ಸಾರಾಂಶ
ಚಾಮರಾಜನಗರ: ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ಚಾಮರಾಜನಗರದ ರೈಲು ನಿಲ್ದಾಣ ೨೪.೫೮ ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿಗೊಳ್ಳಲಿದೆ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರು ತಿಳಿಸಿದರು. ವೀಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ೫೫೪ ರೈಲು ನಿಲ್ದಾಣಗಳ ಅಭಿವೃದ್ದಿ ಮತ್ತು ೧೫೦೦ ರಸ್ತೆ ಮೇಲ್ಸೇತುವೆ, ಕೆಳ ಸೇತುವೆಗಳ ಶಂಕುಸ್ಥಾಪನೆ, ಉದ್ಘಾಟನೆಯನ್ನು ವರ್ಚುವೆಲ್ ಮೂಲಕ ನೆರವೇರಿಸಿದ ಬಳಿಕ ನಗರದ ರೈಲು ನಿಲ್ದಾಣದಲ್ಲಿ ಸೋಮವಾರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರೈಲು ನಿಲ್ದಾಣಗಳ ಆಧುನಿಕರಣ ಅಭಿವೃದ್ದಿಯಿಂದ ಈ ಭಾಗದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ದೇಶದ ವಿವಿಧ ರೈಲು ನಿಲ್ದಾಣಗಳ ಅಭಿವೃದ್ದಿ ಜೊತೆಗೆ ಚಾಮರಾಜನಗರ ರೈಲು ನಿಲ್ದಾಣವನ್ನು ಅಭಿವೃದ್ದಿ ಪಡಿಸಲು ಏಕಕಾಲಕ್ಕೆ ಚಾಲನೆ ದೊರೆತಿದೆ. ರೈಲು ನಿಲ್ದಾಣದಲ್ಲಿ ಇದರಿಂದ ಹೆಚ್ಚಿನ ಸೌಲಭ್ಯಗಳು ಲಭ್ಯವಾಗಲಿವೆ ಎಂದರು. ಮೈಸೂರಿನಿಂದ ಚಾಮರಾಜನಗರದವರೆಗೆ ಮೀಟರ್ ಗೇಜ್ ಇದ್ದುದ್ದನ್ನು ಬ್ರಾಡ್‌ಗೇಜ್ ಮಾಡಲಾಯಿತು. ಕೆಲವು ರೈಲುಗಳ ವಿಸ್ತರಣೆಯು ಆಗಿದೆ. ಜೊತೆಗೆ ಆಧುನಿಕವಾಗಿ ಅಭಿವೃದ್ದಿ ಪಡಿಸಲು ಪ್ರಧಾನಿ ಶಂಕು ಸ್ಥಾಪನೆ ನೆರವೇರಿಸಿದ್ದಾರೆ. ಈ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ತಿಳಿಸಿದರು. ರೈಲ್ವೆ ಕ್ಷೇತ್ರದಲ್ಲಿ ಏನೇನು ಅಭಿವೃದ್ದಿಯಾಗಿದೆ. ಪ್ರಸ್ತುತ ಸಂದರ್ಭಕ್ಕೆ ತಕ್ಕಂತೆ ಯಾವ ಬಗೆಯ ಅಭಿವೃದ್ದಿ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂಬುದನ್ನು ಕಾರ್ಯಕ್ರಮದಲ್ಲಿ ವಿವರಿಸಲಾಗಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ನಗರದ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಸಮಾರಂಭದಲ್ಲಿ ಮಾಜಿ ಶಾಸಕ ಎನ್. ಮಹೇಶ್, ಎಸ್. ಬಾಲರಾಜ್, ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ನೈಋತ್ಯ ರೈಲ್ವೆ ಮೈಸೂರು ವಿಭಾಗದ ಹೆಚ್ಚುವರಿ ಮಂಡಲ ಪ್ರಬಂಧಕ ಇ. ವಿಜಯಾ, ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿ ಚಂದ್ರಶೇಖರ್, ರೈಲ್ವೆ ಇಲಾಖೆಯ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.