ಕನ್ನಡ ಚಿತ್ರರಂಗ ಇರುವವರೆಗೆ ಕೆ.ಎಸ್. ಅಶ್ವತ್ಥ್‌ ಹೆಸರು ಚಿರಸ್ಥಾಯಿ

| Published : Mar 26 2025, 01:36 AM IST

ಕನ್ನಡ ಚಿತ್ರರಂಗ ಇರುವವರೆಗೆ ಕೆ.ಎಸ್. ಅಶ್ವತ್ಥ್‌ ಹೆಸರು ಚಿರಸ್ಥಾಯಿ
Share this Article
  • FB
  • TW
  • Linkdin
  • Email

ಸಾರಾಂಶ

ಕೆ.ಎಸ್. ಅಶ್ವತ್ಥ್‌ ಜನ್ಮ ಶತಾಬ್ಧಿ ಕಾರ್ಯಕ್ರಮ- ಬಂಧು- ಬಳಗ, ಕಲಾ ಪೋಷಕರ ಸಮಾಗಮ, ಗೀತನಮನ

ಕನ್ನಡಪ್ರಭ ವಾರ್ತೆ ಮೈಸೂರು

ಕನ್ನಡ ಚಲನಚಿತ್ರ ರಂಗ ಇರುವವರೆಗೆ ಕೆ.ಎಸ್. ಅಶ್ವತ್ಥ್‌ ಅವರ ಹೆಸರು ಚಿರಸ್ಥಾಯಿಯಾಗಿರುತ್ತದೆ ಎಂದು ಖ್ಯಾತ ನಟ ಪ್ರಣಯರಾಜ ಶ್ರೀನಾಥ್‌ ಹೇಳಿದರು.

ನಗರದ ಕಲಾಮಂದಿರದಲ್ಲಿ ಕೆ.ಎಸ್. ಅಶ್ವತ್ಥ್‌ ಅವರ ಬಂಧು ಬಳಗದವರು ಕರ್ನಾಟಕ ಸುಗಮ ಸಂಗೀತ ಪರಿಷತ್‌ ಜಿಲ್ಲಾಧ್ಯಕ್ಷ ನಾಗರಾಜ ವಿ. ಭೈರಿ ಹಾಗೂ ಕದಂಬ ರಂಗವೇದಿಕೆಯ ಅಧ್ಯಕ್ಷ ರಾಜಶೇಖರ ಕದಂಬ ಅವರ ಸಹಕಾರದೊಂದಿಗೆ ಮಂಗಳವಾರ ಏರ್ಪಡಿಸಿದ್ದ ಕೆ.ಎಸ್. ಅಶ್ವತ್ಥ್ ಜನ್ಮ ಶತಾಬ್ದಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಶ್ವತ್ಥ್‌ ಅವರ ಎಲ್ಲೂ ಹೋಗಿಲ್ಲ. ಚಾಮಯ್ಯ ಮೇಷ್ಟ್ರು ಪಾತ್ರದ ಮೂಲಕ ಇಲ್ಲೇ ಎಲ್ಲೋ ಇದ್ದಾರೆ ಎನಿಸುತ್ತದೆ ಎಂದರು.

ಅಶ್ವತ್ಥ್‌ ಅವರು ತಮ್ಮ ಶಿಸ್ತು ಮತ್ತು ಅರ್ಪಣಾ ಮನೋಭಾವದಿಂದ ಹೆಸರಾಗಿದ್ದರು. ಅವರು ಹೆಚ್ಚು ಮಾತನಾಡುತ್ತಿರಲಿಲ್ಲ. ಕಡಿಮೆ ಮಾತಿನ ಮೂಲಕವೇ ಜೀವನವನ್ನು ಅರ್ಥ ಮಾಡಿಸುತ್ತಿದ್ದರು ಎಂದು ಸ್ಮರಿಸಿದರು.

