ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಪ್ರವಾಸೋದ್ಯಮ ಮಂತ್ರಾಲಯ ಭಾರತ ಸರ್ಕಾರ, ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಸಹಯೋಗದೊಂದಿಗೆ ಜರುಗಿದ ಕಾರ್ಯಕ್ರಮದಲ್ಲಿ ಇಂದು ಶ್ರೀ ಚಾಮುಂಡೇಶ್ವರಿ ದೇವಿ ದೇವಸ್ಥಾನ ಅಭಿವೃದ್ಧಿ, ಇಕೋಲಾಜಿಕಲ್ ಎಕ್ಸ್ಪೀರಿಯನ್ಸ್ ಜೋನ್, ಟಾಂಗಾ ರೈಡ್ ಹೆರಿಟೇಜ್ ಎಕ್ಸ್ ಪೀರಿಯನ್ಸ್ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮೈಸೂರಿನ ಚಾಮರಾಜೇಂದ್ರ ಮೃಗಾಲಯದ ಆಂಪಿಥಿಯೇಟರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ವರ್ಚುವಲ್ ಮೂಲಕ ಗುರುವಾರ ಶಂಕುಸ್ಥಾಪನೆ ನೆರವೇರಿಸಿದರು.ಈ ವೇಳೆ ಸಂಸದ ಪ್ರತಾಪ್ ಸಿಂಹ ಮಾತನಾಡಿ, 45.70 ಕೋಟಿ ರೂ. ವೆಚ್ಚದ ಭೂಮಿ ಪೂಜೆ ಮತ್ತು ಶಂಕುಸ್ಥಾಪನೆ ನೆರವೇರಿಸಲಾಗಿದ್ದು, ಕೇಂದ್ರ ಸರ್ಕಾರದ ಪ್ರಸಾದ್ ಯೋಜನೆ ಮತ್ತು ಸ್ವದೇಶ್ ದರ್ಶನ ಯೋಜನೆ ಅಡಿ ಮೈಸೂರಿನ ಚಾಮುಂಡಿಬೆಟ್ಟ ಅಭಿವೃದ್ಧಿಗೆ 45.70 ಕೋಟಿ ರೂ., ದಸರಾ ವಸ್ತುಪ್ರದರ್ಶನ ಹಾಗೂ ಮೈಸೂರು ಮೃಗಾಲಯದ ಅಭಿವೃದ್ಧಿಗೆ 80 ಕೋಟಿ ರೂ. ಅನುದಾನವನ್ನ ಪ್ರಧಾನಿ ಮೋದಿ ಅವರು ಕೊಟ್ಟಿದ್ದಾರೆ. ಈ ಎಲ್ಲಾ ಯೋಜನೆಗಳಿಂದ ಮೈಸೂರು ಪ್ರವಾಸೋದ್ಯಮದ ಅಭಿವೃದ್ಧಿಯಲ್ಲಿ ಶ್ರೀಮಂತಿಕೆ ಕಾಣಬಹುದು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಮಾತನಾಡಿ, ಬಸ್ ನಿಲ್ದಾಣ, ಆಟೋ ನಿಲ್ದಾಣಗಳಂತೆ ಟಾಂಗಾಗಳಿಗೆ ಮೈಸೂರಿನಲ್ಲಿ 2 ರಿಂದ 3 ಕಡೆ ಟಾಂಗಾ ನಿಲ್ದಾಣಗಳನ್ನು ಸ್ಥಾಪಿಸಲಾಗುವುದು. ಮೈಸೂರನ್ನು ವೀಕ್ಷಿಸಲು ಬರುವ ಪ್ರವಾಸಿಗರು ಟಾಂಗಾ ಸವಾರಿಯನ್ನು ಬಯಸುತ್ತಾರೆ. ಅವರಿಗೆ ಅನುಕೂಲವಾಗುವಂತೆ ಸವಾರಿಯ ಶುಲ್ಕವನ್ನು ನಿಗಧಿಪಡಿಸಿ, ಯಾವುದೇ ಪ್ರಯಾಣಿಕರು, ಸಾರ್ವಜನಿಕರು, ಪ್ರವಾಸಿಗರು ಹಾಗೂ ಟ್ರಾಫಿಕ್ ಗೆ ತೊಂದರೆಯಾಗದಂತೆ ಸವಾರಿಯ ಮಾರ್ಗವನ್ನು ನಿಯೋಜಿಸಲಾಗುತ್ತದೆ ಎಂದು ಹೇಳಿದರು.