ವಚನ ಸಾಹಿತ್ಯವನ್ನು ಸಂರಕ್ಷಿಸಿದ ಕೀರ್ತಿ ಫ.ಗು ಹಳಕಟ್ಟಿಗೆ ಸಲ್ಲುತ್ತದೆ

| Published : Jul 09 2024, 12:53 AM IST

ವಚನ ಸಾಹಿತ್ಯವನ್ನು ಸಂರಕ್ಷಿಸಿದ ಕೀರ್ತಿ ಫ.ಗು ಹಳಕಟ್ಟಿಗೆ ಸಲ್ಲುತ್ತದೆ
Share this Article
  • FB
  • TW
  • Linkdin
  • Email

ಸಾರಾಂಶ

ವಚನ ಸಾಹಿತ್ಯವನ್ನು ಸಂರಕ್ಷಿಸಿ ವಿಶ್ವಕ್ಕೆ ಕೊಡುಗೆಯಾಗಿಕೊಟ್ಟ ಕೀರ್ತಿ ಡಾ.ಫ.ಗು ಹಳಕಟ್ಟಿ ಅವರಿಗೆ ಸಲ್ಲುತ್ತದೆ

ಕನ್ನಡಪ್ರಭ ವಾರ್ತೆ ಮೈಸೂರು

ವಚನ ಸಾಹಿತ್ಯವನ್ನು ಸಂರಕ್ಷಿಸಿ ವಿಶ್ವಕ್ಕೆ ಕೊಡುಗೆಯಾಗಿಕೊಟ್ಟ ಕೀರ್ತಿ ಡಾ.ಫ.ಗು ಹಳಕಟ್ಟಿ ಅವರಿಗೆ ಸಲ್ಲುತ್ತದೆ ಎಂದು ಚಾಮರಾಜನಗರ ಜಾಗತಿಕ ಲಿಂಗಾಯಿತ ಮಹಾಸಭಾದ ಕೋಶಾಧ್ಯಕ್ಷ ಎನ್. ಶಿವಪ್ರಸಾದ್ ಹೇಳಿದರು.

ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಡಾ.ಫ.ಗು. ಹಳಕಟ್ಟಿ ಅವರ ಜಯಂತಿ ಅಂಗವಾಗಿ ಚಾಮರಾಜನಗರ ಜಿಲ್ಲೆ ಸಂತೇಮರಹಳ್ಳಿ ಪಕ್ಕದ ಯಡಿಯೂರು ಗ್ರಾಮದಲ್ಲಿ ನಡೆದ ವಚನ ಗ್ರಾಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಚನ ಸಾಹಿತ್ಯದ ತಾಡೋಲೆಗಳನ್ನು ಅವರು ಕೇರಿಗಳಲ್ಲಿ ತಡಕಾಡಿ, ಊರುಗಳಲ್ಲಿ ಹುಡುಕಾಡಿ, ವಿವಿಧ ಸ್ಥಳಗಳಲ್ಲಿ ಸಂಶೋಧನೆ ಮಾಡಿ, ಅನೇಕ ಆಲಯಗಳಲ್ಲಿ ಅನ್ವೇಷಣೆಗೈದು ಸಂಗ್ರಹಿಸಿ ತಮ್ಮ ಸ್ವಂತ ಮನೆ ಮಾರಿ ಹಿತಚಿಂತಕ ಎಂಬ ಮುದ್ರಣಾಲಯ ಸ್ಥಾಪಿಸಿ 250 ಕ್ಕೂ ಹೆಚ್ಚು ವಚನಕಾರರ ವಚನ ಸಾಹಿತ್ಯವನ್ನು ಬೆಳಕಿಗೆ ತಂದು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು ಎಂದು ವಿವರಿಸಿದರು.

ಜಾಗತಿಕ ಲಿಂಗಾಯಿತ ಮಹಾಸಭಾದ ಅಧ್ಯಕ್ಷ ಜಿ. ಗುರುಸ್ವಾಮಿ ಕಾಳನಹುಂಡಿ ಮಾತನಾಡಿ, ಡಾ.ಫ.ಗು ಹಳಕಟ್ಟಿ ಅವರು 19ನೇ ಶತಮಾನದಲ್ಲಿ ವಚನ ಸಾಹಿತ್ಯದ ತಾಡೋಲೆಗಳಿಗಾಗಿ ಊರು, ಊರು ಮತ್ತು ಕೇರಿ ಕೇರಿ ಅಲೆದರು. ಆದರೆ, 21ನೇ ಶತಮಾನದಲ್ಲಿ ವಚನ ಕುಮಾರಸ್ವಾಮಿ ಮತ್ತು ರೂಪ ಕುಮಾರಸ್ವಾಮಿ ಅವರು ಊರು, ಊರು ಮತ್ತು ಕೇರಿಕೇರಿ ಅಲೆದು ವಚನ ಸಾಹಿತ್ಯವನ್ನು ಸಂರಕ್ಷಣೆ ಮಾಡುವ ಕಾಯಕ ಮಾಡುವುದನ್ನು ನೋಡುತ್ತಿದ್ದರೆ ಅಭಿಮಾನ ತುಂಬಿ ಬರುತ್ತದೆ ಎಂದು ಶ್ಲಾಘಿಸಿದರು.

ನಂತರ ಯಡಿಯೂರು ಗ್ರಾಮದ 200 ಹೆಚ್ಚು ಮನೆಗಳಿಗೆ ವಚನ ಪುಸ್ತಕವನ್ನು ಉಚಿತವಾಗಿ ಹಂಚಿ ವಚನ ಗ್ರಾಮವನ್ನಾಗಿ ಘೋಷಣೆ ಮಾಡಲಾಯಿತು.

ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕರಾದ ವಚನ ಕುಮಾರಸ್ವಾಮಿ, ರೂಪಕುಮಾರಸ್ವಾಮಿ, ಮೈಸೂರು ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ, ಕೇಂದ್ರೀಯ ಸಂಚಾಲಕ ವಿ. ಲಿಂಗಣ್ಣ, ಉಪಾಧ್ಯಕ್ಷ ಶಿವಪುರ ಉಮಾಪತಿ, ಗೌಡಿಕೆ ಎನ್. ಮಹದೇವಸ್ವಾಮಿ, ಚಾಮರಾಜನಗರದ ಬಸವೇಶ್ವರ ಪತ್ತಿನ ಸಹಕಾರ ಸಂಘದ ಕಾರ್ಯನಿರ್ವಾಹಕ ಅಧಿಕಾರಿ ವೈ.ಎಸ್ ನಂಜುಂಡಸ್ವಾಮಿ, ಸಂಚಾಲಕ ರುದ್ರಪ್ಪ ಇದ್ದರು.