ಅಶ್ವತ್ಥ್‌ ಅವರು ತಮಗೆ ನಿಗದಿಯಾಗಿದ್ದ ಸಂಭಾವನೆನ್ನು ಮಾತ್ರ ಪಡೆಯುತ್ತಿದ್ದರು. ಹೆಚ್ಚು ಸಂಬಾವನೆ ನೀಡಿದರೆ ನಿರ್ಮಾಪಕರಿಗೆ ವಾಪಸ್‌ ಮಾಡುತ್ತಿದ್ದರು. ಶೂಟಿಂಗ್‌ ಬಿಡುವಿನ ವೇಳೆ ಮುಂದಿನ ದೃಶ್ಯಕ್ಕೆ ಅಣಿಯಾಗುತ್ತಿದ್ದರು. ಸಂಭಾಷಣೆಯನ್ನು ಯಾವ ರೀತಿ ಹೇಳಬಹುದು ಎಂಬುದನ್ನು ನಂತರ ತಿಳಿಸಿಕೊಡುತ್ತಿದ್ದರು ಎಂದು ಅವರು ಹೇಳಿದರು.

ಹಿರಿಯ ನಟ ದೊಡ್ಡಣ್ಣ ಮಾತನಾಡಿ, ಮನುಷ್ಯನಿಗೆ ಅಹಂಕಾರ ಇರಬಾರದು. ಅಶ್ವತ್ಥ್‌ ಅವರು ಶಿಸ್ತಿನ ಸಿಪಾಯಿಯಾಗಿದ್ದರು ಎಂದರು.

ಅಶ್ವತ್ಥ್‌ ಅವರು ಮನಸ್ಸು ಮಾಡಿದ್ದರೆ ಬೇರೆ ಬೇರೆ ಭಾಷೆಗಳಲ್ಲೂ ಕೂಡ ನಟಿಸಬಹುದಿತ್ತು. ಆದರೆ ಕನ್ನಡದ ಮೇಲೆ ಅವರಿಗೆ ಅಪಾರವಾದ ಅಭಿಮಾನವಿತ್ತು. ಪ್ರೀತಿ ಇತ್ತು. ಕನ್ನಡದ ಕಿಮ್ಮತ್ತೇ ಅಂಥದ್ದು ಎಂದರು.

ಹಿರಿಯ ನಟಿ ಗಿರಿಜಾ ಲೋಕೇಶ್‌ ಮಾತನಾಡಿ, ನಾನು ಅಶ್ವತ್ಥ್‌ ಅವರೊಂದಿಗೆ ಮಣ್ಣಿನ ದೋಣಿ, ಮೋಡದ ಮರೆಯಲ್ಲಿ, ಕನಸಿನ ರಾಣಿ ಮೊದಲಾದ ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಪೋಷಕ ಪಾತ್ರದಲ್ಲಿ ಅವರನ್ನು ಮೀರಿಸುವ ಮತ್ತೊಬ್ಬ ಕಲಾವಿದ ಇಲ್ಲ ಎಂದರು.

ಹೊಡಿ, ಬಡಿ, ಕಡಿ ಎಂಬ ಡೈಲಾಗ್‌ಗಳಿರುವ ಈ ಕಾಲದಲ್ಲಿ ಅಶ್ವತ್ಥ್ ಅವರ ಜೀವನ ಮುಂದಿನ ಪೀಳಿಗೆಗೆ ಪಾಠವಾಗುತ್ತದೆ ಎಂದು ಅವರು ಹೇಳಿದರು.

ಮಾಜಿ ಸಚಿವ ಹಾಗೂ ನಟ ಕುಮಾರ್‌ ಬಂಗಾರಪ್ಪ ಅವರು ಮಾತನಾಡಿ, ಡಾ.ರಾಜ್‌ಕುಮಾರ್‌, ಕೆ,.ಎಸ್. ಅಶ್ವತ್ಥ್‌, ಟಿ.ಎನ್‌. ಬಾಲಕೃಷ್ಣ, ದೊಡ್ಡಣ್ಣ ಮೊದಲಾದ ಕಲಾವಿದರು ಒಂದೆಡೆ ಸೇರಿದಾಗ ನೋಡುವುದೇ ಚೆಂದ. ನಮ್ಮ ಮನೆಯಲ್ಲಿ ಒಮ್ಮೆ ಸೇರಿದಾಗ ಅಶ್ವತ್ಥ್‌ ಅವರ ಸಸ್ಯಹಾರಿ, ಡಾ.ರಾಜ್‌ಕುಮಾರ್‌ ಅವರು ಮಾಂಸ ಆಹಾರ ಪ್ರಿಯರು. ಹೇಗೆ ಅಡುಗೆ ಸಿದ್ಧಪಡಿಸುವುದು ಎಂದು ನಮ್ಮ ತಾಯಿ ಪರದಾಡುತ್ತಿದ್ದಾಗ ಅಶ್ವತ್ಥ್‌ ಅವರೇ ರಾಜ್‌ಕುಮಾರ್‌ ಅವರಿಗೆ ಕೋಳಿ ಸಾರು- ಕಜ್ಜಾಯ ಬಲುಪ್ರಿಯ. ಅದನ್ನು ಮಾಡಿ ಬಡಿಸಿ. ನಮ್ಮದೇನು ಆಕ್ಷೇಪವಿಲ್ಲ ಎಂದು ಹೇಳಿದ್ದರು ಎಂದು ನೆನಪಿಸಿಕೊಂಡರು.

