ರ ಬರೆಯಲು ಇದಕ್ಕೆ ಸಂಬಂಧಿಸಿದಂತೆ ವ್ಯಾಪಕ ಪ್ರಚಾರ ಸಿಗಬೇಕು ಎಂದು ಹೇಳಿದರು. ಜಾನಪದ ಕಲಾವಿದ ಶ್ರೀಕಾಂತಗೌಡ ಗೌಡರ ಮಾತನಾಡಿ ಕಲಾವಿದರಿಗೆ ಕಾರ್ಯಕ್ರಮ ನೀಡಿದ ನಂತರ ಪ್ರಶಸ್ತಿ ಪತ್ರ ವಿತರಣೆ ಮಾಡಬೇಕೆಂದರು. ಚಾಲುಕ್ಯರ ಕಿರುಚಿತ್ರ ರಚನೆ ಮಾಡಿ ಪ್ರದರ್ಶನ ಮಾಡಬೇಕು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದರು.

ವೇದಿಕೆಯ ಮೇಲೆ ತಹಸೀಲ್ದಾರ್‌ ಮಧುರಾಜ್, ಪುರಸಭೆ ಅಧ್ಯಕ್ಷ ಪಾಂಡಪ್ಪ ಕಟ್ಟೀಮನಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶಿವುಕುಮಾರ ಹಿರೇಮಠ, ತಾ.ಪಂ.ಇಒ ಸುರೇಶ ಕೊಕ್ಕೆರಿ ಹಾಜರಿದ್ದರು. ಪೂರ್ವಭಾವಿ ಸಭೆಯಲ್ಲಿ ಪುರಸಭೆ ಸದಸ್ಯರಾದ ಮಂಜುನಾಥ ಹೊಸಮನಿ, ಶಂಕರ ಕನಕಗಿರಿ, ಯಮುನಾ ಹೊಸಗೌಡ್ರ, ಇಷ್ಟಲಿಂಗ ಶಿರಶಿ, ರಜಾಕ್ ರಾಜೂರ, ಎಸ್.ಎಚ್.ವಾಸನ, ಬಿ.ಬಿ.ಸೂಳಿಕೇರಿ, ಪಿ.ಎಸ್.ಐ.ವಿಠ್ಠಲ ನಾಯಕ, ಶೀಲಾ ಗೌಡರ, ಬಸಮ್ಮಾ ನರಸಾಪೂರ, ಜಯಶ್ರೀ ಭಂಡಾರಿ, ಮಹಾಂತೇಶ ಹಟ್ಟಿ, ಡಾ.ಕರವೀರಪ್ರಭು ಕ್ಯಾಲಕೊಂಡ, ಎಂ.ಐ.ಬಾರಾವಲಿ, ರವೀಂದ್ರ ಕಪಲಿ, ಎಸ್.ಎಂ.ಭಂಡಾರಿ, ಬಸವರಾಜ ಹಳಗೇರಿ, ಮಹಾಂತೇಶ ನಾರಗಲ್, ನಾಗರಾಜ ಕಾಚೆಟ್ಟಿ, ಬಿ.ಎಫ್.ಹೊರಕೇರಿ, ಮಹಾಂತೇಶ ಈಳಗೇರಿ, ಡಾ.ಬೆಟ್ಟಪ್ಪ ಕಾಟಾಪೂರ, ಬಂದೆನವಾಜ ಡಾಂಗೆ, ಡಾ.ಎಚ್.ಎಸ್. ಘಂಟಿ, ಸೇರಿದಂತೆ ಬಾದಾಮಿ, ಗುಳೇದಗುಡ್ಡ, ಕೆರೂರ ಸೇರಿದಂತೆ ತಾಲೂಕಿನ ಸಾಹಿತಿಗಳು, ಶಿಕ್ಷಕರು, ಪತ್ರಕರ್ತರು, ನಿವೃತ್ತ ನೌಕರರು, ಗಣ್ಯರು, ಹಿರಿಯರು, ತಾಲೂಕಾಮಟ್ಟದ ಅಧಿಕಾರಿಗಳು ಹಾಜರಿದ್ದರು.