ಇಕೋಲಾಜಿಕಲ್ ಎಕ್ಸೀರಿಯನ್ಸ್ ಅಡಿಯಲ್ಲಿ ಮೃಗಾಲಯ ಮತ್ತು ಕಾರಂಜಿಕೆರೆ ನ್ಯಾಷನಲ್ ಮ್ಯೂಸಿಯಂ ನಡುವೆ ಸಂಪರ್ಕ ಕಲ್ಪಿಸಿ ಬಂದಂತಹ ಪ್ರವಾಸಿಗರು ಒಮ್ಮೆಲೆ ಎರಡು ಸ್ಥಳಗಳ ಪರಿಸರ ಅನುಭವವನ್ನು ಪಡೆಯುವಂತೆ ಮಾಡಲಾಗುತ್ತದೆ. ಮೃಗಾಲಯದ ಒಳಗಡೆ ಜಿಪ್ ವಾಕ್ ಇನ್ನಿತರ ಆಟಗಳು ಹಾಗೂ ಸುಂದರ ಸ್ಥಳಗಳನ್ನು ನಿರ್ಮಿಸಿ ಪ್ರವಾಸಿಗರಿಗೆ ಅದ್ಬುತ ಅನುಭವ ನೀಡುವಂತೆ ಮಾಡಲಾಗುತ್ತದೆ ಎಂದರು.
ಕಳೆದ ರಾಜ್ಯ ಹಾಗೂ ಕೇಂದ್ರ ಬಜೆಟ್ ನಿಂದ ಪ್ರಸಾದ್ ಯೋಜನೆಗೆ ಬಂದಿರುವ ಅನುದಾನದಿಂದ ಚಾಮುಂಡಿಬೆಟ್ಟದ ಅಭಿವೃದ್ಧಿಗೆ ಜಿಲ್ಲಾ ಮಟ್ಟದ ಸಮಿತಿಯನ್ನು ನೇಮಿಸಲಾಗುತ್ತದೆ. ರಾಜ್ಯ ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ವತಿಯಿಂದ ಜಿಲ್ಲೆಯಲ್ಲಿನ ಪ್ರತಿಯೊಂದು ಪ್ರವಾಸಿ ತಾಣಗಳಿಗೂ ಪ್ರತ್ಯೇಕ ಸಮಿತಿಯನ್ನು ರಚಿಸಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಿ ವರದಿ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.ಮೈಸೂರಿಗೆ ಬಂದವರಿಗೆ ಸಂಜೆ ಸಮಯದಲ್ಲಿ ವರ್ಣರಂಜಿತ ಅರಮನೆಯನ್ನು ನೋಡಬಹುದಾಗಿದ್ದು, ವಿದೇಶ, ನೆರೆಯ ರಾಜ್ಯ ಹಾಗೂ ಸ್ಥಳೀಯ ಪ್ರವಾಸಿಗರಿಗೆ ಯಾವುದೇ ರೀತಿಯ ಬೇಜಾರಿಲ್ಲದೆ ಬಹಳ ಸಂತೋಷದಿಂದ ಹಿಂತಿರುಗುವಂತೆ ಮಾಡಲು ಪ್ರತಿಯೊಂದು ಸ್ಥಳಗಳನ್ನು ವೈವಿದ್ಯಮಯವಾಗಿ ಮಾಡುವ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.
ಶಾಸಕ ಟಿ.ಎಸ್. ಶ್ರೀವತ್ಸ, ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಪ್ರವಾಸೋದ್ಯಮ ಇಲಾಖೆಯ ಜಂಟಿನಿರ್ದೇಶಕಿ ಎಂ.ಕೆ. ಸವಿತಾ, ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಮಹೇಶ್ ಕುಮಾರ್ ಮೊದಲಾದವರು ಇದ್ದರು.