ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಚಾಮರಾಜನಗರ ವಿಶ್ವ ವಿದ್ಯಾನಿಲಯ ಜಿಲ್ಲೆಯಲ್ಲಿಯೇ ಉಳಿಯಬೇಕು. ಗಿರಿಜನ, ಗುಡ್ಡುಗಾಡು ಪ್ರದೇಶದ ಮಕ್ಕಳು, ದೀನದಲಿತರು ಹಾಗೂ ಬಡವರ ಉನ್ನತ ಶಿಕ್ಷಣಕ್ಕಾಗಿ ಚಾಮರಾಜನಗರ ವಿವಿ ಅತ್ಯವಶ್ಯಕವಾಗಿದೆ. ಅಲ್ಲದೇ ಜಿಲ್ಲೆಯ ಶೈಕ್ಷಣಿಕ ಪ್ರಗತಿಗೆ ವಿಶ್ವ ವಿದ್ಯಾಲಯ ಪೂರಕವಾಗಿದ್ದು, ಯಾವುದೇ ಕಾರಣಕ್ಕೂ ಜಿಲ್ಲೆಯಿಂದ ಮೈಸೂರು ವಿವಿಗೆ ವಿಲೀನವಾಗಲು ನಾವು ಬಿಡುವುದಿಲ್ಲ. ಇದಕ್ಕಾಗಿ ಎಲ್ಲರು ಒಗ್ಗಟ್ಟಿನಿಂದ ಹೋರಾಟ ರೂಪಿಸೋಣ ಎಂದು ತೀರ್ಮಾನಕೈಗೊಳ್ಳಲಾಯಿತು.ನಗರದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ದಲಿತ ಮಹಾಸಭಾದ ರಾಜ್ಯ ಉಪಾಧ್ಯಕ್ಷ ವೆಂಕಟರಮಣಸ್ವಾಮಿ (ಪಾಪು) ನೇತೃತ್ವದಲ್ಲಿ ಚಾಮರಾಜನಗರ ವಿಶ್ವ ವಿದ್ಯಾಲಯ ಉಳಿಸುವ ಕುರಿತು ನಡೆದ ಚರ್ಚೆ ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರು ಮಾತನಾಡಿದರು.
ಜಿಲ್ಲೆಯ ಶೈಕ್ಷಣಿಕ ಪ್ರಗತಿಗಾಗಿ ಚಾಮರಾಜನಗರ ವಿಶ್ವವಿದ್ಯಾನಿಲಯವನ್ನು ಜಿಲ್ಲೆಯಲ್ಲಿಯೇ ಮುಂದುವರಿಸಬೇಕು ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ರಕ್ತ ಕೊಟ್ಟೇವು ವಿವಿ ಬಿಡುವುದಿಲ್ಲ ಎಂಬ ಹೋರಾಟಕ್ಕು ಸಿದ್ದರಾಗೋಣ ಎಂದರು.ದಲಿತ ಮಹಾಸಭಾದ ರಾಜ್ಯ ಉಪಾಧ್ಯಕ್ಷ ವೆಂಕಟರಮಣಸ್ವಾಮಿ ( ಪಾಪು) ಮಾತನಾಡಿ, ಜಿಲ್ಲೆಯಲ್ಲಿ ವಿಶ್ವ ವಿದ್ಯಾನಿಲಯ ಆರಂಭಗೊಂಡಿರುವುದು ನಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಗೆ ನಾಂದಿಯಾಗಿದೆ. ಇದರಿಂದ ಬಡವರು ಹಾಗೂ ದೀನದಲಿತರ ಮಕ್ಕಳು ಉನ್ನತ ಶಿಕ್ಷಣ ಪಡೆಯಲು ಸಹಕಾರಿಯಾಗುತ್ತದೆ. ಅದರಲ್ಲಿಯೂ ನಮ್ಮ ಹೆಣ್ಣು ಮಕ್ಕಳು ನಮ್ಮ ಜಿಲ್ಲೆಯಲ್ಲಿಯೇ ಉನ್ನತ ಶಿಕ್ಷಣ ಪಡೆಯುವ ವ್ಯವಸ್ಥೆ ಇದಾಗಿದೆ. ಇದರಿಂದ ಜಿಲ್ಲೆಯ ಶೈಕ್ಷಣಿಕ ಪ್ರಗತಿ, ಗುಣಮಟ್ಟ ಹೆಚ್ಚುತ್ತದೆ. ಇಂತಹ ವಿಶ್ವವಿದ್ಯಾನಿಲಯವನ್ನು ರದ್ದು ಮಾಡಿ, ಮೈಸೂರಿಗೆ ವರ್ಗಾವಣೆ ಮಾಡುವುದು ಜಿಲ್ಲೆಯ ಜನರಿಗೆ ಮಾಡಿದ ಅನ್ಯಾಯವಾಗಿದೆ ಎಂದು ಸರ್ಕಾರದ ನಡೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಚಾ.ನಗರ ಜಿಲ್ಲೆಯ ಬಗ್ಗೆ ವಿಶೇಷ ಕಾಳಜಿ ಇದೆ. ಅವರ ಅರಿವಿಗೆ ಬರದಂತೆ ಇಂತಹ ನಿರ್ಧಾರವಾಗಿರಬಹುದು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಜಿಲ್ಲೆಯ ಬಗ್ಗೆ ಅರಿವಿನ ಕೊರತೆ ಇದೆ. ವಿಶ್ವ ವಿದ್ಯಾಲಯವನ್ನು ಹಣಕಾಸಿನ ನೆಪ ಹೇಳಿಕೊಂಡು ಮುಚ್ಚುವುದು ನಾಚಿಗೇಡಿನ ಸಂಗತಿಯಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು ಇದರ ವಿರುದ್ದ ಧ್ವನಿ ಎತ್ತಬೇಕು. ಜಿಲ್ಲೆಯ ವಿದ್ಯಾರ್ಥಿಗಳ ಪರವಾಗಿ ನಿಲ್ಲಬೇಕು. ಚಾ.ನಗರ ವಿವಿ ಮುಚ್ಚುವುದೇ ಆದರೆ ರಕ್ತಪಾತವಾಗುತ್ತದೆ ಎಂಬ ಎಚ್ಚರಿಕೆಯನ್ನು ಸರ್ಕಾರಕ್ಕೆ ನೀಡಿದರು. ಇದರ ವಿರುದ್ದ ಜಿಲ್ಲೆಯ ಎಲ್ಲಾ ವರ್ಗದ ಜನರು ಹಾಗೂ ವಿದ್ಯಾರ್ಥಿಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ನಿಯೋಗ ತೆರಳಿ ವಿವಿಯನ್ನು ಮುಂದುವರಿಸುವಂತೆ ಒತ್ತಾಯ ಮಾಡೋಣ ಎಂದು ಪಾಪು ತಿಳಿಸಿದರು.ರೈತ ಮುಖಂಡ ಹೆಗ್ಗವಾಡಿಪುರ ಮಹೇಶ್‌ಕುಮಾರ್, ಚಿನ್ನಸ್ವಾಮಿಗೌಂಡರ್ ಜಿಲ್ಲಾ ಸಂಚಾಲಕ ಸಿ.ಎಂ.ಶಿವಣ್ಣ, ಕನ್ನಡಪರ ಹೋರಾಟಗಾರ ಚಾ.ರಂ. ಶ್ರೀನಿವಾಸಗೌಡ, ರಂಗಸ್ವಾಮಿ ಕಾಗಲವಾಡಿ, ಹೆಗ್ಗವಾಡಿಪುರ ಮಹೇಶಕುಮಾರ್, ಚಿನ್ನಸ್ವಾಮಿ ಗೌಂಡರ್, ಡಾ. ಪರಮೇಶ್ವರಪ್ಪ, ಆರ್. ಪುಟ್ಟ ಮಲ್ಲಪ್ಪ, ಕಾಳನಹುಂಡಿ ಗುರುಸ್ವಾಮಿ, ರೋಟರಿ ನಾಗರಾಜು, ಪರಮಶಿವಯ್ಯ, ಎಂ.ಎಸ್. ಮಾದಯ್ಯ, ಎಲ್. ಸುರೇಶ್, ಸೋಮಶೇಖರ್ ಬಿಸಲ್ವಾಡಿ, ಎಸ್ ಡಿಪಿಎ ಮಹೇಶ್, ರಂಗಸ್ವಾಮಿ, ಸೋಮವಾರಪೇಟೆ ಮಹದೇವ್, ಚಾ.ರಂ. ಶ್ರೀ ನಿವಾಸಗೌಡ, ಪದ್ಮಾಕ್ಷಿ, ಅರಕಲವಾಡಿ ನಾಗೇಂದ್ರ ಸಿ.ಎಂ. ಶಿವಣ್ಣ, ಸಿದ್ದಯ್ಯನಪುರರಮೇಶ, ಯ. ನಾಗರಾಜು, ಚಿಕ್ಕಹೊಳೆ ಕುಮಾರ್ , ಸೈಯದ್ ಅರೀಪ್ , ಗುರುರಾಜ್ ಇತರರು ಭಾಗವಹಿಸಿದ್ದರು.