ಹಿರಿಯ ಪತ್ರಕರ್ತ ರಂಗನಾಥ್‌ ಭಾರದ್ವಾಜ್‌ ಮಾತನಾಡಿ, ಬಿ.ಆರ್‌. ಪಂತಲು ಅವರು ಸ್ಕೂಲ್‌ ಮಾಸ್ಟರ್‌ಗಿಂದ ಕೆ.ಎಸ್. ಅಶ್ವತ್ಥ್‌ ಅವರು ನಾಗರಹಾವು ಚಿತ್ರದಲ್ಲಿ ಮಾಡಿದ ಚಾಮಯ್ಯ ಮೇಷ್ಟ್ರು ಪಾತ್ರವೇ ಜನಮಾನಸದಲ್ಲಿ ಉಳಿದಿದೆ ಎಂದರು.

ಕೆ.ಎಸ್. ಅಶ್ವತ್ಥ್‌ ಅವರ ಜನ್ಮ ಶತಾಬ್ದಿ ಅಂಗವಾಗಿ ಹಿರಿಯ ಚಲನಚಿತ್ರ ಪತ್ರಕರ್ತ ಗಣೇಶ ಕಾಸರಗೋಡು ಅವರನ್ನು ಸನ್ಮಾನಿಸಲಾಯಿತು. ಅವರು ಅಶ್ವತ್ಥ್‌ ಅವರೊಂದಿಗಿನ ತಮ್ಮ ಒಡನಾಟ ಮೆಲಕು ಹಾಕಿದರು.

ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಮಾತನಾಡಿದರು. ಮಂಡ್ಯ ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ಜಿ.ವಿ. ನಾಗರಾಜು, ಕಲಾವಿದ ಮಂಡ್ಯ ಸತ್ಯ, ಡಾ.ವೈ.ಡಿ. ರಾಜಣ್ಣ, ಎನ್‌. ಬೆಟ್ಟೇಗೌಡ, ಸುಧಾ ಶಂಕರ್‌ ಅಶ್ವತ್ಥ್‌ ಸೇರಿದಂತೆ ಕುಟುಂಬದ ಎಲ್ಲಾ ಸದಸ್ಯರು ಇದ್ದರು. ಅಶ್ವತ್ಥ್‌ ಅವರ ಪುತ್ರ ಶಂಕರ್‌ ಅಶ್ವತ್ಥ್‌ ಅವರು ಆಗಾಗ್ಗೆ ತಮ್ಮ ತಂದೆಯ ಜೀವನದ ಕೆಲವು ಘಟನೆಗಳನ್ನು ಸಭಿಕರೊಂದಿಗೆ ಹಂಚಿಕೊಂಡರು. ಕದಂಬ ರಂಗವೇದಿಕೆ ಅಧ್ಯಕ್ಷ ರಾಜಶೇಖರ ಕದಂಬ ಸ್ವಾಗತಿಸಿದರು. ಕರ್ನಾಟಕ ಸುಗಮ ಸಂಗೀತ ಪರಿಷತ್‌ ಜಿಲ್ಲಾಧ್ಯಕ್ಷ ನಾಗರಾಜ ವಿ. ಬೈರಿ ಪ್ರಾಸ್ತಾವಿಕ ಭಾಷಣ ಮಾಡಿದರು. ಸುಮಾ ರಾಜಕುಮಾರ್‌ ಕಾರ್ಯಕ್ರಮ ನಿರೂಪಿಸಿದರು. ಕರ್ನಾಟಕ ಸುಗಮ ಸಂಗೀತ ಪರಿಷತ್‌ ಗಾಯಕ- ಗಾಯಕಿಯರು ಗೀತನಮನ ಸಲ್ಲಿಸಿದರು.